ವಿಶ್ವಕ್ಕೆ ಕನ್ನಡ ತಲುಪಿಸುವ ಕೆಲಸವಾಗಲಿ: ಉಮಾಶ್ರೀ
ಹೊಸಪೇಟೆ: ಕನ್ನಡ ಭಾಷೆಯನ್ನು ವಿಶ್ವಕ್ಕೆ ತಲುಪಿಸುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಜತೆಗೆ ಸಂಘ, ಸಂಸ್ಥೆಗಳು ಮತ್ತು ಸಾರ್ವಜನಿಕರು ಕೈಜೋಡಿಸಿ ಕನ್ನಡವನ್ನು ಬೆಳೆಸುವ ಕಾರ್ಯವಾಗಲಿ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಹೇಳಿದರು.
ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ವೆಬ್‌ಸೆಟ್ ಅನಾವರಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ಮೊದಲು: ವೆಬ್‌ಸೆಟ್‌ನಲ್ಲಿ ಜಿಲ್ಲೆಯಲ್ಲಿ ನಡೆದಿರುವ 5 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇನಳದ ಸಂಪೂರ್ಣ ವಿವರ ಮತ್ತು ಫೋಟೋ, ಜಿಲ್ಲಾ ಸಮ್ಮೇಳನದ ವಿವರ ಮತ್ತು ಫೋಟೋ, ತಾಲೂಕು ಸಮ್ಮೇಳನ ಸೇರಿದಂತೆ ಇತರೆ ಸಾಹಿತ್ಯ ಪರಿಷತ್‌ನ ಕಾರ್ಯಕ್ರಮಗಳ ವಿವರ ಸೇರಿದಂತೆ ಜಿಲ್ಲೆಯ ಸಾಹಿತಿಗಳ, ಅವರ ಪುಸ್ತಕಗಳ ಪರಿಚಯ, ಸಂಸ್ಕೃತಿ, ಸಾಹಿತಿಗಳಿಗೆ ಬಂದ ಮತ್ತು ಪುಸ್ತಕಗಳಿಗೆ ಬಂದ ಪ್ರಶಸ್ತಿಗಳ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ರಾಜ್ಯದ ಬೇರೆ ಯಾವ ಜಿಲ್ಲೆಯಲ್ಲಿಯೂ ಜಿಲ್ಲಾ ಮಟ್ಟದ ಕಸಾಪ ವೆಬ್‌ಸೆಟ್‌ನ್ನು ಸಿದ್ಧಪಡಿಸಿಲ್ಲ. ಬಳ್ಳಾರಿ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಕಸಾಪ ವೆಬ್‌ಸೆಟ್ ಸಿದ್ಧಗೊಂಡಿರುವುದು ಶ್ಲಾಘನೀಯ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಸಿರಿಗೇರಿ ಎರ್ರಿಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರೌಢದೇವರಾಯ ತಾಂತ್ರಿಕ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅರವಿ ಬಸವನಗೌಡ, ಸದಸ್ಯ ಕೆ.ವಿ. ಶ್ರೀನಿವಾಸ್ ರೆಡ್ಡಿ, ವಿಜಯನಗರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಾಲಿ ಸಿದ್ದಯ್ಯಸ್ವಾಮಿ, ವೀವಿ ಸಂಘದ ಕಾರ್ಯದರ್ಶಿ ಲೇಪಾಕ್ಷಪ್ಪ, ಕಾಲೇಜು ಪ್ರಾಚಾರ್ಯೆ ಪಾರ್ವತಿ ಕಡ್ಲಿ, ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಹಾಗೂ ಮುಖಂಡರು ಭಾಗವಹಿಸಿದ್ದರು.