ಕನಕಗುರು ಪೀಠ ಪಕ್ಷ ರಾಜಕೀಯ ಮಾಡಿಲ್ಲ
ಹೂವಿನಹಡಗಲಿ: ಯಾವ ಸಂದರ್ಭದಲ್ಲಿಯೂ ರಾಜ್ಯದ ಕನಕ ಗುರುಪೀಠದ ಶ್ರೀಗಳು ಪಕ್ಷ ರಾಜಕೀಯ ಮಾಡಿಲ್ಲ. ಶ್ರೀಗಳು ರಾಜಕೀಯವಾಗಿ ಆಶೀರ್ವಾದ ಮಾಡಿದ್ದಾರೆ ಎಂಬುದು ವದಂತಿ ಎಂದು ಕಾಗಿನೆಲೆ ಕನಕ ಗುರುಪೀಠ ಗುಲ್ಬರ್ಗ ವಿಭಾಗದ ತಿಂತಿಣಿ ಬ್ರಿಡ್ಜ್ನ ಸಿದ್ಧರಮಾನಂದಪುರಿ ಸ್ವಾಮೀಜಿ ಹೇಳಿದರು.
ತಾಲೂಕಿನ ಹೊಳಗುಂದಿ ಬಾವಿಹಳ್ಳಿ ಗ್ರಾಮಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ 526ನೇ ಕನಕ ಜಯಂತಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ರಾಜಕೀಯವಾಗಿ ಇಲ್ಲಿ ವರೆಗೂ ಯಾವ ನಾಯಕರನ್ನು ಓಲೈಕೆ ಮಾಡಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಚ್ಛಾರಿತ್ರ್ಯ ಹೊಂದಿದ್ದಾರೆ. ಬಡವರ, ದೀನ ದಲಿತರ ಉದ್ಧಾರ ಮಾಡುತ್ತಾರೆಂಬ ಕಾರಣಕ್ಕಾಗಿ ಅವರಿಗೆ ಆಶೀರ್ವಾದ ಮಾಡಬೇಕಾಗಿ ಬಂತು ಎಂದರು.
ಉಡುಪಿಯ ಕೃಷ್ಣ ಮಠ ಕನಕದಾಸರು ಜೀವಿತಾವಧಿ ಮುಗಿದ ನಂತರ ಕಟ್ಟಡ ಕಟ್ಟಿದ್ದಾರೆ. ಇದನ್ನು ಒಂದು ವರ್ಗ ಅನಗತ್ಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕನಕರ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯವಿದ್ದು, ನಿಜವಾದ ದಾರ್ಶನಿಕರ ವ್ಯಕಿತ್ವವನ್ನು ಪ್ರಚುರ ಪಡಿಸಬೇಕಿದೆ ಎಂದರು.
ಸದಾಚಾರ, ನಿತ್ಯ ಜನಸ್ಪಂದನೆ ಮಾಡುವ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಅವರಿಗೆ ಆಶೀರ್ವದಿಸುತ್ತೇವೆ. ಕಾಲಕ್ರಮೇಣವಾಗಿ ವ್ಯತ್ಯಾಸಗಳಾದರೆ ಬದಲಾವಣೆಯಾಗುತ್ತದೆ ಎಂದು ಸಚಿವರಿಗೆ ಶ್ರೀಗಳು ಎಚ್ಚರಿಕೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ, ಈ ಹಿಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯನವರನ್ನು ಸಿಎಂ ಮಾಡಿದ್ದು, ಜನತೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಇದೇ ರೀತಿ ಸಲಹೆ, ಸಹಕಾರ ನೀಡಬೇಕೆಂದು ಕರೆ ನೀಡಿದರು.
ಹಾಲಪ್ಪ, ಜಿ. ಕೃಷ್ಣ, ಹುಡಾ ಮಾಜಿ ಅಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಪರಮೇಶ್ವರಪ್ಪ, ಭೀರಪ್ಪ, ಎಲ್. ಸಿದ್ದನಗೌಡ, ಎಪಿಎಂಸಿ ಅಧ್ಯಕ್ಷ ವಾರದ ಗೌಸ್ ಮೋಹಿದ್ದೀನ್, ಎಲ್. ಚಂದ್ರನಾಯ್ಕ, ಕರೆಗಾರ ಚಂದ್ರಪ್ಪ, ಕೃಷ್ಣನಾಯ್ಕ, ಶಾಂತನಗೌಡ ಸೇರಿದಂತೆ ಇತರರು ಉಪಸ್ಥಿರಿದ್ದರು. ಬಿ. ಹನುಮಂತಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು. ಡಿ. ವಿರೂಪಣ್ಣ ನಿರೂಪಿಸಿದರು.