ಅನುದಾನಕ್ಕೆ ಕಲ್ಲು ಹಾಕುವ ಪ್ರಯತ್ನ ಬೇಡ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಡಿ. 16
ನಾಡಿನಲ್ಲಿ ಅನ್ನ, ಜ್ಞಾನ ದಾಸೋಹದಂತಹ ದೊಡ್ಡ ಕ್ರಾಂತಿಗೆ ಕಾರಣವಾದ ಮಠ ಮಂದಿರಗಳಿಗೆ ಸರ್ಕಾರದಿಂದ ನೀಡುತ್ತಿದ್ದ ಅನುದಾನಕ್ಕೆ ಕಲ್ಲು ಹಾಕುವ ಪ್ರಯತ್ನ ಇದೀಗ ಸಾಗಿರುವುದು ನಿಜಕ್ಕೂ ದುರಂತ. ಇದನ್ನು ಕಾಂಗ್ರೆಸ್ ಸರ್ಕಾರ ಸರಿಪಡಿಸಿಕೊಳ್ಳುವತ್ತ ಮುಂದಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒತ್ತಾಯಿಸಿದರು.
ಸಮೀಪದ ಉಜ್ಜಿನಿ ಸದ್ಧರ್ಮಪೀಠದಲ್ಲಿ ಸೋಮವಾರ ಆಯೋಜಿಸಿದ್ದ ಲಿಂಗೈಕ್ಯ ಜಗದ್ಗುರು ಮರುಳಸಿದ್ಧರಾಜ ದೇಶೀಕೇಂದ್ರ ಶಿವಾಚಾರ್ಯರ 2ನೇ ಪುಣ್ಯ ಸ್ಮರಣೋತ್ಸವ, ಸಾಮೂಹಿಕ ವಿವಾಹ, ಮರುಳಸಿದ್ಧೇಶ್ವರ ಸ್ವಾಮಿಯ ಲಕ್ಷದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಭಿನ್ನ ರೀತಿಯ ಆಡಳಿತ ನಡೆಸುತ್ತೇವೆ ಎಂದು ಹೇಳುವ ಮೂಲಕ ನಂಬಿಕೆ, ವಿಶ್ವಾಸ, ಶ್ರದ್ಧೆಗೆ ಭಂಗ ತರುವ ಪ್ರಯತ್ನಕ್ಕೆ ಈಗಿನ ಸರ್ಕಾರ ಮುಂದಾಗಿರುವುದು ಖಂಡನೀಯ ಎಂದರು.
ರು. 6 ನೂರು ಕೋಟಿ ನೀಡಿದ್ದೆ: ವೀರಶೈವ ಪರಂಪರೆಯ ಮಠ, ಮಂದಿರಗಳು ಸರ್ವಜನಾಂಗಕ್ಕೆ ಒಳಿತನ್ನೇ ಮಾಡಿರುವುದನ್ನು ಇತಿಹಾಸ ಪುಟಗಳು ಸಾರುತ್ತವೆ. ಈ ಕಾರಣಕ್ಕಾಗಿ ನಾನು ಮುಖ್ಯಮಂತ್ರಿಯಾಗಿದ್ದಾಗ ರು. 6ರಿಂದ 7 ನೂರು ಕೋಟಿ ಅನುದಾನ ದೊರಕಿಸಿಕೊಟ್ಟಿದ್ದೆ. ಎಲ್ಲ ಮಠಗಳ ಸ್ವಾಮೀಜಿಗಳು ಅನುದಾನವನ್ನು ಸಮಾಜದ ಸೇವೆಗೆ ಬಳಸಿಕೊಳ್ಳುತ್ತಿದ್ದರು. ಇದಕ್ಕೆ ಇದೀಗ ಕುತ್ತು ಬರತೊಡಗಿದೆ. ಇದು ನಿಲ್ಲಬೇಕು. ಆಗ ಮಾತ್ರ ಸಮಾಜದ ಸ್ವಾಸ್ಥ್ಯ ಉಳಿಯುತ್ತದೆ ಎಂದರು.
ಗಮನಾರ್ಹ ಸಂಗತಿ: ಸದ್ಧರ್ಮ ಪ್ರಭಾ ಪತ್ರಿಕೆ ಬಿಡುಗಡೆಗೊಳಿಸಿ ಉದ್ಯಮಿ ವಿಜಯ ಸಂಕೇಶ್ವರ ಮಾತನಾಡಿ, ನಾಡಿನ ಪತ್ರಿಕೆಗಳು ಧರ್ಮ ಜಾಗೃತಿಗೊಳಿಸುವ ನಿಟ್ಟಿನಲ್ಲಿ ತೊಡಗಿಸಿಕೊಂಡಿರುವುದು ಗಮನಾರ್ಹ ಸಂಗತಿ. ತಮ್ಮ ನೇತೃತ್ವದ ಪತ್ರಿಕೆ 14 ವರ್ಷಗಳಿಂದ ಧರ್ಮ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ನಿರಂತರ ಮಾಡಿಕೊಂಡು ಬಂದಿದೆ ಎಂದು ಹೇಳಿದರು.
ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು, ಉಜ್ಜಿನಿ ಪೀಠದ ಸಿದ್ಧಲಿಂಗರಾಜ ದೇಶೀಕೇಂದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶಿವಗಂಗಾದ ಮಲಯ ಶಾಂತಮುನಿ ಶಿವಾಚಾರ್ಯರು, ಎಮ್ಮಿಗನೂರಿನ ವಾಮದೇವ ಮಹಾಂತ ಶಿವಾಚಾರ್ಯರು ನುಡಿನಮನ ಸಲ್ಲಿಸಿದರು. ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ , ಶಾಸಕರಾದ ಯು.ಬಿ. ಬಣಕಾರ್, ಡಾ. ವಿಶ್ವನಾಥ ಪಾಟೀಲ್ ಮಾತನಾಡಿದರು.
ಜ್ಞಾನಗುರು ವಿದ್ಯಾಪೀಠದ ಕಾರ್ಯದರ್ಶಿ ಎಂ.ಎಂ.ಜೆ. ಹರ್ಷವರ್ಧನ್, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಬಿ.ಪಿ. ಹರೀಶ್, ಮಹರ್ಷಿ ಆನಂದ ಗುರೂಜಿ, ಕೊಟ್ರೇಶ್ ಅರಸೀಕೆರೆ, ಗೊಗ್ಗ ಸಿದ್ದರಾಯಮಯ್ಯ, ಚೊಕ್ಕಬಸವನಗೌಡ ಮತ್ತಿತರರು ಪಾಲ್ಗೊಂಡಿದ್ದರು.
ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ಎ.ಪಿ.ಎಂ. ಶಾಂತವೀರಯ್ಯ ಸ್ವಾಗತಿಸಿದರು. ಗಿರಿಜಾ ದೇವಿ ದುರ್ಗದಮಠ, ನಿರಂಜನ ದೇವರಮನಿ ನಿರೂಪಿಸಿದರು.