ನಾಡಿನ ಕಲೆ, ಸಂಸ್ಕೃತಿ ಬೀಜ ಬಿತ್ತಿ: ಕರಿಗೋಡಪ್ಪ
ಬಳ್ಳಾರಿ: ಯುವಜನತೆ ನಮ್ಮ ನಾಡಿನ ಕಲೆ, ಸಂಸ್ಕೃತಿಯ ಬೀಜವನ್ನು ಬಿತ್ತುವ ಮೂಲಕ ಮುಂದಿನ ಪೀಳಿಗೆಗೂ ಉಳಿಸುವ ಮಹತ್ವದ ಕಾರ್ಯ ಮಾಡಬೇಕು ಎಂದು ಮಹಾನಗರ ಪಾಲಿಕೆ ಸದಸ್ಯ ಕರಿಗೋಡಪ್ಪ ತಿಳಿಸಿದರು.
ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನಗರದ ಬಿಡಿಎಎ ಫುಟ್ಬಾಲ್ ಮೈದಾನದಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಡಿನ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿದಾಗ ಮಾತ್ರ ಅನ್ಯ ದೇಶಿಯರು ನಮ್ಮನ್ನು ಗುರುತಿಸಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಯುವಜನತೆ ದೂರದರ್ಶನ ಕಾರ್ಯಕ್ರಮಗಳ ವೀಕ್ಷಣೆಯಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಲು ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ರೂಪಿಸಿದೆ. ಈ ಉತ್ಸವದಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಭ್ಯಾಸ ಮಾಡಿರುವ ನಾಡಿನ ಕಲೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ಬಳುವಳಿಯಾಗಿ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರಾದ ಸುಧಾಕರ್ ದೇಸಾಯಿ, ನಾಗಮ್ಮ, ಬೆಣಕಲ್ ಬಸವರಾಜ್ ಮತ್ತಿತರರು ಇದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ ಸ್ವಾಗತಿಸಿದರು. ಲಕ್ಷ್ಮೀ ಸರೋವರ ನಿರೂಪಿಸಿದರು. ಮಲಕಪ್ಪ ವಂದಿಸಿದರು.
ಸ್ಪರ್ಧೆಗಳ ವಿಜೇತರು: ಭರತನಾಟ್ಯ ಸ್ಪರ್ಧೆಯಲ್ಲಿ ಬಳ್ಳಾರಿಯ ವಿಜೇಂದ್ರ ಕುಮಾರ್ ಪ್ರಥಮ, ಕಂಪ್ಲಿಯ ನಿಹಾರಿಕಾ ದ್ವಿತೀಯ, ಟಿ. ಮೋನಿಕಾ ತೃತೀಯ. ಕೂಚುಪುಡಿ ನೃತ್ಯದಲ್ಲಿ ಬಳ್ಳಾರಿಯ ಪಿ. ರಂಜನಾ, ವಿಜೇಂದ್ರ ಕುಮಾರ್, ಬಿ. ಬಸವರಾಜ್ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ. ಜಾನಪದ ನೃತ್ಯ ಕಂಪ್ಲಿಯ ವಿನೀತ್ ಮತ್ತು ತಂಡ (ಪ್ರ), ಸಿರುಗುಪ್ಪದ ಕಾರಂತ ರಂಗಲೋಕ(ದ್ವಿ), ಹಡಗಲಿಯ ಮಹಾತ್ಮ ಗಾಂಧಿ ಯುವಕ ಸಂಘ (ತೃ). ಶಾಸ್ತ್ರೀಯ ಗಾಯನ (ಹಿಂದೂಸ್ತಾನಿ) ಕಂಪ್ಲಿಯ ಜೆ. ಚಿನ್ಮಯಿ (ಪ್ರ), ಅಲಕಾ ದೇಶಪಾಂಡೆ (ದ್ವಿ), ಸಂಡೂರಿನ ಸಹನಾ (ತೃ). ಜಾನಪದ ಗೀತೆ ಬಳ್ಳಾರಿಯ ಚಿಗುರು ಕಲಾತಂಡ (ಪ್ರ), ಸಿರುಗುಪ್ಪದ ಕಾರಂತ ರಂಗಲೋಕ(ದ್ವಿ), ಹಡಗಲಿಯ ಮಹಾತ್ಮ ಗಾಂಧಿ ಯುವಕ ಸಂಘ (ತೃ). ಶಾಸ್ತ್ರೀಯ ಗಾಯನ (ಕರ್ನಾಟಕ) ವಿನೀತ್ (ಪ್ರ). ತಬಲ ವಾದನ ಕಂಪ್ಲಿಯ ಜೆ. ಚಿನ್ಮಯಿ (ಪ್ರ), ಬಳ್ಳಾರಿಯ ಜಿ. ಸುಧಾಕರ (ದ್ವಿ). ಕಥಕ್ ಬಳ್ಳಾರಿಯ ವೈಷ್ಣವಿ (ಪ್ರ). ಕೊಳಲು ವಾದನ ಹೊಸಪೇಟೆಯ ಕೇಶವ್ರಾಜ್ (ಪ್ರ). ಹಾರ್ಮೋನಿಯಂ ವಾದನ ಬಳ್ಳಾರಿಯ ಶಿವಕುಮಾರ್ (ಪ್ರ)ಹಾಗೂ ಸಂಡೂರಿನ ಸಹನಾ ದ್ವಿತೀಯ ಸ್ಥಾನ ಗಳಿಸಿದ್ದಾರೆ.