ವೇತನ ಕಡಿತ: ಮೌಲ್ಯಮಾಪನ ಬಹಿಷ್ಕರಿಸಿದ ಉಪನ್ಯಾಸಕರು
ಬಳ್ಳಾರಿ: ಉಪನ್ಯಾಸಕರ ವೇತನ ಕಡಿತಕ್ಕೆ ಉನ್ನತ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡುವುದಾಗಿ ಮಾಧ್ಯಮಗಳ ಮುಂದೆ ವಿಎಸ್ಕೆ ವಿವಿ ಕುಲಪತಿ ಮಂಜಪ್ಪ ಹೊಸಮನೆ ನೀಡಿರುವ ಹೇಳಿಕೆ ಖಂಡಿಸಿ ಹಾಗೂ ಕೂಡಲೆ ಮೌಲ್ಯಮಾಪನ ಕೇಂದ್ರಕ್ಕೆ ಆಗಮಿಸಿ ನಮ್ಮ ಮನವಿ ಸ್ವೀಕರಿಸಬೇಕು ಎಂದು ಒತ್ತಾಯಿಸಿ ಕನ್ನಡ, ಆಂಗ್ಲಭಾಷೆ ಮೌಲ್ಯಮಾಪನ ಬಹಿಷ್ಕರಿಸಿ ಉಪನ್ಯಾಸಕರು ಪ್ರತಿಭಟನೆ ನಡೆಸಿದರು.
ಕಾಲೇಜು ಪ್ರಾಚಾರ್ಯರನ್ನು ಸಂಪರ್ಕಿಸದೆ, ಕಾರಣ ಕೇಳದೆ, ಏಕಾಏಕಿ 12 ಉಪನ್ಯಾಸಕರ ಹೆಸರುಗಳನ್ನು ಪತ್ರಿಕೆಗಳಲ್ಲಿ ಬಿತ್ತರಿಸಿದ್ದು ತೀವ್ರ ನೋವುಂಟಾಗಿದೆ. ಹಲವು ವರ್ಷಗಳಿಂದ ಸಲ್ಲಿಸುತ್ತಿರುವ ಪ್ರಾಮಾಣಿಕ ಸೇವೆಗೆ ಧಕ್ಕೆಯಾಗಿದೆ. ಮೌಲ್ಯಮಾಪಾನ ಕುಲಸಚಿವ ಸುರೇಶ್ ಅವರು ನಮ್ಮ ಮನವಿ ಸ್ವೀಕರಿಸಲು ನಿರಾಕರಿಸಿದ್ದಾರೆ. ಆದ್ದರಿಂದ ಕುಲಪತಿ ಮಂಜಪ್ಪ ಹೊಸಮನೆ ಕೂಡಲೇ ಮೌಲ್ಯಮಾಪನ ಕೇಂದ್ರಕ್ಕೆ ಆಗಮಿಸಿ, ನಮ್ಮ ಮನವಿ ಸ್ವೀಕರಿಸಬೇಕು ಹಾಗೂ ಈ ಬಗ್ಗೆ ಪರಿಶೀಲಿಸಬೇಕು ಎಂದು ವಿಎಸ್ಕೆ ವಿವಿ ವ್ಯಾಪ್ತಿಯ ಅಧ್ಯಾಪಕರ ಸಂಘದ ಅಧ್ಯಕ್ಷ ಬಿ.ಆರ್. ಮಂಜುನಾಥ್ ಒತ್ತಾಯಿಸಿದರು.
ಜವಾಬ್ದಾರಿ ಇದೆ: ಎಲ್ಲ ಜವಾಬ್ದಾರಿ ಆಯಾ ಕಾಲೇಜುಗಳ ಪ್ರಾಚಾರ್ಯರ ಮೇಲಿದ್ದು, ಕುಲಪತಿಗಳು ಮೊದಲು ತಾವು ಸೂಚಿಸಿದ ಉಪನ್ಯಾಸಕರು ಗೈರಾಗಿದ್ದಲ್ಲಿ ಪ್ರಾಚಾರ್ಯರಿಂದ ವಿವರಣೆ ಪಡೆಯಬೇಕು. ಇಲ್ಲವಾದಲ್ಲಿ ಉಪನ್ಯಾಸಕರಿಂದ ಕಾರಣ ಕೇಳಬೇಕು. ಅವರು, ನೀಡಿದ ಕಾರಣದಲ್ಲಿ ತಮಗೆ ಅನುಮಾನ, ತಪ್ಪು ಕಂಡುಬಂದಲ್ಲಿ ನಮ್ಮ ವಿರುದ್ಧ ಕ್ರಮ ಕೈಗೊಳ್ಳಿ, ಅದಕ್ಕೆ ನಾವು ತಲೆಬಾಗುತ್ತೇವೆ ಎಂದ ಅವರು, ಕುಲಪತಿಗಳು ಸೂಚಿಸಿದ ಉಪನ್ಯಾಸಕರನ್ನು, ಆಯಾ ಕಾಲೇಜುಗಳ ಪ್ರಾಚಾರ್ಯ ರಿಲೀವ್ ಮಾಡಬೇಕಿದೆ. ಆದರೆ, ಕಾಲೇಜುಗಳಲ್ಲೆ ಸಾಕಷ್ಟು ಕೆಲಸಗಳಿವೆ. ಪರೀಕ್ಷೆಗಳೂ ನಡೆಯುತ್ತಿರುವುದರಿಂದ ಇದು ಸಾಧ್ಯವಾಗಿಲ್ಲ ಎಂದರು.
ಕಪ್ಪುಪಟ್ಟಿ ಧರಿಸಿ, ಮೌಲ್ಯಮಾಪನ ಮುಂದುವರಿಸಲಾಗುತ್ತದೆ. ವೇತನ ಕಡಿತದ ಬಗ್ಗೆ ಕುಲಪತಿಗಳು ಮರುಪರಿಶೀಲನೆ ಮಾಡಬೇಕೆಂದು ಒತ್ತಾಯಿಸಿದರು. ರಾಜ್ಯಶಾಸ್ತ್ರ ಅಧ್ಯಾಪಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಶ್ರೀನಿವಾಸಲು, ಉಪನ್ಯಾಸಕ ದೇವಣ್ಣ, ಸೋಮನಾಥ್, ಬಸವರಾಜ್, ಸತ್ಯನಾರಾಯಣ, ಮಲ್ಲಿಕಾರ್ಜುನಗೌಡ, ಮನೋಹರನ್, ಕೊಟ್ರಪ್ಪ, ಕಾವಲಯ್ಯ, ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಟಿ. ಮಲ್ಲೇಶ್, ರಾಧಾಕೃಷ್ಣ, ಇಂದಿರಾ, ಹುಲಿಗೆಮ್ಮ, ಶಾಂತಲಾ, ಶ್ಯಾಂಮೂರ್ತಿ, ಕನ್ನಡ, ಆಂಗ್ಲ ಪತ್ರಿಕೆಗಳ ಮೌಲ್ಯಮಾಪನಕ್ಕೆ ಆಗಮಿಸಿದ್ದ ನೂರಾರು ಉಪನ್ಯಾಸಕರು ಇದ್ದರು.