ಹೋಮದಿಂದ ಸಮಸ್ತ ಜನ ಕಲ್ಯಾಣ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಡಿ. 12
ದುಃಖ, ರೋಗ, ರಾಗ, ದ್ವೇಷ ನಿವಾರಕ ಶಕ್ತಿ ಅತಿರುದ್ರ ಮಹಾಯಾಗಕ್ಕೆ ಇದೆ. ಸಮಸ್ತರ ಕಲ್ಯಾಣವೇ ಹೋಮ ನಡೆಸುವುದಕ್ಕೆ ಪ್ರಮುಖ ಕಾರಣ. ಇಂತವುಗಳಿಂದ ಎಲ್ಲ ಬಗೆಯ ಏಳಿಗೆ ಕಾಣಬಹುದಾಗಿದೆ ಎಂದು ಉಜ್ಜಿನಿ ಪೀಠದ ಶ್ರೀ ಸಿದ್ಧಲಿಂಗರಾಜ ದೇಶೀಕೇಂದ್ರ ಶಿವಾಚಾರ್ಯರು ಹೇಳಿದರು.
ಗುರುವಾರ ಪಟ್ಟಣದ ಮಾನವ ಧರ್ಮ ಆಚಾರ ಸಂಸ್ಕೃತಿ ಜ್ಞಾನಾಶ್ರಮ ಟ್ರಸ್ಟ್ ಸಾರಂಗ ಮಠದ ರವೀಂದ್ರ ಸ್ವಾಮೀಜಿ ನೇತೃತ್ವದಲ್ಲಿ ಏರ್ಪಡಿಸಿದ್ದ 2ನೇ ವರ್ಷದ ಅತಿರುದ್ರ ಮಹಾಯಾಗಕ್ಕೆ ಪೂರ್ಣಾಹುತಿ ಸಲ್ಲಿಸಿ ನಂತರ ನಡೆದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಸರ್ವರ ಏಳಿಗೆ, ಧಾರ್ಮಿಕ ವಿಧಿ ವಿಧಾನಗಳ ಪ್ರಮುಖ ಅಂಶವಾಗಿದೆ. ಹೋಮ ಎಲ್ಲಾ ಬಗೆಯ ದಾರಿದ್ರ್ಯವನ್ನು ನಿವಾರಿಸುತ್ತದೆ. ಪರಿಸರದಲ್ಲಿನ ಅನೈರ್ಮಲ್ಯವನ್ನು ಹೊಡೆದೋಡಿಸುತ್ತದೆ ಎಂದು ಪ್ರತಿಪಾದಿಸಿದ ಅವರು, ಸರ್ವಜನಾಂಗಕ್ಕೆ ಅದರಲ್ಲೂ ರೈತಾಪಿ ಜನತೆ ಬೆಳೆದ ಬೆಳೆಗೆ ತಕ್ಕ ಮೌಲ್ಯ ಸಿಗುವಂತಾಗಲು ಇದು ಸಹಕಾರಿಯಾಗಲಿ ಎಂದರು.
ನಾಶಪಡಿಸುವ ಷಡ್ಯಂತ್ರ
ಶ್ರೀರಾಮಸೇನೆ ರಾಷ್ಟ್ರಧ್ಯಕ್ಷ ಪ್ರಮೋದ್ ಮುತಾಲಿಕ್ ಮಾತನಾಡಿ ಯಾಗ, ಹೋಮ, ಹವನಗಳು ಹಿಂದೂ ರಾಷ್ಟ್ರದ ಧ್ಯೇಯ ಮತ್ತು ಸಂಕೇತಗಳು. ಇವುಗಳೇ ನಮ್ಮಗಳ ಸಂಸ್ಕೃತಿಗಳಾಗಿವೆ. ಇಂಥವುಗಳನ್ನು ರಾಜ್ಯದಲ್ಲಿ ಸಂಪೂರ್ಣ ನಾಶಪಡಿಸುವ ಷಡ್ಯಂತ್ರ ಈಗ ಆರಂಭಗೊಂಡಿದೆ. ನಾಶಪಡಿಸುವವರೆ ನಾಶವಾಗಿ ಹೋಗುತ್ತಾರೆ ಎಂದು ಹೇಳಿದರು.
ಮೌಢ್ಯ ಪ್ರತಿಬಂಧಕ ಕಾಯ್ದೆ ಹೆಸರಿನಲ್ಲಿ ನಂಬಿಕೆ, ವಿಶ್ವಾಸ, ಶ್ರದ್ಧೆಗಳಿಗೆ ಧಕ್ಕೆ ತರಲು ಮುಂದಾಗಿರುವ ಸಿದ್ದರಾಮಯ್ಯ ಸರ್ಕಾರ ಕೆಲ ಭಟ್ಟಂಗಿಗಳ ಮಾತುಕೇಳಿ ಅವಸರಕ್ಕೆ ಮುಂದಾಗಬಾರದು. ಮೌಢ್ಯತೆಯ ಹೆಸರಿನ ಕಾನೂನನ್ನು ತರದಂತೆ ರಾಜ್ಯದ ಜನತೆ ಕಾಗದ ಬರೆಯುವ ಮೂಲಕ ಒತ್ತಾಯಿಸಲು ಮುಂದಾಗಬೇಕು ಎಂದು ಕರೆ ನೀಡಿದ ಅವರು, ಮೂಢನಂಬಿಕೆ ಬಗ್ಗೆ ಸರ್ಕಾರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕೆ ಹೊರತು ಜನರ ಮೇಲೆ ಪ್ರಹಾರ ಮಾಡಲು ಮುಂದಾಗಬಾರದು ಎಂದರು.
ರಾಷ್ಟ್ರವನ್ನು ಗಟ್ಟಿಗೊಳಿಸುವ ಕಾರ್ಯದತ್ತ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕೆ ಹೊರತು, ದುರ್ಬಲ ಧೋರಣೆಗಳನ್ನಿರಿಸಿಕೊಂಡು ಅಧಿಕಾರವನ್ನು ಯಾರೊಬ್ಬರೂ ದುರುಪಯೋಗಪಡಿಸಿಕೊಳ್ಳಬಾರದು ಎಂದರು.
ಕೊಟ್ಟೂರು ಹಿರೇಮಠಾಧ್ಯಕ್ಷ ಯೋಗಿರಾಜೇಂದ್ರ ಶಿವಾಚಾರ್ಯರು, ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯರು, ಹಗರಿಬೊಮ್ಮನಹಳ್ಳಿಯ ಹಾಲಶಂಕರ ಸ್ವಾಮೀಜಿ, ವಕೀಲ ಎಂ.ಎಂ.ಜೆ. ಸ್ವರೂಪಾನಂದ ಮಾತನಾಡಿದರು. ಸಾರಂಗ ಮಠದ ರವೀಂದ್ರ ಸ್ವಾಮೀಜಿ ಪ್ರಾಸ್ತಾವಿಕ ಮಾತನಾಡಿದರು.