ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸೆಮಿಸ್ಟರ್ ಪದ್ಧತಿ ಕೈಬಿಡಲು ಒತ್ತಾಯ

Mainashree
Updated On : 14 Dec 2013, 10:17 am

ಬಳ್ಳಾರಿ: ಐಟಿಐ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸರ್ಕಾರ ಪ್ರಸಕ್ತ ವರ್ಷದಿಂದಲೇ ಜಾರಿಗೊಳಿಸುತ್ತಿರುವ ಸೆಮಿಸ್ಟರ್ ಪದ್ಧತಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂಥ್ ಆರ್ಗನೈಸೇಷನ್ ಸಂಘಟನೆಯ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸ್ಥಳೀಯ ವಿವಿಧ ಐಟಿಐ ಕಾಲೇಜ್‌ಗಳ ನೂರಾರು ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಐಟಿಐ ವಿದ್ಯಾರ್ಥಿಗಳು ಗಡಿಗಿ ಚನ್ನಪ್ಪ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.
ಎಐಡಿವೈಒ ಜಿಲ್ಲಾ ಉಪಾಧ್ಯಕ್ಷ ರಂಗಯ್ಯ ಶಿಡಿಗಿನಮೊಳ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ, ಇದೇ ಶೈಕ್ಷಣಿಕ ವರ್ಷದಿಂದಲೇ ಅನ್ವಯವಾಗುವಂತೆ ಐಟಿಐ ವಿದ್ಯಾರ್ಥಿಗಳಿಗೆ ಡಿಜಿಇಟಿಯಿಂದ ಜಾರಿ ಮಾಡಲು ಹೊರಟಿರುವ ಸೆಮಿಸ್ಟರ್ ಪದ್ಧತಿ ವಿದ್ಯಾರ್ಥಿ ವಿರೋಧಿ ಕ್ರಮವಾಗಿದೆ. ಇದನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ನಂತರ ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಎಸ್. ಉಮೇಶ್ ಮಾತನಾಡಿ, ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಯಾವುದೇ ಒಂದು ಹೊಸ ಶಿಕ್ಷಣ ಪದ್ಧತಿಯನ್ನು ಜಾರಿಗೊಳಿಸುವ ಮುನ್ನ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳು, ಕಾಲೇಜು ಉಪನ್ಯಾಸಕರ ಮಧ್ಯೆ ವ್ಯಾಪಕ ಚರ್ಚೆ ನಡೆಸಿ ಸಲಹೆ, ಅಭಿಪ್ರಾಯಗಳನ್ನು ಸಂಗ್ರಹಿಸಬೇಕು. ಆದರೆ ಇದೀಗ ಸರ್ಕಾರ ಇವೆಲ್ಲವನ್ನೂ ಗಾಳಿಗೆ ತೂರಿ ಏಕಾಏಕಿ ಐಟಿಐ ವಿದ್ಯಾರ್ಥಿಗಳ ಮೇಲೆ ಸೆಮಿಸ್ಟರ್ ಪದ್ಧತಿಯನ್ನು ಬಲವಂತವಾಗಿ ಹೇರಿದೆ. ಇದು ಖಂಡನೀಯ. ಇದರಿಂದ ಒಂದೆಡೆ ವಿದ್ಯಾರ್ಥಿಗಳನ್ನು ಪರೀಕ್ಷೆಯ ಗುಂಗಿನಲ್ಲಿ ಇರಿಸಿ ಅವರಲ್ಲಿ ಸೃಜನಶೀಲತೆ, ಜ್ಞಾನದ ಹಂಬಲ, ವಿಷಯವನ್ನು ಆಳವಾಗಿ ಅರಿತುಕೊಳ್ಳುವಿಕೆ ಶಕ್ತಿ ಕುಗ್ಗಿ ಹೋಗುತ್ತದೆ ಎಂದು ತಿಳಿಸಿದರು. ನಂತರ ಸಂಘಟನೆಯ ಕಾರ್ಯಕರ್ತರು ಜಿಲ್ಲಾಡಳಿತದ ಮೂಲಕ ಡೈರೆಕ್ಟರೇಟ್ ಜನರಲ್ ಆಫ್ ಎಂಪ್ಲಾಯಿಮೆಂಟ್ ಆಂಡ್ ಟ್ರೇನಿಂಗ್, ಬೆಂಗಳೂರು ಇವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಎಐಡಿವೈಒ ಸಂಘಟನೆಯ ಮಲ್ಲಿಕಾರ್ಜುನ, ನಾಗರಾಜ್, ವೀರೇಶ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement