ರಾಜ್ಯಕ್ಕೆ ಆರ್ಥಿಕ ಹೊರೆ ಹೆಚ್ಚಾಗಿದೆ
ಹೊಸಪೇಟೆ: ರಾಜ್ಯ ಸರ್ಕಾರಕ್ಕೆ ಆರ್ಥಿಕ ಹೊರೆ ಹೆಚ್ಚಾಗಿದೆ, ಬಿಜೆಪಿ ಸರ್ಕಾರ ಮಾಡಿದ ಸಾಲವನ್ನು ಕಾಂಗ್ರೆಸ್ ಸರ್ಕಾರ ತೀರಿಸುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಹಂಪಿ ಉತ್ಸವದ ಪೂರ್ವಭಾವಿ ಸಭೆಯ ನಂತರ ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಸರ್ಕಾರ ತರಾತುರಿಯಲ್ಲಿ ಹಲವು ಯೋಜನೆಗಳನ್ನು ಘೋಷಣೆ ಮಾಡಿ ಹೋಗಿದೆ. ಘೋಷಿಸಿದ ಯೋಜನೆಗಳಿಗೆ ಬಜೆಟ್ನಲ್ಲಿ ಹಣವೇ ಇಲ್ಲ. ರೈತರ ಸಾಲಮನ್ನಾ ಯೋಜನೆ, ವಸತಿ ಯೋಜನೆ ಸೇರಿದಂತೆ ಇತರೆ ಯೋಜನೆಗಳಿಗೆ ಸರಿಯಾದ ಹಣ ಬಿಡುಗಡೆ ಮಾಡಿಲ್ಲ. ಈ ಯೋಜನೆಗಳಿಗೆ ಸಾವಿರಾರು ಕೋಟಿ ರು.ಗಳ ಹಣ ಬಾಕಿ ಇಟ್ಟು ಹೋಗಿದ್ದಾರೆ. ಬಿಜೆಪಿಯವರು ಮಾಡಿರುವ ಸಾಲವನ್ನು ನಾವು ತೀರಿಸಬೇಕಾಗಿದೆ. ಆ ಮೂಲಕ ರಾಜ್ಯಕ್ಕೆ ಆರ್ಥಿಕ ಹೊರ ಬೀಳಲಿದೆ ಎಂದು ಹೇಳಿದರು. ರಾಜ್ಯಪಾಲರ ಬಗ್ಗೆ ನಮಗೆ ಗೌರವವಿದೆ. ರಾಜ್ಯಪಾಲರ ಟೀಕೆ, ಟಿಪ್ಪಣೆಗಳನ್ನು ನಾವು ಗೌರವಿಸುತ್ತೇವೆ. ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಆಡಳಿತವನ್ನು ಪಾರದರ್ಶಕವಾಗಿ ನಡೆಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ. ರಾಜ್ಯಪಾಲರ ಬಗ್ಗೆ ನಾವು ಹೆಚ್ಚಿಗೆ ಮಾತನಾಡುವುದಿಲ್ಲ. ಅವರ ಬಗ್ಗೆ ನಮಗೆ ಅಪಾರವಾದ ಗೌರವವಿದೆ ಎಂದರು.
ತಲೆ ಬಾಗುತ್ತೇವೆ: ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮತದಾರ ನೀಡಿರುವ ತೀರ್ಪಿಗೆ ನಾವು ತಲೆಬಾಗುತ್ತೇವೆ. ನಾಲ್ಕು ರಾಜ್ಯಗಳಲ್ಲಿ ನಮ್ಮ ಅಪೇಕ್ಷೆಯಂತೆ ಫಲಿತಾಂಶ ಬಂದಿಲ್ಲ. ಈ ಚುನಾವಣೆಗೂ ಲೋಕಸಭಾ ಚುನಾವಣೆಗೂ ಸಂಬಂಧವಿಲ್ಲ. ಈ ಚುನಾವಣೆ ಬೇರೆ ಲೋಕಸಭಾ ಚುನಾವಣೆ ಬೇರೆ. ನಾಲ್ಕು ರಾಜ್ಯಗಳ ಚುನಾವಣೆ ಲೋಕಸಭಾ ಚುನಾವಣೆಗೆ ಸರಿಸಾಟಿ ಅಲ್ಲ. ಬೆಲೆ ಏರಿಕೆಯ ಪರಿಣಾಮ ಈ ಚುನಾವಣೆ ಮೇಲೆ ಬೀರಿದೆ. ಮತ್ತೆ 4-5 ತಿಂಗಳಿಗೆ ಲೋಕಸಭಾ ಚುನಾವಣೆ ಬರಲಿದೆ. ಮತದಾರ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ದೂರ ಉಳಿದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಕೈ ಹಿಡಿಯುತ್ತಾರೆ ಎನ್ನುವ ಭರವಸೆ ಇದೆ ಎಂದು ವಿಶ್ವಾಸವ್ಯಕ್ತಪಡಿಸಿದ ಅವರು, ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಬಿಜೆಪಿ ಗೆಲವು ಹೊರತು, ನರೇಂದ್ರ ಮೋದಿಯ ಗೆಲವು ಅಲ್ಲ. ಶಿವರಾಜ್ಸಿಂಗ್ ಚೌವ್ಹಾಣ, ಡಾ. ರಮಣ್ ಸಿಂಗ್, ವಸುಂಧರಾ ರಾಜೇ ಅವರಿಗೆ ಈ ಗೆಲವು ಸಲ್ಲುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೋಭಾ ಬೆಂಡಿಗೇರಿ, ಕಾಂಗ್ರೆಸ್ ಮುಖಂಡ ಅಬ್ದುಲ್ ವಹಾಬ್ ಇದ್ದರು.
--