ಮತ್ತೆ ಬರುತ್ತೇನೆಂದವರು ಮರೆಯಾದರು
ಕನ್ನಡಪ್ರಭ ವಾರ್ತ, ಹೊಸಪೇಟೆ, ಡಿ. 11
ಮೈಸೂರಿನ ಮಹಾರಾಜ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹೃದಯಾಘಾತಕ್ಕೆ ಒಳಗಾಗಿ ನಿಧರಾಗಿರುವ ಸುದ್ದಿ ನಾಡಿನ ಜನರಿಗೆ ಅಘಾತ ತಂದಿದೆ. ಸ್ವಾತಂತ್ರ್ಯಾ ನಂತರ ರಾಜರನ್ನಾಗಲಿ, ಅವರ ಆಡಳಿತ ಹೇಗಿತ್ತು ಎನ್ನುವುದಾಗಲಿ ತಿಳಿಯಲು ಇದ್ದ ಏಕೈಕ ವ್ಯಕ್ತಿ ಒಡೆಯರ್, ಅವರನ್ನು ದಸರಾ ದರ್ಬಾರಿನಲ್ಲಿ ನೋಡಿ ರಾಜ ವೈಭವ ತಿಳಿಯುತ್ತಿದ್ದರು. ಆದರೆ ಇದು ಇನ್ನು ಕೇವಲ ನೆನಪು ಮಾತ್ರ.
ಅಂತೆಯೇ ಮೈಸೂರು ಮಹಾರಾಜರು ಆಗಸ್ಟ್ 4, 2011ರಂದು ಇಲ್ಲಿನ ಹಂಪಿ ಮತ್ತು ದರೋಜಿ ಕರಡಿ ಧಾಮಕ್ಕೆ ಭೇಟಿ ನೀಡಿದ್ದರು. ಕರಡಿಧಾಮದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎನ್. ಕಿರಣ್, ವಲಯಾರಣ್ಯಾಧಿಕಾರಿಗಳಾದ ರವೀಂದ್ರನಾಥ್, ಗೋಪಾಲ್ ಇವರೊಂದಿಗೆ ಬಂದಿದ್ದ ಮಹಾರಾಜರಿಗೆ ಉಪನ್ಯಾಸಕ ಸಮದ್ ಕೊಟ್ಟೂರು ಕರಡಿ ಹಾಗೂ ಇಲ್ಲಿನ ಜೀವ ವೈವಿಧ್ಯದ ಕುರಿತು ವಿವರಿಸಿದ್ದರು. ಅತ್ಯಂತ ನಾಚಿಕೆ ಸ್ವಭಾವದ ಕರಡಿಗಳನ್ನು ಹಾಡ ಹಗಲೆ ನೋಡಿ ಅರಸರು ಸಂತಸಪಟ್ಟಿದ್ದರು. ಸಂತೋಷದಿಂದಲೇ ತಮ್ಮ ಕ್ಯಾಮೆರಾದಲ್ಲಿ ಕರಡಿಗಳ ಚಿತ್ರಗಳನ್ನು ಸೆರೆಹಿಡಿದಿದ್ದರು. ಮತ್ತೊಮ್ಮೆ ತಮ್ಮ ಪರಿವಾರ ಸಮೇತ ಬರುವುದಾಗಿ ತಿಳಿಸಿದ್ದರು. ಅದು ಸಾಧ್ಯವಾಗುವುದರೊಳಗೆ ಅವರು ದೂರವಾಗಿದ್ದಾರೆ.
ಹಂಪಿಗೆ ಬಂದು ಹಂಪಿಯ ಪ್ರತಿ ಸ್ಮಾರಕಗಳನ್ನು ವೀಕ್ಷಿಸಿ, ಸ್ಮಾರಕಗಳ ಚಿತ್ರಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿರುವ ದೃಷ್ಯವನ್ನು ನೋಡಿದಾಗ ಮಹಾರಾಜರು ಅತ್ಯುತ್ತಮ ಛಾಯಾಗ್ರಾಹಕರಾಗಿದ್ದರು ಎಂಬುದು ಸರ್ವವಿಧಿತ. ಇವರ ಸಾವಿನ ಸುದ್ದಿ ಹಂಪಿಯ ಜನತೆಗೆ ತುಂಬ ನೋವು ತರಿಸಿದೆ.
ಅರಸರೊಂದಿಗೆ ಕಳೆದ ಕೆಲ ಕ್ಷಣಗಳು ಅವಿಸ್ಮರಣೀಯ, ರಾಜ ವಂಶಸ್ಥ ಎಂಬ ಭಾವನೆ ಇಲ್ಲದೆ, ಮಗುವಿನಂತೆ ಮುಗ್ಧವಾಗಿದ್ದ ಇವರು, ವಿನಯ ಹಾಗೂ ಸರಳತೆಯ ಸಾಗರವಾಗಿದ್ದರು. ಎಲ್ಲರೊಂದಿಗೆ ಆತ್ಮೀಯವಾಗಿ ಮಾತನಾಡುತ್ತಿದ್ದರು. ಇಂತಹ ವ್ಯಕ್ತಿಯ ನಿಧನ ದುಃಖಕರ ಸಂಗತಿ ಎಂದು ಸಮದ್ ಕೊಟ್ಟೂರು ವಿಷಾದ ವ್ಯಕ್ತಪಡಿಸಿದ್ದಾರೆ.
ಕನ್ನಡದ ಅರಸರ ಭವ್ಯತೆ ಹಾಗೂ ರಾಜ ಗಾಂಭೀರ್ಯದ ಪ್ರತೀಕದಂತಿದ್ದ ಅರಸರು ದಸರಾ ಸಂಭ್ರಮದ ಕೇಂದ್ರ ಬಿಂದುವಾಗಿದ್ದರು. ಇವರು ದಸರಾ ಮೆರವಣಿಗೆಯಲ್ಲಿ ಭಾಗವಹಿಸುವುದು, ಸ್ವರ್ಣ ಸಿಂಹಾಸನದಲ್ಲಿ ಕುಳಿತಿರುವುದು, ಬನ್ನಿಮರಕ್ಕೆ ಪೂಜೆ ಸಲ್ಲಿಸುವುದು ನೋಡುವುದೆ ಅದ್ಭುತವಾಗಿತ್ತು. ಇವರಿಲ್ಲದ ಮುಂದಿನ ದಸರಾ ಹೇಗಿರುತ್ತೋ ಎಂಬ ಪ್ರಶ್ನೆ ನಾಡಿನ ಜನತೆಯನ್ನು ಕಾಡುತ್ತಿದೆ. ಇವರ ಅಕಾಲಿಕ ನಿಧನಕ್ಕೆ ಈ ಭಾಗದ ಜನತೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದೆ.