ಕರಡಿಹಳ್ಳಿ ಬಳಿ ಕರಡಿ ಸಾವು: ಕಾಯಿಲೆ ಶಂಕೆ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಡಿ. 10
ತಾಲೂಕಿನ ಕರಡಿಹಳ್ಳಿ ಬಳಿಯ ಕಾಡಿನಲ್ಲಿ ಕರಡಿಯೊಂದು ಅನುಮಾನಾಸ್ಪದವಾಗಿ ಸತ್ತಿರುವ ಪ್ರಕರಣ ಮಂಗಳವಾರ ಬೆಳಕಿಗೆ ಬಂದಿದ್ದು, ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಧಾವಿಸಿ ಸತ್ತ ಕರಡಿಯನ್ನು ಪರಿಶೀಲಿಸಿದ್ದಾರೆ.
ಈ ಕರಡಿ ಸೋಮವಾರ ಸಂಜೆ ಸತ್ತಿದೆ. ಯಾವುದಾದರೂ ಕಾಯಿಲೆಯಿಂದ ಸತ್ತಿರುವ ಶಂಕೆ ವ್ಯಕ್ತಪಡಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಕರಡಿಯ ಮೃತದೇಹವನ್ನು ಸಮೀಪದ ಹೊಸಹಳ್ಳಿ ಪಶು ಆಸ್ಪತ್ರೆಗೆ ಕೊಂಡೊಯ್ದು ಶವಪರೀಕ್ಷೆ ಮಾಡಿಸಿದ್ದಾರೆ. ಕರಡಿ ಯಾವ ಕಾರಣಕ್ಕೆ ಸತ್ತಿದೆ ಎಂದು ತಿಳಿಯಲು ಪ್ರಯೋಗಾಲಯಕ್ಕೆ ಸ್ಯಾಂಪಲ್ಗಳನ್ನು ಕಳುಹಿಸಿಕೊಡಲಾಗಿದೆ. ಪ್ರಯೋಗಾಲಯದ ವರದಿ ನಂತರ ಸಾವಿನ ಬಗ್ಗೆ ನಿಖರ ಕಾರಣ ತಿಳಿಯುತ್ತದೆ ಎಂದು ಕೂಡ್ಲಿಗಿ ಅರಣ್ಯ ಇಲಾಖೆ ಅಧಿಕಾರಿ ಬಿ.ಪಿ. ದುದ್ದಗಿ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಕೊಂದಿರುವ ಶಂಕೆ: ತಾಲೂಕಿನ ಗುಡೇಕೋಟೆ ಹೋಬಳಿಯ ಕರಡಿಹಳ್ಳಿ, ಭೀಮಸಮುದ್ರ, ಕಡೇಕೊಳ, ಗೆದ್ದಲಗಟ್ಟೆ, ಮಹದೇವಪುರ, ಅಪ್ಪೇನಹಳ್ಳಿ, ಗುಡೇಕೋಟೆ ಸೇರಿದಂತೆ ಈ ಭಾಗದಲ್ಲಿ ಕರಡಿಗಳ ಸಂಖ್ಯೆ ಹೆಚ್ಚಿದೆ. ಇವು ನಿರಂತರ ಜನತೆ ಮೇಲೆ ದಾಳಿ ನಡೆಸಿದ ಪ್ರಕರಣಗಳು ನಡೆಯುತ್ತಲೆ ಇರುತ್ತವೆ. ಆದರೀಗ ಕರಡಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದನ್ನು ನೋಡಿದರೆ ಕಾಯಿಲೆಯಿಂದ ಸತ್ತಿರಬಹುದೆ? ಯಾರಾದರೂ ವಿಷವಿಟ್ಟು ಕೊಂದಿರಬಹುದೆ ಅಥವಾ ಹೊಡೆದು ಸಾಯಿಸಿರಬಹುದೆ ಎಂಬ ಅನುಮಾನಗಳು ಜನತೆಯಲ್ಲಿ ಕಾಡುತ್ತಿವೆ.
ಗುಡೇಕೋಟೆ ಭಾಗದ ಸಾವಿರಾರು ಹೆಕ್ಟೇರ್ ಬೆಟ್ಟಗುಡ್ಡಗಳಲ್ಲಿ ನೂರಾರು ಕರಡಿಗಳು ವಾಸಿಸುತ್ತಿದ್ದು, ಇವುಗಳಿಗೆ ಸೂಕ್ತ ಆಹಾರ, ನೀರಿನ ಕೊರತೆ ಇರುವ ಅನುಮಾನ ಅರಣ್ಯ ಇಲಾಖೆ ಅಧಿಕಾರಿಗಳಿಗಿದೆ. ಕರಡಿ ವಾಸಿಸುವ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಜನವಾಸದ ವಾಸನೆಯಿಂದ ಕರಡಿಗಳಿಗೆ ಕಾಡಲ್ಲಿ ಬದುಕಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಗಾಗ ಬೆಟ್ಟಗುಡ್ಡಗಳ ಇಳಿಜಾರಿನಲ್ಲಿರುವ ಸುತ್ತಮುತ್ತಲ ಗ್ರಾಮ, ಹೊಲಗಳಿಗೆ ಕರಡಿಗಳು ಆಹಾರಕ್ಕಾಗಿ ಲಗ್ಗೆ ಇಟ್ಟು ಎದುರಿಗೆ ಸಿಕ್ಕ ರೈತರ ಮೇಲೆರಗಿ ಗಾಯಗೊಳಿಸಿದ ಉದಾಹರಣೆಗಳಿವೆ.
ಕರಡಿಧಾಮ ಇಲ್ಲ: ಸರ್ಕಾರ ಗುಡೇಕೋಟೆ ಭಾಗದಲ್ಲಿ ಕರಡಿಧಾಮ ನಿರ್ಮಿಸಲು ಅನುಮತಿ ನೀಡಿದೆಯಾದರೂ ಅದಕ್ಕೆ ಸೂಕ್ತ ಹಣ ಬಿಡುಗಡೆಯಾಗದೆ ಯಾವುದೆ ಕಾರ್ಯಚಟುವಟಿಕೆ ನಡೆಯುತ್ತಿಲ್ಲ. ಹೀಗಾಗಿ ಕರಡಿಗಳು ಹಾಗೂ ಜನತೆ ಮಧ್ಯೆ ಸಂಘರ್ಷ ಶುರುವಾಗಿದ್ದು, ಪರಸ್ಪರ ವಾಸದ ನೆಲೆಗಳಿಗಾಗಿ ಕರಡಿಗಳು ಕಾದಾಟಗಳನ್ನು ಶುರುವಿಟ್ಟುಕೊಂಡಿವೆ. ಇತ್ತ ಕರಡಿದಾಳಿಯಿಂದ ಜಮೀನಿನಲ್ಲಿ ಫಸಲನ್ನು ಕಳೆದುಕೊಳ್ಳುತ್ತಿರುವ ರೈತರು ಸಹ ಪ್ರತಿಕಾರಕ್ಕಾಗಿ ಕರಡಿ ದಾಳಿ ತಡೆಯಲು ಸಂಚು ರೂಪಿಸುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಕರಡಿ ಜೀವಗಳಿಗೂ ಕುತ್ತು ಬಂದಿರುವ ಶಂಕೆ ಇದೆ. ಶೀಘ್ರದಲ್ಲಿ ಕರಡಿಧಾಮ ನಿರ್ಮಾಣದ ಯೋಜನೆ ಕಾರ್ಯರೂಪಕ್ಕೆ ಬಂದಾಗ ಮಾತ್ರ ಕರಡಿ ಹಾಗೂ ಈ ಭಾಗದ ರೈತರ ಸಾವು, ನೋವುಗಳನ್ನು ತಪ್ಪಿಸಲು ಸಾಧ್ಯ.