ಮಾನವ ಹಕ್ಕು ಉಲ್ಲಂಘನೆಯಾಗದಿರಲಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 10
ಮಾನವ ಹಕ್ಕುಗಳ ಉಲ್ಲಂಘನೆ ಆಗದಂತೆ ಜಾಗೃತಿ ವಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ. ವಿಶ್ವೇಶ್ವರ ಭಟ್ ತಿಳಿಸಿದರು.
ರಾಜ್ಯ ಮಾನವ ಹಕ್ಕುಗಳ ಆಯೋಗ, ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ವಕೀಲರ ಸಂಘಗಳ ಸಹಯೋಗದಲ್ಲಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವಸಂಸ್ಥೆಯು 1948ರ ಡಿಸೆಂಬರ್ 10ರಂದು ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿರುವುದನ್ನು ತಡೆಗಟ್ಟುವುದರಲ್ಲಿ ಹೋರಾಟ ಮಾಡಿತ್ತು ಅಂದಿನಿಂದ ಡಿಸೆಂಬರ್ನಲ್ಲಿ ಮಾನವ ಹಕ್ಕುಗಳ ದಿನಾಚರಣೆಯನ್ನು ಇದುವರೆಗೆ ಆಚರಿಸಲಾಗುತ್ತಿದೆ. ಪ್ರತಿಯೊಬ್ಬರೂ ಕಾನೂನು ಅರಿಯಬೇಕು. ತಮ್ಮ ಹಕ್ಕು ಹಾಗೂ ಕರ್ತವ್ಯಗಳನ್ನು ಸಹ ತಿಳಿಯಬೇಕು. ಆಗ ಮಾತ್ರವೇ ಹಕ್ಕುಗಳ ಉಲ್ಲಂಘನೆ ಆಗುವುದಿಲ್ಲ ಎಂದರು.
ಮಾನವ ಹುಟ್ಟಿನಿಂದಲೇ ಆಹಾರ, ಸ್ವತಂತ್ರವಾಗಿ ಜೀವಿಸುವ, ತನ್ನದೇ ಆದ ವೃತ್ತಿ ಗಳಿಸುವ ಹಕ್ಕುಗಳನ್ನು ಪಡೆದಿರುತ್ತಾನೆ. ಅವುಗಳ ಉಲ್ಲಂಘನೆ ಆಗದಂತೆ ಕಾಪಾಡುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಕೇವಲ ಸಭೆಗಳಲ್ಲಿ ಭಾಗವಹಿಸುವುದು, ಇರುವಿಕೆ ಮುಖ್ಯವಲ್ಲ. ಹಕ್ಕುಗಳ ಉಲ್ಲಂಘನೆ ಆಗದಂತೆ ಜಾಗೃತಿ ವಹಿಸುವುದು ಅತಿಮುಖ್ಯ ಎಂದು ಹೇಳಿದರು.
ಆತ್ಮಗೌರವಕ್ಕೆ ಧಕ್ಕೆಯಾಗದಿರಲಿ: ಮಾನವ ಹಕ್ಕು ಕುರಿತು ವಿಶೇಷ ಉಪನ್ಯಾಸ ನೀಡಿದ ವಕೀಲ ಎರ್ರಿಸ್ವಾಮಿ, ಅನೇಕ ಪಂಡಿತರು, ದಾಸರು, ವಚನಕಾರರು ಹೇಳಿದಂತೆ ಮನುಷ್ಯ ಜಾತಿ ತಾನೊಂದೆ ವಲಂ ಎಂಬಂತೆ ಪ್ರತಿಯೊಬ್ಬ ಮಾನವ ತನ್ನ ಹಕ್ಕುಗಳ ಪರಿಕಲ್ಪನೆ ಹೊಂದಿರಬೇಕು. ಆತ್ಮಗೌರವಕ್ಕೆ ಧಕ್ಕೆ ಬಾರದ ಹಾಗೆ ಬಾಳಬೇಕು. ಜತೆಯಲ್ಲಿ ಇತರರ ಆತ್ಮಗೌರಕ್ಕೆ ಸಹ ಧಕ್ಕೆ ತರದ ಹಾಗೆ ನಡೆದುಕೊಳ್ಳಬೇಕು. ನಾಗರಿಕತೆ ಬೆಳೆದಂತೆ ಮಾನವ ತನ್ನ ಬದುಕನ್ನು ನಾಶ ಪಡಿಸಿಕೊಳ್ಳುತ್ತಾ ಬರುತ್ತಿದ್ದಾನೆ. ಇಂದಿನ ಜಾಗತೀಕರಣ, ಉದಾರೀಕರಣ, ಆಧುನೀಕರಣದಲ್ಲಿ ಆರ್ಥಿಕ ಸಮಾನತೆ, ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಸಿಜೆಎಂ ಎಂ.ಎಚ್. ಶಾಂತಾ, ಸಹಾಯಕ ಆಯುಕ್ತ ಅನಿರುದ್ಧ್ ಶ್ರವಣ್, ವಕೀಲರ ಸಂಘದ ಕಾರ್ಯದರ್ಶಿ ರಾಮಕೃಷ್ಣ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು. ತಹಸೀಲ್ದಾರ್ ಶರಣಪ್ಪ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್ ವಂದಿಸಿದರು.