ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಶರಣಪ್ಪನಿಗೆ ಸೇರುತ್ತೆ ಮೊದಲ ಪಾಲು

Lingaraj Badiger
Updated On : 12 Dec 2013, 11:27 am

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಡಿ. 11
ಎರಡು ಶತಮಾನಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ತಾಲೂಕಿನ ಗಡಿಗ್ರಾಮ ಕಾನಮಡಗು ದಾಸೋಹ ಮಠ ನಿತ್ಯ ಅನ್ನ ಹಾಗೂ ಅಕ್ಷರ ದಾಸೋಹಕ್ಕೆ ಜಿಲ್ಲೆಯಲ್ಲಿ ಹೆಸರುವಾಸಿ.
ಈ ಮಠದಲ್ಲಿ ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ಕಾರ್ತಿಕ ನಡೆದ ಮಾರನೇ ದಿನ ರಥೋತ್ಸವ ನಡೆಸುವುದು ಒಂದು ವಿಶೇಷವಾದರೆ ಸುತ್ತಮುತ್ತಲ ನೂರಾರು ಹಳ್ಳಿಗಳ ರೈತರು ಜಮೀನಿನಲ್ಲಿ ಬೆಳೆದ ಯಾವುದೇ ಫಸಲು ಬಂದರೂ ಕಾನಮಡಗು ಶರಣಪ್ಪನ ಮಠಕ್ಕೆ ಒಪ್ಪಿಸುವುದು ವಾಡಿಕೆ.
ಈ ವರ್ಷ ಡಿ. 11ರಂದು ರಥೋತ್ಸವ ನಡೆಯಿತು. ಭಕ್ತರು ಬರೀ ರಥೋತ್ಸವ  ನೋಡಲು ಬಾರದೆ ಮನೆ ಹಿತ್ತಲು ಹಾಗೂ ಜಮೀನಿನಲ್ಲಿ ಯಾವುದೇ ಬೆಳೆ ಬಂದರೂ ಸ್ವಲ್ಪ ಧಾನ್ಯವನ್ನು ಮಠಕ್ಕೆ ನೀಡಿ ಶರಣಬಸವೇಶ್ವರ ಸ್ವಾಮಿಗೆ ಭಕ್ತಿಯಿಂದ ಅರ್ಪಿಸುವುದು ಇಲ್ಲಿಯ ಪೂರ್ವಜರಿಂದ ನಡೆದು ಬಂದಿದೆ. ಈ ದೃಶ್ಯವನ್ನು ರಥೋತ್ಸವ ಸಮಯದಲ್ಲಿ ನೋಡುವುದೆ ಒಂದು ಸೊಬಗು. ಮಠದ ಧರ್ಮಾಧಿಕಾರಿ ಐಮಡಿ ಶರಣಾರ್ಯರು ಡಿ. 12ರಂದು ಬೆಳಗ್ಗೆ 11 ಗಂಟೆಗೆ ಸರ್ವಧರ್ಮಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಿಕೊಡಲು ಮುಂದಾಗಿದ್ದಾರೆ.
ಮಠದ ಪರಂಪರೆ: ಎರಡು ನೂರು ವರ್ಷಗಳ ಹಿಂದೆ ಕುಗ್ರಾಮವಾಗಿದ್ದ ಕಾನಮಡುಗು ಗ್ರಾಮಕ್ಕೆ ದಿವ್ಯಶಕ್ತಿಯ, ಸದಾ ತೇಜಸ್ಸಿನ ವ್ಯಕ್ತಿಯೊಬ್ಬ ಆಗಮಿಸಿ, ಪವಾಡ ಪ್ರದರ್ಶಿಸುತ್ತ ತನ್ನ ಭಕ್ತ ಸಮೂಹಕ್ಕೆ ಪೂಜನೀಯರೆನಿಸಿದ ಶರಣನೇ ಕಾನಮಡಗು ದಾಸೋಹ ಮಠದ ಶ್ರೀ ಚನ್ನಬಸವ. ಪ್ರತಿನಿತ್ಯ ತಾನು ಭಿಕ್ಷಾಟನೆ ಕೈಗೊಂಡು ಜನರ ಹಸಿವು ನೀಗಿಸಲು ದಾಸೋಹ ಕಾರ್ಯಕ್ಕೆ ಮುಂದಾಗಿದ್ದರೆಂಬುದು ಮಹಾ ದಾಸೋಹಿ ಕಾನಮಡುಗು ಶ್ರೀ ಶರಣಾರ್ಯರ ಕೃತಿಯಿಂದ ತಿಳಿದು ಬರುತ್ತದೆ. ಶ್ರೀ ಮಠವು ಮೂಲ ಶರಣಾರ್ಯರ ನಂತರ ಇಮ್ಮಡಿ, ಮುಮ್ಮಡಿ, ನಾಲ್ಮಡಿ ಶರಣಾರ್ಯರಿಂದ ಅನ್ನ ದಾಸೋಹದ ಜತೆ ಅಕ್ಷರ ದಾಸೋಹಕ್ಕೆ ಆದ್ಯತೆ ನೀಡಿರುವುದು ಹೆಗ್ಗಳಿಕೆ. ಹಾಗಾಗಿ ಸ್ವಾತಂತ್ರ್ಯಪೂರ್ವದಲ್ಲೇ ಶ್ರೀ ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘ ಪ್ರಾರಂಭಿಸಿ, ಈ ಭಾಗದ ಅನಕ್ಷರಸ್ಥರಿಗೆ ಶಿಕ್ಷಣ ನೀಡುವುದರ ಮೂಲಕ ಜನತೆಗೆ ಮತ್ತಷ್ಟು ಈ ಮಠ ಹತ್ತಿರವಾಯಿತು.
1931ರಲ್ಲಿ ಬ್ರಿಟಿಷ್ ಅಧಿಕಾರಿ ಡೇವಿಡ್‌ನ ಅನುಮತಿಯೊಂದಿಗೆ ಹೈಯರ್ ಎಲಿಮೆಂಟರಿ ಶಾಲೆ, ಉತ್ತಮ ದರ್ಜೆಯ ಕೀರ್ತಿಯೊಂದಿಗೆ 1961ರಲ್ಲಿ ಪ್ರೌಢಶಾಲೆ, ನಂತರ 1973ರಲ್ಲಿ ಶಿಕ್ಷಕರ ತರಬೇತಿ ಕೇಂದ್ರ ಸ್ಥಾಪಿಸಿ ಈ ಭಾಗದ ಜನತೆಗೆ ಅನ್ನದ ಜತೆ ಅಕ್ಷರ ದಾಸೋಹ ಕರುಣಿಸಿದ್ದಾರೆ. ಮಠದ ಗುರುಕುಲದಲ್ಲಿ ಅನೇಕ ಬಡ ವಿದ್ಯಾರ್ಥಿಗಳು ವಿದ್ಯೆ ಕಲಿಯುತ್ತಾರೆ. ಇಲ್ಲಿ ಕಲಿತವರು ಉನ್ನತ ಹುದ್ದೆಗೇರಿದ್ದಾರೆ. ಕೋಚ, ಎಚ್.ಎಂ. ಮರುಳಸಿದ್ದಯ್ಯ, ನಿಡುಮಾಮಿಡಿ ಸ್ವಾಮೀಜಿ ಸೇರಿದಂತೆ ಗಣ್ಯಾತಿಗಣ್ಯರು ಇಲ್ಲಿ ಶಿಕ್ಷಣ ಪಡೆದಿದ್ದಾರೆ.
- ಭೀಮಣ್ಣ ಗಜಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement