14ರಿಂದ ರೆಫ್ರಿ ಪರೀಕ್ಷೆ
ಹೊಸಪೇಟೆ: ತಾಲೂಕಿನ ಮರಿಯಮ್ಮನಹಳ್ಳಿ ಎಸ್ಎಲ್ಎನ್ಎ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಗೆ ಡಿ. 14 ಮತ್ತು 15ರಂದು ಎಸ್ಎಲ್ಎನ್ಎ ಶಿಕ್ಷಣ ಸಂಸ್ಥೆಯಲ್ಲಿ ಖೋ ಖೋ ರೆಫ್ರಿ ಪರೀಕ್ಷೆ ನಡೆಯಲಿದೆ. ಆಸಕ್ತ ದೈಹಿಕ ಶಿಕ್ಷಣ ಶಿಕ್ಷಕರು ಇದರ ಸದುಪಯೋಗಪಡಿಸಿಕೊಳ್ಳಬಹುದಾಗಿದೆ. ಈ ಪರೀಕ್ಷೆಯಲ್ಲಿ ಭಾಗವಹಿಸಲು ಇಚ್ಛಿಸುವವ ದೈಹಿಕ ಶಿಕ್ಷಣ ಶಿಕ್ಷಕರಿಗೆ ಊಟ, ವಸತಿ ಸೌಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 9880065350, 9036860314, 9916023229 ಈ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಎಸ್ಎಲ್ಎನ್ಎ ಶಿಕ್ಷಣ ಸಂಸ್ಥೆ ಮುಖ್ಯಸ್ಥರು ತಿಳಿಸಿದ್ದಾರೆ.
ಗುರುಸಿದ್ದನಗೌಡ ಆಯ್ಕೆ
ಬಳ್ಳಾರಿ: ಜೈ ಕನ್ನಡ ರಕ್ಷಣಾ ವೇದಿಕೆಯ ಬಳ್ಳಾರಿ ನಗರ ಘಟಕದ ನೂತನ ಅಧ್ಯಕ್ಷರಾಗಿ ಕೆ. ಗುರುಸಿದ್ದನಗೌಡ ನೇಮಕವಾಗಿದ್ದಾರೆ. ವೇದಿಕೆ ರಾಜ್ಯ ಅಧ್ಯಕ್ಷ ಜಾನಕಿರಾಮ್ ಆದೇಶದಂತೆ ಜಿಲ್ಲಾಧ್ಯಕ್ಷ ಕೆ. ಶ್ಯಾಮಸುಂದರ್ ಕೆ. ಗುರುಸಿದ್ದನಗೌಡ ಅವರನ್ನು ನೇಮಿಸಿದ್ದಾರೆ. ವೇದಿಕೆಯ ತತ್ವ, ಸಿದ್ಧಾಂತಗಳಿಗೆ ಬದ್ಧರಾಗಿ, ಕನ್ನಡ ನಾಡ ಸೇವೆಗೆ ಶ್ರಮಿಸುವಂತೆ ಸೂಚಿಸಿದ್ದಾರೆ.
ಅಧ್ಯಕ್ಷರ ನೇಮಕ
ಬಳ್ಳಾರಿ: ಜಯ ಕರ್ನಾಟಕ ಸಂಘಟನೆಯ ಬಳ್ಳಾರಿ ಗ್ರಾಮಾಂತರ ಘಟಕದ ಅಧ್ಯಕ್ಷರಾಗಿ ಎಸ್. ಮೃತ್ಯುಂಜಯ ಆಯ್ಕೆಯಾಗಿದ್ದಾರೆ. ಸಂಘಟನೆ ಜಿಲ್ಲಾಧ್ಯಕ್ಷ ಪಿ. ರವೀಂದ್ರ ರೆಡ್ಡಿ ಮೃತ್ಯುಂಜಯ ಅವರನ್ನು ಆಯ್ಕೆ ಮಾಡಿದ್ದು, ಸಂಘಟನೆಯನ್ನು ಬಲಿಷ್ಠಗೊಳಿಸಲು ಶ್ರಮಿಸುವಂತೆ ತಿಳಿಸಿದ್ದಾರೆ.
ಬಿಜೆಪಿಗೆ ನೇಮಕ
ಬಳ್ಳಾರಿ: ಭಾರತೀಯ ಜನತಾ ಪಕ್ಷದ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯದರ್ಶಿಯಾಗಿ ಎಚ್. ತಿಪ್ಪಣ್ಣ ನೇಮಕವಾಗಿದ್ದಾರೆ. ಎಚ್. ತಿಪ್ಪಣ್ಣ, ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷವನ್ನು ಸಂಘಟಿಸುವಂತೆ ಮತ್ತು ಪಕ್ಷದ ಅಭಿವೃದ್ಧಿಗಾಗಿ ಶ್ರಮಿಸುವಂತೆ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ದತ್ತಾತ್ರೆಯ ರೆಡ್ಡಿ ತಿಳಿಸಿದ್ದಾರೆ.್ಣ
ಮೊಬೈಲ್ ಕರೆಯಿಂದ ಸಾರಿಗೆ ಮಾಹಿತಿ
ಬಳ್ಳಾರಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅನುಸೂಚಿತ ಹಾಗೂ ಮತ್ತಿತರ ಮಾಹಿತಿಯನ್ನು ಮೊಬೈಲ್ ಕರೆ ಮಾಡುವ ಮೂಲಕ ಪಡೆಯಬಹುದೆಂದು ನಿಲ್ದಾಣಾಧಿಕಾರಿ ಇಕ್ಬಾಲ್ ಅಹ್ಮದ್ ತಿಳಿಸಿದ್ದಾರೆ. ಅಗತ್ಯವಿರುವವರು ಬಳ್ಳಾರಿ ಹಳೆ ಬಸ್ ನಿಲ್ದಾಣದ ಮೊಬೈಲ್ ಸಂಖ್ಯೆ 7760973329 ಹಾಗೂ ಬಳ್ಳಾರಿ ಕೇಂದ್ರ ಬಸ್ ನಿಲ್ದಾಣದ ಮೊ.ಸಂ-7760973328ನ್ನು ಸಂಪರ್ಕಿಸಿ ಪಡೆಯಬಹುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಆಟೋಟಗಳಲ್ಲಿ ಪಾಲ್ಗೊಳ್ಳಿ: ಅನಿರುದ್ಧ ಶ್ರವಣ್
ಬಳ್ಳಾರಿ: ಗೃಹರಕ್ಷಕರು ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಆಟೋಟಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಸಹಾಯಕ ಆಯುಕ್ತ ಪಿ. ಅನಿರುದ್ಧ ಶ್ರವಣ್ ತಿಳಿಸಿದರು.
ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ವೃತ್ತಿಪರ ಹಾಗೂ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಈ ಕ್ರೀಡಾಕೂಟದಲ್ಲಿ ಗೃಹರಕ್ಷಕರಲ್ಲದೆ ಅವರ ಕುಟುಂಬ ಸದಸ್ಯರು ಭಾಗವಹಿಸಿರುವುದು ವಿಶೇಷ ಎಂದರು.
ಸಮಾದೇಷ್ಟ ಎಂ.ಎ. ಷಕೀಬ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಂಡಿದ್ದ ಈ ಕ್ರೀಡಾಕೂಟದಲ್ಲಿ ಎಲ್ಲ ಗೃಹರಕ್ಷಕರು ಉತ್ತಮ ಪ್ರದರ್ಶನ ನೀಡಿದ್ದು, ಅದೇ ರೀತಿ ವಲಯ ಹಾಗೂ ರಾಜ್ಯ ಮಟ್ಟದಲ್ಲಿ ಪಾಲ್ಗೊಂಡು ಜಿಲ್ಲೆಗೆ ಕೀರ್ತಿ ತರಬೇಕು ಎಂದರು.
ಕಾರ್ಯಕ್ರಮದಲ್ಲಿ ಆರಕ್ಷಕ ಉಪ ಅಧೀಕ್ಷಕ ಎಸ್.ವಿ. ಯಾದವ್, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ, ಜೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಅಸ್ಮಾ ಖಾತೂನ್, ಜಿ. ಬಸವರಾಜ್, ಜೆ. ಸುರೇಶ್, ಬಿ.ಕೆ. ಬಸವಲಿಂಗ, ಸಿಬ್ಬಂದಿ ವರ್ಗ, ಮತ್ತಿತರರು ಭಾಗವಹಿಸಿದ್ದರು. ಸಹಾಯಕ ಬೋಧಕ ಎಚ್. ತಿಪ್ಪೇಸ್ವಾಮಿ ಸ್ವಾಗತಿಸಿ, ವರದಿ ವಾಚನ ಮಾಡಿದರು. ಉಪ ಸಮಾದೇಷ್ಟ ಎಸ್.ಎ. ವಾಹಿದ್ ನಿರೂಪಿಸಿದರು.
--