2006 ಸಿಇಟಿ ಕಾಯ್ದೆ ಜಾರಿಗೆ ವಿರೋಧ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 17
ಬಡ, ಮಧ್ಯಮ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಎಂಜಿನಿಯರಿಂಗ್, ಮೆಡಿಕಲ್ ಮುಂತಾದ ವೃತ್ತಿ ಶಿಕ್ಷಣದಿಂದ ವಂಚಿತರನ್ನಾಗಿಸುವ ಹುನ್ನಾರದೊಂದಿಗೆ ರಾಜ್ಯ ಸರ್ಕಾರ ಜಾರಿಗೊಳಿಸಲು ನಿರ್ಧರಿಸಿದ 2006ರ ಸಿಇಟಿ ಕಾಯ್ದೆ ವಿರೋಧಿಸಿ ನಗರದಲ್ಲಿ ಮಂಗಳವಾರ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಸ್ಥಳೀಯ ವಾರ್ಡ್ಲಾ ಕಾಲೇಜಿನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಡಿಸಿ ಕಚೇರಿ ತಲುಪಿತು. ರಸ್ತೆಯುದ್ದಕ್ಕೂ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ 2006 ಸಿಇಟಿ ಕಾಯ್ದೆ ಅನುಷ್ಠಾನಕ್ಕೆ ಮುಂದಾಗಬಾರದೆಂದು ವಿದ್ಯಾರ್ಥಿಗಳು ಫಲಕಗಳನ್ನು ಹಿಡಿದು ಸರ್ಕಾರ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಎಬಿವಿಪಿ ನಗರ ಕಾರ್ಯದರ್ಶಿ ವಿನೋದ್ಕುಮಾರ್ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ, ದುರ್ಬಲ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ವಿಫಲವಾಗುವ ಮತ್ತು ಅವರ ಶೈಕ್ಷಣಿಕ ಹಕ್ಕನ್ನು ಮೊಟಕುಗೊಳಿಸುವ ಸರ್ಕಾರದ ಈ ನೀತಿ ವಿದ್ಯಾರ್ಥಿ ಹಾಗೂ ಶೈಕ್ಷಣಿಕ ವಿರೋಧಿ ನೀತಿಯಾಗಿದೆ. ಬಡ, ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುವ ವಿದ್ಯಾರ್ಥಿ ವಿರೋಧಿ ಕಾಯ್ದೆ ತೀವ್ರ ಖಂಡನೀಯವಾಗಿದ್ದು, ಸರ್ಕಾರ ಕೂಡಲೇ ಕಾಯ್ದೆ ಹಿಂಪಡೆಯಬೇಕೆಂದರು.
ರಾಜ್ಯ ಸರ್ಕಾರ ಜಾರಿಗೊಳಿಸಲು ಹೊರಟಿರುವ ಈ ಕಾಯ್ದೆಯಿಂದಾಗಿ ಪ್ರಸ್ತುತ ಸರ್ಕಾರಿ ಕೋಟಾದಲ್ಲಿದ್ದು, ಎಂಜಿನಿಯರಿಂಗ್ನ 45ರಷ್ಟು, ಮೆಡಿಕಲ್ನ 40ರಷ್ಟು, ದಂತ ವೈದ್ಯಕೀಯದ 35ರಷ್ಟು ಸೀಟುಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾಗಲಿದ್ದು, ಯಾವುದೇ ಖಾಸಗಿ ಅನುದಾನರಹಿತ ಕಾಲೇಜಿನಲ್ಲಿ ಒಂದೂ ಸರ್ಕಾರಿ ಕೋಟಾದ ಸೀಟುಗಳು ಇಲ್ಲದಂತಾಗಲಿದೆ. ತನ್ನ ಪಾಲಿನ ಸೀಟುಗಳಿಗಾಗಿ ಕಾಮೆಡ್-ಕೆ ನಡೆಸುವ ಪ್ರವೇಶ ಪರೀಕ್ಷೆ ಬಗ್ಗೆ ಈಗಾಗಲೇ ಹಲವಾರು ದೂರುಗಳಿದ್ದು, ಹೀಗಾಗಿ ಸರ್ಕಾರ ಉಳಿದ ಸೀಟು(ಸರ್ಕಾರಿ)ಗಳಿಗೂ ಪರೀಕ್ಷೆ ನಡೆಸಲು ಕಾಮೆಡ್-ಕೆಗೆ ಬಿಟ್ಟುಕೊಡುತಿರುವುದು ತೀವ್ರ ಖಂಡನೀಯವಾಗಿದೆ ಎಂದರು.
ಈ ರೀತಿ ಮಾಡುವುದರಿಂದ ಖಾಸಗಿ ಸಂಸ್ಥೆಗಳಿಗೆ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡಲು ಅನುಕೂಲವಾಗುತ್ತದೆ. ಇದನ್ನು ತಡೆಯಲೆಂದೇ 2006ರ ಕಾಯ್ದೆ ಅನುಷ್ಠಾನ ಮಾಡುತ್ತಿರುವುದಾಗಿ ಸರ್ಕಾರ ಹೇಳುತ್ತಿದ್ದರು ಪರಿಣಾಮ ವ್ಯತಿರಿಕ್ತವಾಗಿಯೇ ಇರುತ್ತದೆ. ಖಾಸಗಿ ವೈದ್ಯಕೀಯ, ದಂತ, ಎಂಜಿನಿಯರಿಂಗ್, ಯುನಾನಿ, ಆಯುರ್ವೇದ, ಯೋಗ, ನ್ಯಾಚರೋಪತಿ ಕಾಲೇಜುಗಳಲ್ಲಿಯ ಸರ್ಕಾರಿ ಸೀಟುಗಳಿಗೆ ಪ್ರವೇಶ ಶುಲ್ಕ ಕುರಿತಂತೆ ಸರ್ಕಾರದ ಪೂರ್ಣ ನಿಯಂತ್ರಣ ತಪ್ಪಿ, ಖಾಸಗಿ ಆಡಳಿತ ಮಂಡಳಿಗಳಿಗೆ ಪರಮಾಧಿಕಾರ ಕೊಟ್ಟಂತಾಗುತ್ತದೆ. ಇತರೆ ರಾಜ್ಯಗಳ ವಿದ್ಯಾರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಕಾಮೆಡ್-ಕೆ ಪ್ರವೇಶ ಬರೆಯುವುದರಿಂದ ಕರ್ನಾಟಕದ ವಿದ್ಯಾರ್ಥಿಗಳಿಗೆ ಸ್ಪರ್ಧೆ ಹೆಚ್ಚಾಗಿ, ಅವರು (ರಾಜ್ಯದವರು) ಸೀಟುಗಳಿಂದ ವಂಚಿತರಾಗುತ್ತಾರೆ ಎಂದು ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದೆ.
ರಾಜ್ಯದ 2010 ಎಂಜಿನಿಯರಿಂಗ್ ಕಾಲೇಜುಗಳಲ್ಲಿ 21 ಮತ್ತು 32 ವೈದ್ಯಕೀಯ ಕಾಲೇಜುಗಳಲ್ಲಿ 10 ಕಾಲೇಜುಗಳಲ್ಲಿನ ಸುಮಾರು 5,000 ಸೀಟುಗಳಿಗೆ ಮಾತ್ರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರವೇಶ ಪರೀಕ್ಷೆ ನಡೆಸಲಿದೆ. ಉಳಿದ ಸುಮಾರು 75 ಸಾವಿರ ಸೀಟುಗಳಿಗೆ ಕಾಮೆಡ್-ಕೆ ಪ್ರವೇಶ ಪರೀಕ್ಷೆ ನಡೆಸುವುದರಿಂದ ಕಳ್ಳನ ಕೈಗೆ ಕೀಲಿ ಕೊಟ್ಟಂತೆ ಆಗುತ್ತದೆ. ಏಕೆಂದರೆ ಕಾಮೆಡ್-ಕೆ ಈ ಹಿಂದೆ ನಡೆಸಿದ ಪ್ರವೇಶ ಪರೀಕ್ಷೆ ಅವ್ಯವಹಾರಗಳೇ ಇದಕ್ಕೆ ಸಾಕ್ಷಿ ಎಂದು ದೂರಿದೆ.
ರಾಜ್ಯ ಸರ್ಕಾರವು ಯಾವುದೇ ಕಾರಣಕ್ಕೂ 2006ರ ಸಿಇಟಿ ಕಾಯ್ದೆ ಅನುಷ್ಠಾನಕ್ಕೆ ಮುಂದಾಗಬಾರದು. ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ಸಂಘಟನೆಯ ರವಿಗೌಡ, ವಿವೇಕ್, ರಾಮಕೃಷ್ಣ, ಸಿ.ಎಚ್. ರಾಮಾಂಜಿನಿ, ವರದಾ, ಲಕ್ಷ್ಮಿ ಇತರರು ಪಾಲ್ಗೊಂಡಿದ್ದರು.