ಇಂದು ಪಟ್ಟಣಕ್ಕೆ ಜೈನಶ್ರೀ
ಹೂವಿನಹಡಗಲಿ: ಪಟ್ಟಣಕ್ಕೆ ಡಿ. 18ರಂದು ಹೊಂಬಾಜಿ ಜೈನಮಠದ ಜಗದ್ಗುರು ಶ್ರೀ ದೇವೇಂದ್ರಕೀರ್ತಿ ಸ್ವಾಮೀಜಿ ಆಗಮಿಸಲಿದ್ದಾರೆ. ಪಟ್ಟಣದಲ್ಲಿ ಪುರಪ್ರವೇಶ ಹಾಗೂ ಪಾರ್ಶ್ವನಾಥ ಜೈನ ಮಂದಿರದ ಮಾನಸ್ತಂಭ ಶಿಲಾನ್ಯಾಸ ಪೂಜಾ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ ಎಂದು ಜೈನ ಸಮಾಜದ ಅಧ್ಯಕ್ಷ ರೇವಡಿ ಪಾರ್ಶ್ವನಾಥ ತಿಳಿಸಿದ್ದಾರೆ.
ಮಿಂಚಿನಲ್ಲಿ ಸಿಡಿಲು ಬಡಿದಿತಲೆ ಪರಾಕ್: ಕಾರ್ಣಿಕ ನುಡಿ
ಹೂವಿನಹಡಗಲಿ: ಮುಂಗಾರು ಮಿಂಚಿನಲ್ಲಿ ಸಿಡಿಲು ಬಡಿದಲೇ ಪರಾಕ್ ಎಂಬ ದೈವವಾಣಿ ಕೇಳಿಬಂದಿದ್ದು ತಾಲೂಕಿನ ಹಕ್ಕಂಡಿ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಯ ಕಾರ್ಣಿಕೋತ್ಸವದಲ್ಲಿ ಗ್ವಾರಪ್ಪ ನುಡಿದ ನುಡಿಯಿದು. ಮಂಗಳವಾರ ಸಂಜೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತ ಸಮೂಹದ ನಡುವೆ ಆಕಾಶದತ್ತ ಮುಖ ಮಾಡಿ ನಿಲ್ಲಿಸಲಾದ ಬಿಲ್ಲನ್ನೇರಿದ ಗ್ವಾರಪ್ಪ, ಅದೇ ಗ್ರಾಮದ ಚನ್ನಪ್ಪಜ್ಜ ಈ ಕಾರ್ಣಿಕ ನುಡಿದರು. ಈ ಶುಭ ನುಡಿಯನ್ನು ಆಲಿಸಲು ಬಂದಿದ್ದ ಭಕ್ತರು ಮುಂಬರುವ ಮುಂಗಾರು ಮಳೆಯು ಭಾರಿ ಪ್ರಮಾಣದಲ್ಲಿ ಬಂದು ಮಳೆ ಜತೆಗೆ ಗುಡುಗು ಸಿಡಿಲಿನ ಅಬ್ಬರ ಮಳೆ ಬೀಳಲಿದೆ. ಹೆಚ್ಚಿನ ಪ್ರಮಾಣದಲ್ಲಿ ಮಳೆ ಬರಲಿದೆ ಎಂದು ಕೃಷಿಗೆ ಸಂಬಂಧಪಟ್ಟಂತೆ ವಿಶ್ಲೇಷಿಸಿಕೊಂಡರು. 2-3 ದಿನಗಳಿಂದ ಆರಂಭವಾಗಿರುವ ಜಾತ್ರೆಯಲ್ಲಿ ಸಾವಿರಾರು ಸಂಖ್ಯೆಯ ಭಕ್ತರು ಮೈಲಾರಲಿಂಗೇಶ್ವರನ ದರ್ಶನ ಪಡೆದು ಪುನೀತರಾದರು.
