ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ನಿರಂತರ ವಿದ್ಯುತ್ ಪೂರೈಕೆಗಾಗಿ ಧರಣಿ

Mainashree
Updated On : 14 Dec 2013, 10:16 am

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ ಡಿ. 13
ರಾಜ್ಯಾದ್ಯಂತ ಕಬ್ಬಿನ ಬೆಲೆ ನಿಗದಿ ಕುರಿತು ರೈತರು ನಿರಂತರ ಹೋರಾಟದಲ್ಲಿ ಅನ್ನದಾತನನ್ನು ಬಲಿ ತೆಗೆದುಕೊಂಡ ಸರ್ಕಾರಕ್ಕೆ ಈಗ ಮತ್ತೊಂದು ಕಂಠಕ ಎದುರಾಗಿದೆ.
ಕಬ್ಬಿನ ಬೆಲೆ ನಿಗದಿ ಹೋರಾಟದ ಬೆನ್ನಲ್ಲೆ ದೇಶಕ್ಕೆ ಅನ್ನ ನೀಡುವ ಅನ್ನದಾತನಿಗೆ ಕೇವಲ 6 ತಾಸು ವಿದ್ಯುತ್ ನೀಡುವ ಸರ್ಕಾರದ ವಿರುದ್ಧ ಸಿಡಿಗೆದ್ದಿರುವ ರೈತರು, ಡಿ. 16ರಂದು ಹೂವಿನಹಡಗಲಿ ಸಂಪೂರ್ಣ ಬಂದ್ ಮಾಡಿ, ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಮನೆ ಹಾಗೂ ಕೆಇಬಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹದ ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನ ಕೊಟ್ನಿಕಲ್ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ತಾಲೂಕಿನ ಹತ್ತಾರು ಹಳ್ಳಿಗಳ ರೈತರು ಶುಕ್ರವಾರ ಈ ಕುರಿತಂತೆ ಪೂರ್ವಭಾವಿ ಸಭೆ ನಡೆಸಿದರು. ಡಿ. 16ರಂದು ರೈತರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಹೂವಿನಹಡಗಲಿ ಬಂದ್‌ಗೆ ಕರೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ರೈತ ಸಂಘದ ಅಧ್ಯಕ್ಷ ಎಂ. ಗಂಗಾಧರ, ಸರ್ಕಾರ ರೈತರಿಗೆ ವಿದ್ಯುತ್ ಎಂದು ಬೇಕಾಬಿಟ್ಟಿಯಾಗಿ ನೀಡುತ್ತಿದೆ. ನಿರಂತರ ಕಣ್ಣುಮುಚ್ಚಾಲೆ ಆಟವಾಗಿದೆ. ಇದರಿಂದ ರೈತರ ಮೋಟಾರ್ ಪಂಪ್‌ಸೆಟ್ ಸುಟ್ಟು ಹೋಗಿ, ಅಪಾರ ಪ್ರಮಾಣದ ಬೆಳೆ ಹಾನಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ರೈತರನ್ನು ಮತ್ತಷ್ಟು ಸಾಲದ ಶೂಲಕ್ಕೆ ಸಿಲುಕುವಂತೆ ಮಾಡುತ್ತಿದೆ ಎಂದು ದೂರಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲವನ್ನೂ ಹೋರಾಟದ ಮೂಲಕ ಪಡಿಬೇಕಾದ ಅನಿವಾರ್ಯತೆ ರೈತರಿಗೆ ಎದುರಾಗಿದೆ. ಸರ್ಕಾರ ಈ ಕೂಡಲೇ ರೈತರ ಪಂಪ್‌ಸೆಟ್‌ಗಳಿಗೆ ನಿರಂತರ 10 ತಾಸು 3 ಫೇಸ್ ಗುಣಮಟ್ಟದ ವಿದ್ಯುತ್ ನೀಡಬೇಕು. ವಾರದೊಳಗೆ ಬೇಡಿಕೆ ಈಡೇರಿಸದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಹಾಗೂ ಕೆಇಬಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರೈತ ಮುಖಂಡ ಹಣ್ಣಿ ಕುರುಗೋಡೆಪ್ಪ ಮಾತನಾಡಿ, ರೈತರಿಗೆ ನಿರಂತರ ವಿದ್ಯುತ್ ನೀಡದಿದ್ದರೆ ಆಹಾರ ಧಾನ್ಯಗಳ ಉತ್ಪಾದನೆ ಕುಂಠಿತಗೊಳ್ಳಲಿದೆ. ಆದ್ದರಿಂದ ಸರ್ಕಾರ ಮುಂಬರುವ ದಿನಗಳಲ್ಲಿ ಬೆಲೆ ಏರಿಕೆ ತಡೆಗಟ್ಟಲು ಹೈರಾಣರಾಗುವ ಮೊದಲೇ ಕ್ರಮ ಕೈಗೊಳ್ಳಬೇಕೆಂದರು.
ರೈತರ ಪಂಪ್‌ಸೆಟ್‌ಗಳಿಗೆ ಹಾಕಿರುವ ವಿದ್ಯುತ್ ಕಂಬಗಳು ಹಾಗೂ ತಂತಿ ಬಹಳಷ್ಟು ಹಳೆದಾಗಿವೆ. ಈ ಕೂಡಲೇ ಬದಲಾವಣೆಗೆ ಕ್ರಮ ಕೈಗೊಳ್ಳಬೇಕು. ರೈತ ಬೆಳೆದ ಆಹಾರದಿಂದ ತಾನೊಬ್ಬನೇ ಬದುಕಲಾರ, ಇತರರೆ ಸಾವಿರಾರು ಕುಟುಂಬಗಳಿಗೆ ಅನ್ನ ನೀಡುತ್ತಾನೆ. ಆದ್ದರಿಂದ ಸರ್ಕಾರ ನಿರಂತರವಾಗಿ 10 ತಾಸು ವಿದ್ಯುತ್ ಪೂರೈಕೆ ಮಾಡಬೇಕೆಂದು ಆಗ್ರಹಿಸಿದರು.
ಸಭೆಯಲ್ಲಿ ಗಡ್ಡ ಚನ್ನಬಸಪ್ಪ, ಹನುಮಂತಗೌಡ, ಶ್ರೀನಿವಾಸರೆಡ್ಡಿ, ಸತ್ಯಪ್ಪ, ಓಲಿ ಈಶಪ್ಪ, ವೀರಭದ್ರಗೌಡ, ಬಸಲಿಂಗಗೌಡ ಸೇರಿದಂತೆ ಕೊಂಬಳಿ, ನವಲಿ, ಮಾಗಳ, ಹೊನ್ನೂರು, ಕಾಗನೂರು, ಸೋವೇನಹಳ್ಳಿ, ಪುರ, ಕಂದಗಲ್ಲು, ಅಲ್ಲಿಪುರ, ರಾಜವಾಳ, ಹೂವಿನಹಡಗಲಿ, ಕೊಟ್ನಿಕಲ್ಲು, ಮದಲಗಟ್ಟಿ ಹತ್ತಾರು ಹಳ್ಳಿಗಳ ರೈತರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement