ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸಾವಿಗೆ ಮುನ್ನುಡಿ ಬರೆವ ರಾಷ್ಟ್ರೀಯ ಹೆದ್ದಾರಿ

Lingaraj Badiger
Updated On : 17 Dec 2013, 12:03 pm

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಡಿ. 16
ಸಾವನ್ನು ಹಾಸಿ ಹೊದ್ದು ಮಲಗಿದ ಹೆದ್ದಾರಿ ನೋಡಬೇಕೆ? ಹಾಗಾದರೆ ಹೊಪೇಟೆಯಿಂದ ಕೂಡ್ಲಿಗಿ ಮಾರ್ಗವಾಗಿ ಚಿತ್ರದುರ್ಗ ಕಡೆ ಹೋಗುವ ರಾಷ್ಟ್ರೀಯ ಹೆದ್ದಾರಿ-13ಕ್ಕೆ ಬನ್ನಿ. ಇಲ್ಲಿ ಆ ದೃಶ್ಯವನ್ನು ನೀವು ಕಾಣಬಹುದು.
ಹೌದು, ಪ್ರತಿನಿತ್ಯ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಮಾಮೂಲಿ. ಅಲ್ಲಿ ಸಾಯುವವರು ಹೆಚ್ಚಾಗುತ್ತಿದ್ದಾರೆ. ರಸ್ತೆಯಲ್ಲಿನ ತಗ್ಗು ಗುಂಡಿಗಳನ್ನು ತಪ್ಪಿಸಲು ಹೋಗುವ ಚಾಲಕರು ಎದುರಿಗೆ ಬರುವ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆಯುವುದರಿಂದ ಅಪಘಾತಗಳು ಹೆಚ್ಚಾಗುತ್ತಿದ್ದರೂ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದವರಿಗೆ ಇದರ ಪರಿವೆಯೇ ಇಲ್ಲದಂತಾಗಿದೆ. ಸತ್ತರೆ ಪ್ರಯಾಣಿಕರು ಸಾಯುತ್ತಾರೆ, ನಮಗೇನು ಎನ್ನುವ ಮನೋಭಾವ ಅಧಿಕಾರಿಗಳಿಗೆ ಇರುವಂತೆ ಕಾಣುತ್ತಿದೆ.
ಹೆಚ್ಚಿವೆ ಅಪಘಾತಗಳು: ಕೂಡ್ಲಿಗಿ ತಾಲೂಕಿನ ಶಿವಪುರದಿಂದ ಕೂಡ್ಲಿಗಿ, ಬಣವಿಕಲ್ಲು, ಹೊಸಹಳ್ಳಿ, ಆಲೂರುವರೆಗೆ ಈ ರಸ್ತೆಯಲ್ಲಿ ಸಂಚರಿಸಿದರೆ ದೊಡ್ಡ ಸಾಹಸ ಮಾಡಿದಂತೆಯೇ ಸರಿ. ರಾತ್ರಿಯಂತೂ ಬೈಕ್‌ನಲ್ಲಿ ಹೋದರೆ ಮನೆ ತಲುಪುವುದು ಖಾತ್ರಿ ಇಲ್ಲ. ಚಿತ್ರದುರ್ಗ ಕಡೆಯಿಂದ ಆರಂಭವಾಗುವ ಕೂಡ್ಲಿಗಿ ತಾಲೂಕಿನ ಆಲೂರು ಕ್ರಾಸ್‌ನಿಂದ ರಸ್ತೆ ತುಂಬ  ತಗ್ಗು, ಗುಂಡಿಗಳು ಸಾವನ್ನು ಆಹ್ವಾನಿಸುವಂತೆ ಕಂಗೊಳಿಸುತ್ತವೆ. ತಾಲೂಕಿನ ಬಣವಿಕಲ್ಲು ಹೊರವಲಯದ ರಸ್ತೆಯಲ್ಲಿ ಬೃಹತ್ ತಗ್ಗು ಗುಂಡಿಯಿಂದ ಸುಮಾರು 15ಕ್ಕೂ ಹೆಚ್ಚು ಲಾರಿ, ಬಸ್‌ಗಳು ನಿಯಂತ್ರಣ ತಪ್ಪಿ ಬಿದ್ದಿವೆ. ಪರಸ್ಪರ ವಾಹನಗಳ ಡಿಕ್ಕಿಯಿಂದ ನಾಲ್ಕಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಂಥ ಅನೇಕ ಪ್ರಕರಣಗಳು ಘಟಿಸುತ್ತಲೆ ಇರುತ್ತವೆ.
ಗಮನಹರಿಸದ ಪ್ರಾಧಿಕಾರ: ಇಷ್ಟೆಲ್ಲ ಅವಘಡಗಳು ನಡೆದರೂ ಹೆದ್ದಾರಿ ಪ್ರಾಧಿಕಾರ ಮಾತ್ರ ತನಗೆ ಸಂಬಂಧವಿಲ್ಲವೇನೊ ಎನ್ನುವಂತೆ ಜನರ ಪ್ರಾಣದ ಜತೆ ಚೆಲ್ಲಾಟ ಆಡುತ್ತಿದೆ. ಕೂಡ್ಲಿಗಿ, ಎಂ.ಬಿ. ಅಯ್ಯನಹಳ್ಳಿ, ಕ್ಯಾಸನಕೇರಿ ಬಳಿ ಹೊಂಡದಂತೆ ತಗ್ಗುಗಳು ಬಿದ್ದಿವೆ. ಅವುಗಳನ್ನು ತಪ್ಪಿಸಲು ವಾಹನ ಸವಾರರು ಪ್ರತಿದಿನ ಸರ್ಕಸ್ ಮಾಡಬೇಕಾಗುತ್ತದೆ. ಕೊನೆಗೆ ಆಯತಪ್ಪಿ ಬಿದ್ದರೆ ಹೆಣಗಳು ಉರುಳುವುದು ಗ್ಯಾರಂಟಿ. ತಾಲೂಕಿನ ಹೊಸಹಳ್ಳಿಯಿಂದ ಹೊಸಪೇಟೆವರೆಗಿನ ಅಂತರ ಕೇವಲ 76 ಕಿ.ಮೀ. ಇದ್ದರೂ ಮೂರು ಗಂಟೆಗೂ ಹೆಚ್ಚು ಕಾಲ ಕ್ರಮಿಸಬೇಕು. ಪ್ರಯಾಣಿಕರು ಸಂಬಂಧಿಸಿದ ಇಲಾಖೆಗೆ ಹಿಡಿಶಾಪ ಹಾಕುತ್ತಾರೆ.
ತಗ್ಗು, ಗುಂಡಿ ಮುಚ್ಚಲಿ: ರಾಷ್ಟ್ರೀಯ ಹೆದ್ದಾರಿಗೆ ಚತುಷ್ಪಥ ರಸ್ತೆಯಾಗುವ ಅಭಿವೃದ್ಧಿಯೋಗ ಲಭಿಸಿದ್ದು, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ರಸ್ತೆ ಅಕ್ಕಪಕ್ಕದ ಮರಗಳನ್ನು ಕಡಿಯಲಾಗಿದೆ. ಹೊಸಪೇಟೆಯಿಂದ ಚಿತ್ರದುರ್ಗದ ವರೆಗೆ ರಸ್ತೆ ಕಾಮಗಾರಿ ಪ್ರಾರಂಭವಾಗಬೇಕಷ್ಟೆ. ಆದರೆ ಈ ಕಾಮಗಾರಿ ಮುಗಿಯುವುದಕ್ಕೆ ವರ್ಷಗಳೆ ಬೇಕಾಗುತ್ತದೆ. ಅಲ್ಲಿವರೆಗೆ ಕಾದು ಕುಳಿತರೆ ಈ ಹೆದ್ದಾರಿಯನ್ನು ತಗ್ಗು, ಗುಂಡಿಗಳಲ್ಲಿ ಹುಡುಕಬೇಕಾಗುತ್ತದೆ. ತಗ್ಗು, ಗುಂಡಿಗಳನ್ನು ಮುಚ್ಚುವ ಪ್ರಕ್ರಿಯೆ ಬೇಗ ನಡೆಯಬೇಕು. ಇಲ್ಲದಿದ್ದರೆ ಈ ಭಾಗದ ಜನ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ.

ನಮ್ಮ ಠಾಣಾ ವ್ಯಾಪ್ತಿಯ ಬಣವಿಕಲ್ಲು, ಹೊಸಹಳ್ಳಿ ಸಮೀಪ ಅಪಘಾತಗಳು ಸಂಭವಿಸುತ್ತಿದ್ದು, ಅನೇಕ ಬೈಕ್ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ. ನಿತ್ಯದ ವ್ಯವಹಾರಗಳಿಗೆ ಪಟ್ಟಣಗಳಿಗೆ ಹೋಗಲು ಈ ಹೈವೆಯಲ್ಲೇ ಸಂಚರಿಸಬೇಕು. ಎಷ್ಟೋ ಮಹಿಳೆಯರು, ವೃದ್ಧರು, ಮಕ್ಕಳು ಸಹ ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ. ಅಲ್ಲದೆ ದಿನಗಟ್ಟಲೆ ಟ್ರಾಫಿಕ್ ಜಾಮ್ ಆದ ಉದಾಹರಣೆಗಳಿವೆ. ತಗ್ಗು, ಗುಂಡಿಗಳನ್ನು ಮುಚ್ಚಿದರೆ ಹೆಚ್ಚಿನ ಅಪಘಾತ, ಅನಾಹುತ ಸಂಭವಿಸುವುದು ತಪ್ಪುತ್ತವೆ.
- ಜಿತೇಂದ್ರ, ಎಎಸ್‌ಐ,ಹೊಸಹಳ್ಳಿ ಪೊಲೀಸ್ ಠಾಣೆ.
ರಾಷ್ಟ್ರೀಯ ಹೆದ್ದಾರಿ-13ರಲ್ಲಿ ಶಿವಪುರದಿಂದ ಕೂಡ್ಲಿಗಿ, ಬಣವಿಕಲ್ಲು, ಹೊಸಹಳ್ಳಿ, ಆಲೂರು ಕ್ರಾಸ್‌ವರೆಗಿನ ರಸ್ತೆಯಲ್ಲಿ ಪ್ರತಿದಿನ ಬೆಳಗಾದರೆ ಎರಡು ಅಪಘಾತಗಳು ನಡೆಯುತ್ತಲೇ ಇರುತ್ತವೆ. ಈ ಹೆದ್ದಾರಿಗೆ ಬಂದ ದುರ್ಗತಿ ನೋಡಿದರೂ ಹೆದ್ದಾರಿ ಪ್ರಾಧಿಕಾರ ಇಲ್ಲಿ ಇದೆಯೋ ಇಲ್ಲವೋ ಎನ್ನುವ ಅನುಮಾನ ಕಾಡುತ್ತಿದೆ. ಹಲವು ವರ್ಷದಿಂದ ತಗ್ಗು, ಗುಂಡಿಗಳು ಸೃಷ್ಟಿಯಾಗಿವೆ. ರಾತ್ರಿಯಂತೂ ಬೈಕ್ ಸವಾರರು ಪ್ರಯಾಣಿಸಲು ಸಾಧ್ಯವಿಲ್ಲ, ಅಷ್ಟೊಂದು ವಾಹನದಟ್ಟಣೆ ಇರುತ್ತದೆ. ಜನರ ಪ್ರಾಣಕ್ಕೆ ಕಿಂಚಿತ್ತೂ ಬೆಲೆ ಇಲ್ಲ. ಪ್ರಾಧಿಕಾರ ಈ ಬಗ್ಗೆ ಗಮನಹರಿಸಬೇಕಿದೆ.
- ಬಣವಿಕಲ್ಲು ಎರ್ರಿಸ್ವಾಮಿ

- ಭೀಮಣ್ಣ ಗಜಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement