ಆಳುವವರಲ್ಲಿ ದೂರದೃಷ್ಟಿ ಕೊರತೆ: ಕುಂವೀ ಬೇಸರ
ಹಗರಿಬೊಮ್ಮನಹಳ್ಳಿ: ನಮ್ಮನ್ನಾಳುವವರಿಗೆ ದೂರದೃಷ್ಟಿ ಕೊರತೆ ಇದ್ದು, ಇದರ ಪರಿಣಾಮ ಇವತ್ತಿಗೂ ಗ್ರಾಮೀಣ ಪ್ರದೇಶಗಳಲ್ಲಿ ಶೈಕ್ಷಣಿಕ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಹಿಂದುಳಿಯುವಂತಾಗಿದೆ ಎಂದು ಸಾಹಿತಿ ಕುಂ. ವೀರಭದ್ರಪ್ಪ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಎಂ.ವೈ. ಘೋರ್ಪಡೆ ಶಾಲೆಯಲ್ಲಿ ಆಯೋಜಿಸಿದ್ದ ಕನ್ನಡ ಕಲಾಸೌರಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅಧಿಕಾರರೂಢ ರಾಜಕಾರಣಿಗಳಲ್ಲಿ ಹಳ್ಳಿಗಾಡಿನ ಅಭಿವೃದ್ಧಿ ಹಾಗೂ ಅಲ್ಲಿ ವಾಸಿಸುವ ಜನಸಮುದಾಯದ ಪ್ರಗತಿ ಬಗ್ಗೆ ಸರಿಯಾದ ಬದ್ಧತೆ ಇಲ್ಲದಂತಾಗಿದೆ. ಹೀಗಾಗಿ ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕ ಕಳೆದರೂ ಇಂದಿಗೂ ಗ್ರಾಮೀಣ ಜನತೆ ಮುಖ್ಯವಾಹಿನಿಯಿಂದ ದೂರ ನಿಲ್ಲುವಂತಾಗಿದೆ. ಈ ನಿಟ್ಟಿನಲ್ಲಿ ಆಡಳಿತರೂಢರು ಚಿಂತಿಸುವುದು ಅಗತ್ಯ ಎಂದರು.
ಜಿಲ್ಲೆಯಲ್ಲಿ ಗಣಿ ಭೂಮ್ ಇದ್ದಾಗ ಜಿಲ್ಲೆಯನ್ನಾಳಿದ ರಾಜಕಾರಣಿಯೊಬ್ಬರು ರು. 36 ಕೋಟಿ ವೆಚ್ಚದ ಬಂಗಾರದ ಕಿರೀಟವನ್ನು ತಿರುಪತಿ ತಿಮ್ಮಪ್ಪನಿಗೆ ಕಾಣಿಕೆಯಾಗಿ ನೀಡಿದರು. ಈ ರೀತಿ ದೇವರಿಗೆ ಕಾಣಿಕೆ ನೀಡುವ ಬದಲು ಈ ಜಿಲ್ಲೆಯಲ್ಲಿನ ಗ್ರಾಮೀಣ ಶಾಲೆಗಳನ್ನು ಬಲಪಡಿಸಲು, ಇಲ್ಲವೆ ಹಳ್ಳಿಗಳಲ್ಲಿ ಆಸ್ಪತ್ರೆ, ಸಮುದಾಯ ಭವನ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ನೆರವು ನೀಡಿದ್ದರೆ ಜಿಲ್ಲೆ ಜನತೆ ಅವರ ಸೇವೆಯನ್ನು ಮನಸಾರೆ ಮೆಚ್ಚುತ್ತಿತ್ತು ಎಂದು ಜನಾರ್ದನ ರೆಡ್ಡಿ ಹೆಸರು ಪ್ರಸ್ತಾಪಿಸದೇ ಪರೋಕ್ಷ ವಾಗ್ದಾಳಿ ನಡೆಸಿದರು.
ಆಂಗ್ಲ ಮಾಧ್ಯಮ ಶಾಲೆಗಳು ಬೇಕು, ಆಗಂತ ಅಲ್ಲಿ ಕೇವಲ ಇಂಗ್ಲಿಷ್ ಪರಿಸರ ಬೆಳೆಸಬಾರದು, ಜತೆಗೆ ಕನ್ನಡ ಭಾಷೆಯ ಪರಿಸರವನ್ನು ನಿರ್ಮಾಣ ಮಾಡುವ ಮೂಲಕ ಮಕ್ಕಳಿಗೆ ಮತೃಭಾಷೆ ಬಗ್ಗೆ ಗೌರವ ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಮಾಜಿ ಶಾಸಕ ಸಿರಾಜ್ ಶೇಕ್ ಅಧ್ಯಕ್ಷತೆ ವಹಿಸಿದ್ದರು. ಹುರಕಡ್ಲಿ ಶಿವಕುಮಾರ್, ಶಾಲೆ ಮುಖ್ಯೋಪಾಧ್ಯಯ ಸಿ.ಜಿ. ಸುರೇಂದ್ರ ಭಾಗವಹಿಸಿದ್ದರು. ಮಾನಸ ಶಿರೂರು ಸ್ವಾಗತಿಸಿದರು. ನಸ್ರೀತ್ಬೇಗ್ಂ ವಂದಿಸಿದರು. ಶಾಹೀದ್, ಮನೋಜ್, ಗೌಸೀಯಾ, ಸೋನಿಯಾ ಕಾರ್ಯಕ್ರಮ ನಿರೂಪಿಸಿದರು.