ಲಾರಿಗಳ ಸಂಚಾರ ನಿಯಂತ್ರಣಕ್ಕೆ ಆಗ್ರಹ
ಬಳ್ಳಾರಿ: ರಾತ್ರಿ ಹೊತ್ತಲ್ಲಿ ಸಂಚರಿಸಿ, ಸಾರ್ವಜನಿಕರಿಗೆ ತೊಂದರೆ ನೀಡುವ ಹರಗಿನಡೋಣಿಯ ಟೀಫಿನ್ ಬ್ಯಾಟರೀಸ್ ಮೈನ್ಸ್ ಕಂಪನಿ ಲಾರಿಗಳನ್ನು ನಿಯಂತ್ರಿಸಬೇಕೆಂದು ಒತ್ತಾಯಿಸಿ ತಾಲೂಕಿನ ಬಿ. ಬೆಳಗಲ್ಲು ಗ್ರಾಮದ ನಿವಾಸಿಗಳು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್‌ಗೆ ಮನವಿಪತ್ರ ಸಲ್ಲಿಸಿದ್ದಾರೆ.
ತಾಲೂಕಿನ ಬಿ. ಬೆಳಗಲ್ಲು ಗ್ರಾಮದ ಮಾರ್ಗವಾಗಿ ಹರಗಿನಡೋಣಿ ಮೂಲಕ ಟೀಫಿನ್ ಬ್ಯಾಟರೀಸ್ ಮೈನ್ಸ್ ಕಂಪನಿಗಳಿಗೆ ನಿತ್ಯ ರಾತ್ರಿ ಹೊತ್ತಲ್ಲಿ ಸಂಚರಿಸುವ ಲಾರಿಗಳು ಅತಿವೇಗ, ಅಜಾಗರೂಕತೆಯಿಂದ ಚಲಿಸುತ್ತಿದ್ದು, ಅಪಘಾತಗಳಿಗೆ ಆಹ್ವಾನವೀಯುತ್ತಿವೆ. ಈಚೆಗೆ ಈ ರಸ್ತೆಯಲ್ಲೇ ರಾತ್ರಿ ಹೊತ್ತು ಎರಡು ಅಪಘಾತಗಳು ಸಂಭವಿಸಿದ್ದು, ಲಾರಿಗಳ ಸಂಚಾರ ಹೀಗೆ ಮುಂದುವರಿದಲ್ಲಿ ಇನ್ನಷ್ಟು ಅಪಘಾತಗಳು ಹೆಚ್ಚಳವಾಗುವ ಸಂಭವವಿದೆ ಎಂದು ಬೆಳಗಲ್ ಗ್ರಾಮದ ಬಿ. ಶ್ರೀನಿವಾಸ, ತಿಮ್ಮಪ್ಪ, ರಾಮಣ್ಣ, ಹನುಮಂತ, ಅಂಬರೇಶ್, ಹುಲುಗಪ್ಪ ತಿಳಿಸಿದ್ದಾರೆ.
ಗ್ರಾಮದ ಒಳಗಿನಿಂದ ಸಂಚರಿಸುವ ಲಾರಿಗಳಿಂದ ವಿಪರೀತ ಶಬ್ದ ಮಾಲಿನ್ಯವಾಗುತ್ತಿದ್ದು, ರಸ್ತೆಬದಿಯ ಮನೆಗಳ ನಿವಾಸಿಗಳಿಗೆ ಪ್ರತಿನಿತ್ಯ ನಿದ್ರೆಯೇ ಬಾರದಾಗಿದೆ. ಪಕ್ಕದಲ್ಲೆ ಇರುವ ಶಾಲೆಯಲ್ಲಿ ಗ್ರಾಮದ ನೂರಾರು ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಲಾರಿಗಳ ವಿಪರೀತ ಸಂಚಾರದಿಂದ ಯಾವ ಹೊತ್ತಲ್ಲಿ ಯಾವ ಅಪಘಾತ ಸಂಭವಿಸುವುದೊ ಎಂಬ ಆತಂಕದಲ್ಲಿ ಗ್ರಾಮಸ್ಥರು ದೂಡುತ್ತಿದ್ದಾರೆ. ಆದ್ದರಿಂದ ಕೂಡಲೆ ಲಾರಿಗಳ ಸಂಚಾರಕ್ಕೆ ನಿರ್ಬಂಧ ಹೇರಬೇಕೆಂದು ಡಿಸಿಗೆ ಸಲ್ಲಿಸಿರುವ ಮನವಿಯಲ್ಲಿ ಆಗ್ರಹಿಸಿದ್ದಾರೆ.