ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮಾಜಿ ಸಚಿವರಿಂದ ಕೊಲೆ ಬೆದರಿಕೆ

Mainashree
Updated On : 14 Dec 2013, 10:17 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 13
ಬ್ಲಾಕ್ ಅಧ್ಯಕ್ಷರಾಗಿ ತಮ್ಮ ಬ್ಲಾಕ್‌ನಲ್ಲಿರುವ ಪರಿಸ್ಥಿತಿಯ ಕುರಿತಾಗಿ ಕೆಪಿಸಿಸಿ ಕೇಳಿದ ಪ್ರಶ್ನೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಎನ್.ಎಂ. ನಬಿ ಹಾಗೂ ಅವರ ಮಗ, ಅನಂತರ ವೆಂಕಟೇಶ್ ಗುರುವಾರ ತಮ್ಮ ಮನೆಗೆ ಬಂದು ಅವಾಚ್ಯವಾಗಿ ಮಾತನಾಡಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ. ಶಶಿಧರಸ್ವಾಮಿ ಆರೋಪಿಸಿದ್ದಾರೆ.
ಶುಕ್ರವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ವಿಧಾನಸಭೆಯ ನಂತರ ಉಂಟಾದ ಅಭಿಪ್ರಾಯ ಭೇದಗಳನ್ನು ಪರಸ್ಪರ ಸೌಜನ್ಯದಿಂದ ಬಗೆಹರಿಸಿಕೊಳ್ಳುವುದು ಬಿಟ್ಟು, ತನ್ನ ಹಿಂಬಾಲಕರು, ಗೂಂಡಾಗುಂಪುಗಳೊಂದಿಗೆ ನನ್ನ ಮೇಲೆ ದೌರ್ಜನ್ಯ ನಡೆಸಿರುವ ಕಾಂಗ್ರೆಸ್ ಮುಖಂಡ ಎನ್.ಎಂ. ನಬಿ ಹಾಗೂ ಆತನ ಹಿಂಬಾಲಕರನ್ನು ಪಕ್ಷದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ವೈಯಕ್ತಿಕವಾಗಿ ಮತ್ತು ನನ್ನ ಸಂಗಡಿಗರು ಪಕ್ಷದ ಗೆಲುವಿಗಾಗಿ ಸಾಕಷ್ಟು ದುಡಿದಿದ್ದೇವೆ. ಆದರೆ, ನಬಿ ಅವರು ದುರದ್ದೇಶದಿಂದಾಗಿ ಪರಾಜಿತ ಅಭ್ಯರ್ಥಿ ಎಸ್. ವೆಂಕಟೇಶ್ ಅವರನ್ನು ಜೊತೆಗಿಟ್ಟುಕೊಂಡು, ತಮ್ಮ ವಿರುದ್ದ ದೂರು ನೀಡಿದ್ದರು. ಅಲ್ಲದೆ, ಚುನಾವಣೆ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಿಲ್ಲ. ಪಕ್ಷವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬುದಾಗಿ ಕೆಪಿಸಿಸಿಗೆ ದೂರು ಕೊಟ್ಟಿದ್ದರು. ಇದರಿಂದ ಕಂಗಾಲಾಗಿ, ಕೆಪಿಸಿಸಿ ಸಮಜಾಯಿಷಿ ಕೇಳಿದ್ದರಿಂದ ಮಾಹಿತಿ ನೀಡಿದ್ದೇನೆ ಎಂದರು.
ಅಲ್ಲದೆ, ಲೋಕಸಭೆ ಚುನಾವಣೆಗೆ ಪಕ್ಷವನ್ನು ಹೇಗೆ ಸಜ್ಜುಗೊಳಿಸುವ ಕುರಿತಂತೆಕೇಳಿದಾಗ, ಪರಾಜಿತ ಅಭ್ಯರ್ಥಿ ವೆಂಕಟೇಶ್ ಕ್ಷೇತ್ರಾದ್ಯಂತ ಎಲ್ಲಿಯೂ ಸಂಚರಿಸಿಲ್ಲ. ಮಾಜಿ ಮಂತ್ರಿ ಎನ್.ಎಂ. ನಬಿ ಪಕ್ಷದ ಬೆಳವಣಿಗೆಗೆ ಶ್ರಮಿಸುವುದಕ್ಕಿಂತ ಬೆಂಗಳೂರಿನ ಕೆಪಿಸಿಸಿ ಕಚೇರಿ ಮತ್ತು ಸಿಎಂ ಕಚೇರಿಯನ್ನು ಕೇಂದ್ರವಾಗಿಸಿಕೊಂಡು ವರ್ಗಾವಣೆ ಕೆಲಸದಲ್ಲಿ ತೊಡಗಿದ್ದಾರೆ ಎಂದು ವಿವರ ನೀಡಿದ್ದೇನೆ. ಇದರಿಂದಾಗಿ ಗುರುವಾರ ಮಧ್ಯಾಹ್ನ ನಬಿಸಾಬ್ ಮತ್ತು ಅವರ ಮಗ ನೂರ್ ಅಹಮದ್ ಸೇರಿದಂತೆ ಇಪ್ಪತ್ತು ಜನರು ಕಾನಾಮಡುಗಿನ ತಮ್ಮ ಮನೆಯ ಹತ್ತಿರ ಬಂದು, ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.
ನಬಿಸಾಬ್ ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ತಮ್ಮ ವಿರುದ್ಧ ಬೆಳೆಯುವವರ ಮೇಲೆ ಹಗೆ ಸಾಧಿಸುತ್ತಾರೆ. ಇನ್ನು ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣರಾಗಿದ್ದಾರೆ. ಕೂಡಲೇ ನಬಿಸಾಬ್ ಹಾಗೂ ಹಿಂಬಾಲಕರನ್ನು ಕಾಂಗ್ರೆಸ್‌ನಿಂದ ವಜಾಗೊಳಿಸಲು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಾಗರಾಜ್‌ಗೌಡ, ಯತೀಂದ್ರ, ಉದಯಜನ್ನು, ಬಿ. ಬಸವರಾಜ್, ವಿ.ಎಸ್. ಬಸವರಾಜ್, ಕಾವಾಲಿ ಶಿವಪ್ಪ, ವಿಭೂತಿ ಎರ್ರಿಸ್ವಾಮಿ, ಎನ್. ಮುದ್ದಪ್ಪ ಸೇರಿದಂತೆ ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement