ಹಕ್ಕು ಉಲ್ಲಂಘನೆಯಾಗದಂತೆ ಜವಾಬ್ದಾರಿ ವಹಿಸಿ: ಕೆ. ಲಕ್ಷ್ಮಣ
ಹೊಸಪೇಟೆ: ಮಾನವ ಹಕ್ಕುಗಳು ಉಲ್ಲಂಘನೆಯಾಗದಂತೆ ತಡೆಯುವ ಜವಾಬ್ದಾರಿಯನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಹಿಸಬೇಕು ಎಂದು ಪತ್ರಕರ್ತ ಕೆ. ಲಕ್ಷ್ಮಣ ಹೇಳಿದರು.
ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರತಿದಿನ ಒಂದಿಲ್ಲೊಂದು ಹಲ್ಲೆಗಳು ಜನಸಾಮಾನ್ಯರ ಮೇಲೆ ನಡೆಯುತ್ತಿದ್ದು, ನಿತ್ಯವೂ ಮಕ್ಕಳು ಮತ್ತು ಮಹಿಳೆಯರ ಮೇಲೆ ದೌರ್ಜನ್ಯಗಳಾಗುತ್ತಿವೆ. ಇದರಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಈ ಕುರಿತು ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಇದಕ್ಕೆ ಸಕಾರಾತ್ಮಕ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶೋಷಿತ ಹಾಗೂ ಕೆಳವರ್ಗದ ಜನರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿರುವುದರಿಂದ ಮಕ್ಕಳ ಪಾಲಕರು ತಮ್ಮ ಮಕ್ಕಳನ್ನು ಉನ್ನತ ಶಿಕ್ಷಣಕ್ಕೆ ಕಳುಹಿಸದೆ ಮದುವೆ ಮಾಡಿ ತಮ್ಮ ಜವಾಬ್ದಾರಿ ಕಳೆದುಕೊಳ್ಳಲು ಮುಂದಾಗುತಿರುವುದು ಸರಿಯಲ್ಲ. ಇದನ್ನು ಬದಲಾಯಿಸುವ ಅಗತ್ಯತೆ ಇದೆ. ಮೂಢ ನಂಬಿಕೆಗಳ ನಿಷೇಧ ಕಾನೂನು ಜಾರಿ ಮಾಡುವ ಮೊದಲು ಕೆಳ ಮಟ್ಟದ ಚರ್ಚೆಗಳು, ಜನಾಭಿಪ್ರಾಯಗಳನ್ನು ಪಡೆಯಬೇಕಿದೆ. ಮಡೆಸ್ನಾನ ಕುರಿತು ಎದ್ದಿರುವ ವಿವಾದಗಳ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳದೆ ಜನಪರ ಯೋಜನೆಗಳನ್ನು ಜಾರಿ ಮಾಡಲು ಮುಂದಾಗಬೇಕು ಎಂದು ಹೇಳಿದರು.
ಸ್ಲಂ ಜನಾಂದೋಲನ ಸಮಿತಿ ಸಂಚಾಲಕ ಕೆ. ರಾಮಚಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಿತಿ ಮುಖಂಡರಾದ ಹುಲಿಗೆಮ್ಮ, ಶೇಷು, ವೆಂಕಟೇಶಲು, ಹನುಮಂತರಾಯ, ಮಾರೆಮ್ಮ, ನಾಗಲಕ್ಷ್ಮಿ, ಗದುಗಿನ ಗಿರೀಶ್, ಗೀತಾಂಜಲಿ, ಸಣ್ಣ ತಿಪ್ಪಮ್ಮ, ಹುಸೇನ್‌ಬಿ, ವೆಂಕಮ್ಮ, ರೋಹಿಣಿ ಸೇರಿದಂತೆ ಇತರರು ಭಾಗವಹಿಸಿದ್ದರು.