ಕಾರ್ತಿಕ ವೈಭವಕ್ಕೆ ಕ್ಷೇತ್ರಗಳು ಸಜ್ಜು
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಡಿ. 15
ಪಂಚಗಣಾಧೀಶ್ವರರಲ್ಲಿ ಒಬ್ಬರಾದ ಶ್ರೀಗುರು ಕೊಟ್ಟೂರೇಶ್ವರ, ಪಂಚಪೀಠಗಳಲ್ಲಿ 2ನೇ ಪೀಠವಾದ ಉಜ್ಜಿನಿಯ ಅಧಿದೇವ ಶ್ರೀ ಮರುಳಸಿದ್ಧೇಶ್ವರ ಸ್ವಾಮಿಯ ಮಹಾ ಕಾರ್ತಿಕೋತ್ಸವ ಮತ್ತು ಲಕ್ಷದೀಪೋತ್ಸವದ ಅದ್ಧೂರಿ ಕಾರ್ಯಕ್ರಮಗಳಿಗೆ ಏಕಕಾಲಕ್ಕೆ ಧಾರ್ಮಿಕ, ಐತಿಹಾಸಿಕ ಪ್ರಸಿದ್ಧ ಕೊಟ್ಟೂರು ಮತ್ತು ಉಜ್ಜಿನಿ ಕ್ಷೇತ್ರಗಳು ಅಣಿಯಾಗಿವೆ.
ಪ್ರತಿವರ್ಷ ಹೊಸ್ತಿಲ ಹುಣ್ಣೆಮೆ ಮುನ್ನ ಕೊಟ್ಟೂರೇಶ್ವರ ಕಾರ್ತಿಕ ನಡೆಯುವಂತೆ ಡಿ. 16ರ ಸೋಮವಾರ ಈ ಬಾರಿ ನಡೆಯಲಿದೆ. ಅದರಂತೆ ಉಜ್ಜಿನಿ ಮರುಳಸಿದ್ಧೇಶ್ವರ ಸ್ವಾಮಿ ಕಾರ್ತಿಕೋತ್ಸವವೂ ಒಟ್ಟಿಗೆ ನಡೆಯುವುದು ಈ ಬಾರಿಯ ವಿಶೇಷ. ಈ ಕಾರ್ತಿಕೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳ ಜನತೆ ಆಗಮಿಸತೊಡಗಿದ್ದಾರೆ. ರಾಷ್ಟ್ರಕೂಟರ ಚಕ್ರೇಶ್ವರ ಕೊಟ್ಟಿಗರ ಹೆಸರಿನಲ್ಲಿ ನಿರ್ಮಾಣವಾದ ಈ ಊರು, ಕೊಟ್ಟಿಗನ ಊರು ನಂತರ ಕೊಟ್ಟೂರು ಆಗಿದೆ ಎಂಬುದು ಡಾ. ಶಿವರಾಮ ಕಾರಂತರ ಸಂಶೋಧನಾ ಅಭಿಪ್ರಾಯದ ವರದಿ ತಿಳಿಸುತ್ತದೆ.
ಕೊಟ್ಟೂರು ಬಸವೇಶ್ವರರು ವೇದ, ಆಗಮ, ಜ್ಯೋತಿಷ್ಯ, ಮನು ಸ್ಮೃತಿಗಳ ವಿಚಾರಧಾರೆಗಳ ಬೆಂಕಿಯನ್ನು ನಂದಿಸಿ, ಕಾಯಕ, ದಾಸೋಹ, ಷಟಸ್ಥಲ, ಅಷ್ಠಾವರಣ, ಪಂಚಾಚಾರಗಳ ವಿವೇಕದ ನಂದಾದೀಪ ಹಚ್ಚಿ ಇಂದಿಗೂ ದೀಪವನ್ನು ಜೀವಂತವಾಗಿರಿಸುವುದನ್ನು ಇಂತಹ ಮಹೋತ್ಸವಗಳು ಸಾರುತ್ತವೆ. 12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ವೈಚಾರಿಕ ಕ್ರಾಂತಿಗೈದ ಬಸವೇಶ್ವರರಿಗೆ ಕೊಟ್ಟೂರೇಶ್ವರರು ಸಮನಾಗಿ ನಿಲ್ಲಬಲ್ಲ ಶಿವಶರಣರು.
ಬೆಳ್ಳಿ ರಥಾಕರ್ಷಣೆ: ಕಡೆಯ ಕಾರ್ತಿಕ ಉತ್ಸವದಂದು ನಡೆಯುವ ಬೆಳ್ಳಿ ರಥದಲ್ಲಿ ಮೂಲ ಬಂಗಾರ ಖಚಿತ ವಿಗ್ರಹ ವಿರಾಜಮಾನಗೊಳ್ಳುತ್ತದೆ. ಇದೊಂದು ಅಪರೂಪ. ಬಹುತೇಕ ಕಡೆಗಳಲ್ಲಿ ಉತ್ಸವ ಮೂರ್ತಿ ಬೇರೆಯೇ ಇರುತ್ತವೆ. ಮೂಲ ಶ್ರೀಸ್ವಾಮಿಯ ವಿಗ್ರಹ ಪಾಲ್ಗೊಳ್ಳುವುದರಿಂದ ಭಕ್ತರು ಇದನ್ನು ಕಣ್ತುಂಬಿಕೊಳ್ಳಲು ಸಾಗರೋಪಾದಿಯಲ್ಲಿ ಸೇರುತ್ತಾರೆ. ಕೊಟ್ಟೂರೇಶ್ವರ ಸ್ವಾಮಿಯ ಕಾರ್ತಿಕ ಉತ್ಸವದ ಮೆರಗಿಗೆ 2003ರಿಂದ ಬೆಳ್ಳಿ ರಥ ಸೇರಿದೆ. ಕೊಟ್ಟೂರೇಶ್ವರ ಕಲ್ಯಾಣ ಮಂಟಪ ಸಮಿತಿ 290 ಕೆಜಿ ಬೆಳ್ಳಿಯನ್ನು ಭಕ್ತಾಧಿಗಳಿಂದ ಸಂಗ್ರಹಿಸಿ ರು. 40 ಲಕ್ಷ ವೆಚ್ಚದಲ್ಲಿ ಸುಂದರ ರಥ ನಿರ್ಮಿಸಿ ಸ್ವಾಮಿಯ ಸೇವೆಗೆ ಅರ್ಪಿಸಿತು. ಕಾರ್ತಿಕದ ವಿಶೇಷ ಆಕರ್ಷಣೆ ಈ ಬೆಳ್ಳಿ ರಥೋತ್ಸವ.
ದಾಖಲೆ ಕೊಬ್ಬರಿ: ಕೊಟ್ಟೂರೇಶ್ವರ ಸ್ವಾಮಿಯ ಈ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸುವ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬರಿ ಸುಡುವ ಸಂಪ್ರದಾಯ ಮುಂದುವರೆಸಿದ್ದಾರೆ. ದೇವಸ್ಥಾನದ ಹಿರೇಮಠದ ಮುಂಭಾಗದಲ್ಲಿ 30 ಕ್ವಿಂಟಲ್ಗೂ ಹೆಚ್ಚು ಕೊಬ್ಬರಿಯನ್ನು ಪ್ರತಿವರ್ಷ ಸುಡುವ ಮೂಲಕ ಭಕ್ತಿ ಸಮರ್ಪಿಸುವುದು ನಡೆದೆ ಇದೆ. ಇದಕ್ಕೆಂದೆ ಧಾರ್ಮಿಕ ದತ್ತಿ ಇಲಾಖೆ ಕಳೆದ ವರ್ಷದಿಂದ ಪ್ರತ್ಯೇಕ ಸುತ್ತುಕಟ್ಟೆ ನಿರ್ಮಿಸಿದೆ.
ಉಜ್ಜಿನಿ ವೈಭವ: 8ನೇ ಶತಮಾನದಲ್ಲಿ ಉಜ್ಜಿನಿ ಸದ್ಧರ್ಮಪೀಠ ಸ್ಥಳಾಂತರಗೊಂಡಿದೆ. ಉಜ್ಜಿನಿ ಸದ್ಧರ್ಮ ಸಿಂಹಾಸನಾ ಮಹಾಸಂಸ್ಥಾನ ಪೀಠ ಎಂದು ಈಗ ದೇಶದೆಲ್ಲೆಡೆ ಹೆಸರಾಗಿದೆ. ಅಸಂಖ್ಯಾ ಶಾಖಾ ಮಠಗಳು ಹೊಂದಿರುವ ಈ ಮಹಾನ್ ಪೀಠದ ಆರಾದ್ಯದೈವ ಶ್ರೀ ಮರುಳಸಿದ್ಧೇಶ್ವರ ಸ್ವಾಮಿಯ ಕಾರ್ತಿಕ ಸುಮಾರು ವರ್ಷಗಳಿಂದೀಚೆಗೆ ಲಕ್ಷದೀಪವಾಗಿ ಮಾರ್ಪಟ್ಟಿದೆ. ಇಂತಹ ಸಮಾರಂಭದ ಜತೆಗೆ ಈ ಬಾರಿ ಲಿಂಗೈಕ್ಯ ಜಗದ್ಗುರು ಮರುಳಸಿದ್ಧರಾಜ ದೇಶೀಕೇಂದ್ರ ಶಿವಾಚಾರ್ಯರ ಪುಣ್ಯ ಸ್ಮರಣೋತ್ಸವ, ಸಾಮೂಹಿಕ ವಿವಾಹ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಸೋಮವಾರ ನಡೆಯಲಿವೆ. ಇದಕ್ಕೆಂದೆ ರಾಜ್ಯದ ಬಹುತೇಕ ರಾಜಕೀಯ ಮುಖಂಡರು, ನಾನಾ ಮಠಗಳ ಮಠಾಧೀಶರು ಆಗಮಿಸುತ್ತಿದ್ದಾರೆ.
- ಜಿ. ಸೋಮಶೇಖರ