ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಒತ್ತಾಯ

Lingaraj Badiger
Updated On : 17 Dec 2013, 12:14 pm

ಬಳ್ಳಾರಿ: ತಾಲೂಕಿನ ವಿವಿಧ ಮೆದು ಕಬ್ಬಿಣ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಲ್ ಇಂಡಿಯಾ ಯುಟಿಯುಸಿ ಜಿಲ್ಲಾ ಸಮಿತಿ ಕಾರ್ಯಕರ್ತರು ಕಾರ್ಮಿಕ ಸಚಿವ ಪರಮೇಶ್ವ ನಾಯ್ಕಗೆ ಮನವಿ ಸಲ್ಲಿಸಿದರು. ತಾಲೂಕಿನ ಜಾನೆಕುಂಟೆ, ಜಾನೆಕುಂಟೆ ತಾಂಡಾ, ಹರಗಿನಡೋಣಿ, ಹರಗಿನಡೋಣಿ ತಾಂಡಾ, ವೇಣಿವೀರಾಪುರ, ಕುಡತಿನಿ ಮತ್ತು ಸಿಡಿಗಿನಮೊಳ ಗ್ರಾಮ ಸೇರಿದಂತೆ ಸುಮಾರು 25 ಮೆದು ಕಬ್ಬಿಣ ಕಾರ್ಖಾನೆಗಳು ತಲೆಯೆತ್ತಿದ್ದು, ಲಕ್ಷಾಂತರ ಕಾರ್ಮಿಕರು ಕನಿಷ್ಠ ವೇತನಕ್ಕೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇಂದಿನ ದುಬಾರಿ ಯುಗದಲ್ಲಿ ಕಾರ್ಖಾನೆಗಳು ನೀಡುವ ಅತ್ಯಲ್ಪ ಸಂಬಳದಿಂದ ಜೀವನ ನಿರ್ವಹಣೆ ಕಷ್ಟಕರ ಎಂದು ಎಐಯುಟಿಯುಸಿ ಜಿಲ್ಲಾ ಸಮಿತಿ ಸಂಚಾಲಕ ಆರ್. ಸೋಮಶೇಖರ್‌ಗೌಡ ತಿಳಿಸಿದರು. ಅಧಿಕ ಧೂಳು ಕಾಣಸಿಗುವ ಕಬ್ಬಿಣ ಕಾರ್ಖಾನೆಗಳಲ್ಲಿ ಕಾರ್ಮಿಕರಿಗೆ ಸೂಕ್ತ ಭದ್ರತೆ, ಸಮವಸ್ತ್ರ, ಧೂಳಿನ ಕವಚ ಇನ್ನಿತರೆ ಸುರಕ್ಷತೆಗಳೆ ಇಲ್ಲ. ಕನಿಷ್ಠ ವೇತನ, ಸುರಕ್ಷತಾ ಕ್ರಮ ಸೇರಿದಂತೆ ಕಾರ್ಮಿಕರ ಇತರೆ ನ್ಯಾಯಬದ್ಧ ಸೌಲಭ್ಯ ದೊರೆಯುವಂತೆ ನಿಯಮಾವಳಿ ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು. ಎ. ದೇವದಾಸ್, ಉಮಾನಾಯಕ್, ತಾಯಣ್ಣ, ಮಂಜನಾಯಕ್, ಮಂಗು ನಾಯಕ್ ಇದ್ದರು.
ಅರ್ಜಿ ಆಹ್ವಾನ
ಬಳ್ಳಾರಿ: ಜಿಲ್ಲೆಯ ಬಳ್ಳಾರಿ (ನಗರ) ತಾಲೂಕಿನ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿಯಿರುವ 9 ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಹ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 18ರಿಂದ 44 ವರ್ಷದೊಳಗಿದ್ದು, ಕನಿಷ್ಠ 4ನೇ ತರಗತಿ ಹಾಗೂ ಗರಿಷ್ಠ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಹೊಂದಿರಬೇಕು. ಬಡತನ ರೇಖೆಗಿಂತ ಕೆಳಗಿನ ಕುಟುಂಬಕ್ಕೆ ಸೇರಿರಬೇಕು. ಕಾಯಂ ಬಿಪಿಎಲ್ ಕಾರ್ಡಿನ ಪ್ರತಿ ಲಗತ್ತಿಸಬೇಕು. ಬಿಪಿಎಲ್ ಅಭ್ಯರ್ಥಿಗಳಿಂದ ಅರ್ಜಿ ಬಾರದಿದ್ದಲ್ಲಿ ಎಪಿಎಲ್ ಅಭ್ಯರ್ಥಿ ಆಯ್ಕೆ ಮಾಡಲಾಗುವುದು. ಅಂಗವಿಕಲರು ಅರ್ಜಿ ಸಲ್ಲಿಸುವಂತಿಲ್ಲ. ಬಂಡಿಮೋಟ್, ಅಂದ್ರಾಳ್ (ಮಂಡಾಳ ಬಟ್ಟಿ), ಅಂದ್ರಾಳ್ (ರಾಮನಗರ), ಅಂದ್ರಾಳ್ (ಡಿಸಿ ಕಾಲೋನಿ), ವರಬಸಪ್ಪ ಗುಡಿ, ಕವಾಡಿ ಬೀದಿ, ಬಂಡಿಹಟ್ಟಿ, ಬೆಳಗಲ್ಲು ಕ್ರಾಸ್, ಶ್ರೀನಿವಾಸ ನಗರ ಕ್ಯಾಂಪ್‌ನ ಅಂಗನವಾಡಿ ಕೇಂದ್ರಗಳಲ್ಲಿ ಹುದ್ದೆಗಳು ಖಾಲಿಯಿದ್ದು, ವರಬಸಪ್ಪ ಗುಡಿ ಅಂಗವಾಡಿ ಕೇಂದ್ರದ ಹುದ್ದೆ ಪ.ಜಾತಿಗೆ ಮೀಸಲು. ಉಳಿದವು ಸಾಮಾನ್ಯ ವರ್ಗಕ್ಕೆ ಮೀಸಲು. ಆಸಕ್ತ ಮಹಿಳೆಯರು ಅರ್ಜಿಯೊಂದಿಗೆ ಜನನ, ಜಾತಿ, ವಾಸಸ್ಥಳ ಪ್ರಮಾಣಪತ್ರ, ವಿಶೇಷ ಅರ್ಹತೆಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದ ಮೂಲ ಪ್ರಮಾಣ ಪತ್ರ, ಅಂಕಪಟ್ಟಿ, ಮತ್ತಿತರ ದಾಖಲೆಗಳ ಝೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ, 2014ರ ಜ. 6ರೊಳಗಾಗಿ ಬಳ್ಳಾರಿ(ನಗರ) ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement