ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕಬ್ಬು ಖರೀದಿಗೆ ಆಗ್ರಹಿಸಿ ರೈತರ ಧರಣಿ

Lingaraj Badiger
Updated On : 16 Dec 2013, 11:20 am

ಹೊಸಪೇಟೆ: ಐಎಸ್‌ಆರ್ ಕಾರ್ಖಾನೆ ವ್ಯಾಪ್ತಿಯಲ್ಲಿ ಬೆಳೆದ ಕಬ್ಬನ್ನು ಕಾರ್ಖಾನೆ ಮಾಲೀಕರು ಖರೀದಿಸಬೇಕು ಎಂದು ಒತ್ತಾಯಿಸಿ ಸ್ಥಳೀಯ ರೈತರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಕಬ್ಬು ತುಂಬಿದ ವಾಹನದೊಂದಿಗೆ ಕಾರ್ಖಾನೆಗೆ ಆಗಮಿಸಿದ ಘಟನೆ ಶನಿವಾರ ಸಂಜೆ ನಡೆಯಿತು.
ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯ ವೆಂಕಟಾಪುರ ಗ್ರಾಮದ ರೈತ ಕೆ. ಹುಲುಗಪ್ಪ ಅವರ ಕಬ್ಬು ಶುಕ್ರವಾರ ಆಕಸ್ಮಿಕ ಬೆಂಕಿಗೆ ಸುಟ್ಟು ಹೋಗಿದ್ದು, ಹುಲುಗಪ್ಪ ಕಬ್ಬನ್ನು ಬೇರೆಡೆಗೆ ಸಾಗಿಸಬೇಕು ಎಂದರೆ ಕಂದಾಯ ಹಾಗೂ ಪೊಲೀಸ್ ಇಲಾಖೆಯವರು ಬೇರೆಡೆಗೆ ಕಬ್ಬು ಸಾಗಾಟ ಮಾಡದಂತೆ ಕಬ್ಬಿನ ಟ್ರ್ಯಾಕ್ಟರ್ ಮತ್ತು ಲಾರಿಗಳನ್ನು ತಡೆದು ರೈತರ ಮೇಲೆ ಕೇಸುಗಳನ್ನು ಹಾಕುತ್ತಿರುವುದರಿಂದ ರೈತ ತಮ್ಮ ಗದ್ದೆಯಲ್ಲಿ ಸುಟ್ಟ ಕಬ್ಬನ್ನು ತೆಗೆದುಕೊಂಡು ಚಿತ್ತವಾಡ್ಗಿಯ ಐಎಸ್‌ಆರ್ ಸಕ್ಕರೆ ಕಾರ್ಖಾನೆಗೆ ಬಂದು ಕಬ್ಬು ಖರೀದಿಸುವಂತೆ ಶನಿವಾರ ರಾತ್ರಿ ವರೆಗೂ ಪ್ರತಿಭಟನೆ ನಡೆಸಿದರು.
ಘಟನಾ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರು ಹಾಗೂ ತಹಸೀಲ್ದಾರ್ ರಮೇಶ್ ಕೋನರೆಡ್ಡಿ ಭೇಟಿ ನೀಡಿ ಐಎಸ್‌ಆರ್ ಕಾರ್ಖಾನೆಗೆ ತಂದಿರುವ ಕಬ್ಬನ್ನು ತೆಗೆದುಕೊಳ್ಳುವಂತೆ ಕಾರ್ಖಾನೆಯ ಅಧಿಕಾರಿಗಳಿಗೆ ಸೂಚಿಸಿದರು. ಆದರೆ, ಕಾರ್ಖಾನೆ ಆರಂಭವಾಗದಿರುವ ಕಾರಣ ಕಬ್ಬನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಕಾರ್ಖಾನೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕಾರ್ಖಾನೆ ಮುಖ್ಯ ದ್ವಾರದ ಬಳಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ತಹಸೀಲ್ದಾರ್ ಸೇರಿದಂತೆ ಸ್ಥಳೀಯ ಅಧಿಕಾರಿಗಳು ಕಾರ್ಖಾನೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಕಾರ್ಖಾನೆ ಆರಂಭಿಸುವ ಕುರಿತು ಲಿಖಿತವಾಗಿ ಬರೆದುಕೊಡಲು ಸಾಧ್ಯವಿಲ್ಲ. ಕಾರಣ ಕಬ್ಬು ಖರೀದಿ ಕುರಿತು ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಿದೆ. ಅಲ್ಲದೆ, ಕಬ್ಬಿನ ದರ ನಿಗದಿ ಕುರಿತು ಇಲ್ಲಿವರೆಗೂ ಅಂತಿಮವಾಗಿಲ್ಲ. ಹೀಗಾಗಿ ಈಗಲೇ ಕಬ್ಬು ಖರೀದಿ ಮಾಡಲ್ಲ ಎಂದು ಕಾರ್ಖಾನೆ ಅಧಿಕಾರಿಗಳು ಸಭೆಯಲ್ಲಿ ಸ್ಪಷ್ಟಪಡಿಸಿದರು.
ಕಬ್ಬು ಬೆಳೆದು 15 ತಿಂಗಳು ಗತಿಸಿದ್ದರೂ ಇಲ್ಲಿವರೆಗೂ ಸಕ್ಕರೆ ಕಾರ್ಖಾನೆ ಆರಂಭಿಸದೆ ರೈತರನ್ನು ಸತಾಯಿಸುತ್ತಿದ್ದಾರೆ. ಈಗಾಗಲೆ ಕಬ್ಬು ಬೆಳೆದು ಒಣಗಿ ಇಳುವರಿ ಕಡಿಮೆಯಾಗುತ್ತಿದೆ. ತಕ್ಷಣ ಕಾರ್ಖಾನೆ ಆರಂಭಿಸಬೇಕು. ಇಲ್ಲವಾದಲ್ಲಿ ಕಬ್ಬನ್ನು ಬೇರೆ ಕಾರ್ಖಾನೆಗಳಿಗೆ ಮುಕ್ತವಾಗಿ ಸಾಗಿಸಲು ಅವಕಾಶ ನೀಡಬೇಕು ಎಂದು ರೈತರು ಪಟ್ಟು ಹಿಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement