ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಜೋಪಡಿ ಜೀವನ ಇನ್ನೆಷ್ಟು ದಿನ?

Lingaraj Badiger
Updated On : 17 Dec 2013, 12:10 pm

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಡಿ. 16
ಸಂತ್ರಸ್ತರ ಸಮಸ್ಯೆ ಅರಿವಾಗೈತಿ, ಯಾವುದಕ್ಕೂ ಕಠಿಣ ನಿರ್ಧಾರ ಬ್ಯಾಡ ಅಂತಾ, ಈ ಅಧಿಕಾರಿಗಳು ಬಂದು ನಮ್ಮನ್ನ ಸಮಾಧಾನ ಮಾಡಿದ್ರು, ಅದಕ್ಕ ಚುನಾವಣೆ ಬಹಿಷ್ಕಾರ ಮಾಡದೇ ಮತದಾನ ಮಾಡಿದ್ವಿ, ಆದರೆ ಗೆದ್ದು ಹೋದವರು ಇತ್ತ ತಲೆ ಕೂಡಾ ಹಾಕಿಲ್ಲ, ಅವರ್ಯಾರು ಅಂತಾ ನಮಗಿನ್ನು ಗೊತ್ತಿಲ್ಲ, ಹೀಗೆಂದು ಮಾಗಳ ಸಂತ್ರಸ್ತರು 'ಕನ್ನಡಪ್ರಭ' ಮುಂದೆ ತಮ್ಮ ಅಳಲು ತೋಡಿಕೊಂಡರು.
ಹೌದು, ತಾಲೂಕಿನ ಮಾಗಳದ ಬಸ್ತಿ ಓಣಿ, ಬ್ಯಾಡರಗೇರಿ ಸಂತ್ರಸ್ತರನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆ ಆರಂಭವಾಗಿ ಬರೊಬ್ಬರಿ 5 ವರ್ಷಗಳೇ ಕಳೆದಿವೆ. ಅಲ್ಲಿಂದ ಈವರೆಗೂ ಈ ಸಂತ್ರಸ್ತರಿಗೆ ಸರ್ಕಾರದ ಸೌಲಭ್ಯ ಶಾಪವಾಗಿವೆ. ಇಲ್ಲಿ ಇಲ್ಲಗಳದ್ದೇ ಕಾರುಬಾರು ಚರಂಡಿ, ರಸ್ತೆ, ಮನೆ, ಶೌಚ, ರಸ್ತೆ ನಿರ್ಮಾಣಕ್ಕೆ ಅನುಮತಿಯೇ ಇಲ್ಲ. ನಮ್ ಪಾಲಿಗೆ ಸರ್ಕಾರ ಸತ್ತ ಹೋಗಿದೆ ಎಂದು ಖಾರವಾಗಿ ನುಡಿಯುತ್ತಾರೆ.
ಸಂತ್ರಸ್ತರ ಬದುಕು ನಿಜಕ್ಕೂ ನರಕ ಸದೃಶ್ಯವಾಗಿದೆ. ಬಯಲು ಶೌಚ ಮುಕ್ತ ಮಾಡಲು ಮನೆಗೊಂದು ಶೌಚ ಯೋಜನೆಯಡಿ ಸೌಲಭ್ಯಕ್ಕಾಗಿ ನೂರಾರು ಸಂತ್ರಸ್ತರು ಕೈಯಲ್ಲಿ ಅರ್ಜಿಗಳ ಹಿಡಿದುಕೊಂಡು ಬಂದರೂ ಇದಕ್ಕೆ ಗ್ರಾಪಂ ಅನುಮತಿ ಇಲ್ಲ. ಗುಡಿಸಲು ವಾಸಿಗಳಿಗೆ ಮಂಜೂರಾಗಿದ್ದ ಸರ್ಕಾರಿ ಮನೆಗಳು ವಾಪಸ್ ಹೋಗಿವೆ. ಬಸ್ತಿಓಣಿ, ಬ್ಯಾಡರಗೇರಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಅನತಿ ದೂರದಲ್ಲಿದೆ. ಪ್ರಕೃತಿ ವಿಕೋಪ ಹಾಗೂ ಬತ್ತದ ಗದ್ದೆಯ ಬಸಿ ನೀರು ಮನೆಗಳಲ್ಲಿ ಬಸಿದು ಜಲಲ ಜಲಧಾರೆಯಾಗಿದೆ. ಜನಜೀವನ ಅಸ್ತವ್ಯಸ್ತ ರಸ್ತೆ, ವಿದ್ಯುತ್, ಮೂಲಭೂತ ಸೌಲಭ್ಯಗಳಿಲ್ಲ ಮಾಯವಾಗಿದೆ.
ಸ್ಥಳಾಂತರ ಗ್ರಾಮದಲ್ಲಿ ಬಸವ ವಸತಿ, ಶೌಚ, ರಸ್ತೆ, ಚರಂಡಿ, ಮನೆ ನಿರ್ಮಾಣದಂತಹ ಕಾಮಗಾರಿಗಳಿಗೆ ಗ್ರಾಪಂ ಅನುಮತಿ ನೀಡಬಾರದೆಂಬ ಸ್ಪಷ್ಟ ಆದೇಶದಿಂದ ಅತ್ತ ಆಸರೆಯೂ ಇಲ್ಲ, ಇತ್ತ ಅಭಿವೃದ್ಧಿ ಇಲ್ಲದೇ ಸಂತ್ರಸ್ತರು ಅತಂತ್ರರಾಗಿದ್ದಾರೆ.
ಮಾಗಳ ಮುಳುಗಡೆ ಪ್ರದೇಶವೆಂದು ಘೋಷಿಸಬೇಕು. ಪುನರ್ ವಸತಿ, ಪುನರ್ ನಿರ್ಮಾಣ ನಿಯಮದಂತೆ ಮೌಲ್ಯಾಧಾರಿತ ಪರಿಹಾರ ವಿತರಣೆ. ನವಗ್ರಾಮದ ಮನೆಗಳು ಗುಣಮಟ್ಟ ಹೊಂದದೆ, ಅತಿ ಚಿಕ್ಕ ಮನೆಗಳಿದ್ದು, ಆಸರೆ ಯೋಜನೆಯಲ್ಲಿ ಸ್ಥಳಾಂತರಕ್ಕೆ ತಮ್ಮ ಒಮ್ಮತವಿಲ್ಲವೆಂದು ಗ್ರಾಮಕ್ಕೆ ಈ ಹಿಂದೆ ಭೇಟಿ ನೀಡಿದ್ದ ಹೊಸಪೇಟೆ ಸಹಾಯಕ ಆಯುಕ್ತರಿಗೆ ಸಂತ್ರಸ್ತರು ತಿಳಿಸುತ್ತಾ, ಮುಳುಗಡೆ ಘೋಷಿಸುವವರೆಗೂ ಬಸ್ತಿಓಣಿ, ಬ್ಯಾಡರಗೇರಿಗೆ ಬೀದಿ ದೀಪ, ಶೌಚ, ರಸ್ತೆ, ಚರಂಡಿ ವ್ಯವಸ್ಥೆಯನ್ನು ಗ್ರಾಪಂ ಮಾಡಬೇಕೆಂದು ಸಂತ್ರಸ್ತರ ಬೇಡಿಕೆ.
ಹೊಸಪೇಟೆ ಸಹಾಯಕ ಆಯುಕ್ತ ಸುನಿಲ್‌ಕುಮಾರ ಸ್ಥಳ ಪರಿಶೀಲನೆ ವರದಿಯಲ್ಲಿ ವೈಜ್ಞಾನಿಕ ಆಧಾರದ ಮೇಲೆ ಭಾಗಶಃ ಸ್ಥಳಾಂತರಿಸುವುದು ಅಗತ್ಯವಿದೆ. ಈಗ ಕೂಡಲೇ 563 ಕುಟುಂಬಗಳನ್ನು ಸ್ಥಳಾಂತರಿಸಬೇಕು. 100 ಮನೆಗಳು ಪೂರ್ಣಗೊಂಡಿದ್ದು, 162 ಮನೆಗಳು ನಿರ್ಮಾಣ ಪ್ರಗತಿಯಲ್ಲಿವೆ. ಕೊಳಚೆ ನಿರ್ಮೂಲನಾ ಮಂಡಳಿಗೆ ಅನುದಾನದ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡಿದೆ. ನವಗ್ರಾಮದ ಮನೆಗಳಿಗೆ ನೀರು ಸರಬರಾಜು, ರಸ್ತೆ ಸಂಪರ್ಕ, ಒಳಚರಂಡಿ, ಕಾಮಗಾರಿ ಕೈಗೊಳ್ಳಬೇಕೆಂದು ಡಿಸಿಯವರಿಗೆ ವರದಿ ಸಲ್ಲಿಸಿ 3 ತಿಂಗಳು ಕಳೆದರೂ ಯಾವ ಕ್ರಮ ಕೈಗೊಂಡಿಲ್ಲ. ಬಸ್ತಿಓಣಿ, ಬ್ಯಾಡರಗೇರಿ ತೀರಾ ಹಿಂದುಳಿದಿದೆ. ಬಸಿನೀರಿನಿಂದ ಮನೆಗಳು ಜಲಾವೃತ್ತವಾಗಿದ್ದು ವಾಸಕ್ಕೆ ಯೋಗ್ಯವಾಗಿಲ್ಲ. ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದ್ದು, ರಸ್ತೆಗಳು ಬಸಿ ನೀರಿನಿಂದ ಕೊಳಚೆ ತಾಣಗಳಾಗಿವೆ ಎಂದು ವರದಿ ನೀಡಿದ್ದಾರೆ.
- ಚಂದ್ರು ಕೊಂಚಿಗೇರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement