ಸಾಲಬಾಧೆ: ಕೂಡ್ಲಿಗಿ ರೈತ ನೇಣಿಗೆ ಶರಣು
ಕೂಡ್ಲಿಗಿ: ತಾಲೂಕಿನ ನೆಲಬೊಮ್ಮನಹಳ್ಳಿ ಗ್ರಾಮದ ರೈತ ನಾಗೇಂದ್ರಪ್ಪ (38) ಸಾಲಬಾಧೆ ತಾಳಲಾರದೇ ಮಂಗಳವಾರ ಮಧ್ಯಾಹ್ನ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬ್ಯಾಂಕ್ ಹಾಗೂ ಕೈ ಸಾಲ ಸೇರಿದಂತೆ ಲಕ್ಷಾಂತರ ರುಪಾಯಿ ಸಾಲ ಮಾಡಿದ್ದ ನಾಗೇಂದ್ರಪ್ಪಗೆ, ಈ ಬಾರಿ ಜಮೀನಿನ ಫಸಲು ಕೈ ಸೇರಿರಲಿಲ್ಲ. ಹೀಗಾಗಿ ಜಿಗುಪ್ಸೆಗೊಂಡು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಎಸ್‌ಐ ನಾಗರಾಜ್ ತಿಳಿಸಿದ್ದಾರೆ. ಚಿಕ್ಕಜೋಗಿಹಳ್ಳಿ ಗ್ರಾಮದ ಎಸ್‌ಬಿಎಂನಲ್ಲಿ ಲಕ್ಷಾಂತರ ಸಾಲ ತೆಗೆದುಕೊಂಡಿದ್ದೇನೆ, ಜನರ ಹತ್ತಿರ ಕೈಗಡ ಸಾಲ ತೆಗೆದುಕೊಂಡಿದ್ದಲ್ಲದೇ ಕೆಲವರಿಗೆ ಬೇರೆಯವರಿಂದ ಸಾಲ ಕೊಡಿಸಿದ್ದೇನೆ. ನನ್ನ ಜಮೀನು ನೆಲಸಮ ಮಾಡಿ ಈ ಬಾರಿ ಬೆಳೆ ಬೆಳದರೂ ಸಾಲ ತೀರಿಸಲಾಗಲಿಲ್ಲ. ಹೀಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಡೆತ್‌ನೋಟ್ ಬರೆದಿಟ್ಟು ನೇಣು ಹಾಕಿಕೊಂಡಿದ್ದಾನೆ. ಮೃತನಿಗೆ ಮೂವರು ಮಕ್ಕಳಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.