ಅನ್ನದಾತ ದಿನ ಆಚರಿಸಿ: ವೀರೇಶ್ ನಾಗಶೆಟ್ಟಿ
ಹಗರಿಬೊಮ್ಮನಹಳ್ಳಿ: ಮಹಾಪುರುಷರ ಜನ್ಮದಿನಾಚರಣೆಗಳನ್ನು ಸರ್ಕಾರಿ ಜಯಂತಿಯನ್ನಾಗಿ ಘೋಷಿಸಿ ರಜೆ ನೀಡುವ ಮೂಲಕ ಮಹಾಪುರುಷರನ್ನು ಸ್ಮರಿಸಿಕೊಳ್ಳುವಂತೆ ದೇಶಕ್ಕೆ ಅನ್ನ ನೀಡುವ ರೈತ ಸಮುದಾಯವನ್ನು ಸ್ಮರಿಸಿಕೊಳ್ಳಲು ಪ್ರತಿವರ್ಷ ಜೂನ್ ತಿಂಗಳ ಒಂದು ದಿನವನ್ನು ಅನ್ನದಾತರ ದಿನಾಚರಣೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಘೋಷಿಸಬೇಕು ಎಂದು ಅನ್ನದಾತರ ಪರ ಹೋರಾಟ ಸಮಿತಿ ಅಧ್ಯಕ್ಷ ವೀರೇಶ ನಾಗಶೆಟ್ಟಿ ಆಗ್ರಹಿಸಿದ್ದಾರೆ. ದಿನ ಆಚರಿಸುವ ಮೂಲಕ ಈ ದೇಶದ ಅನ್ನದಾತರನ್ನು ನೆನಪಿಸಿಕೊಳ್ಳುವ ಕಾರ್ಯ ಮಾಡಬೇಕು. ದೇಶಕ್ಕೆ ಅನ್ನ ನೀಡುವ ರೈತನಿಗೂ ವರ್ಷದಲ್ಲಿ ಒಂದು ದಿನ ಸರ್ಕಾರಿ ಗೌರವ ಸಿಗಬೇಕು ಎನ್ನುವ ದೃಷ್ಟಿಯಿಂದ ಅನ್ನದಾತರ ದಿನಾಚರಣೆ ಅಗತ್ಯವಿದೆ. ದಿನಾಚರಣೆ ಘೋಷಣೆ ಮಾಡುವ ಜತೆಯಲ್ಲೇ ದಿನಾಚರಣೆ ದಿನದಂದು ಎಲ್ಲ ಗ್ರಾಮ, ತಾಲೂಕು ಹಾಗೂ ಜಿಲ್ಲಾ, ರಾಜ್ಯ ಮಟ್ಟದಲ್ಲಿ ಉತ್ತಮ ರೈತರನ್ನು ಗುರುತಿಸಿ ಅವರನ್ನು ಸರ್ಕಾರದಿಂದ ನಗದು ಪುರಸ್ಕಾರದೊಂದಿಗೆ ಸರ್ಕಾರಿ ಸನ್ಮಾನ ಮಾಡಬೇಕು. ರೈತರು ಬೆಳೆದ ಎಲ್ಲ ರೀತಿಯ ಬೆಳೆಗಳಿಗೆ ಬಿತ್ತನೆ ಸಮಯದಲ್ಲಿಯೇ ಬೆಂಬಲ ಬೆಲೆ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.
ನೂತನ ಆವಿಷ್ಕಾರದಿಂದ ಉತ್ತಮ ಬತ್ತ ಬೆಳೆಯಿರಿ
ಸಿರುಗುಪ್ಪ: ರೈತರು ನೂತನವಾಗಿ ಆವಿಷ್ಕಾರಗೊಳ್ಳುವ ಪದ್ಧತಿಯಲ್ಲಿ ಬತ್ತ ಬೆಳೆಯುವ ಮೂಲಕ ಉತ್ಪಾದನಾ ವೆಚ್ಚ ಕಡಿಮೆಗೊಳಿಸಿ ಹೆಚ್ಚಿನ ಲಾಭ ಪಡೆಯಲು ಸಾಧ್ಯ ಎಂದು ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ರವಿಶಂಕರ್ ತಿಳಿಸಿದರು.
ತಾಲೂಕಿನ ಕರೂರು ಗ್ರಾಮದ ಓತೂರು ಬಸಣ್ಣ ಜಮೀನಿನಲ್ಲಿ ಗುರುವಾರ ಕೃಷಿ ವಿಜ್ಞಾನ ಕೇಂದ್ರ ಬಳ್ಳಾರಿ, ಕೃಷಿ ಸಂಶೋಧನಾ ಕೇಂದ್ರ ಸಿರುಗುಪ್ಪ ಹಾಗೂ ಕೃಷಿ ಇಲಾಖೆ ಹಮ್ಮಿಕೊಂಡಿದ್ದ ನೇರ ಬಿತ್ತನೆ ಬತ್ತದ ಬೆಳೆ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.
ಭೂಮಿಯ ಫಲವತ್ತತೆ ಉಳಿಸಲು ಭೂಮಿಗೆ ಕೃಷಿ ಇಲಾಖೆಯಲ್ಲಿ ದೊರೆಯುವ ಲಘು ಪೋಷಕಾಂಶಗಳನ್ನು ಬಳಸುವುದರ ಜತೆಯಲ್ಲಿ ಸಾಂಪ್ರದಾಯಿಕ ಬತ್ತ ಬೆಳೆಯ ಬದಲಿಗೆ ಹಿತ ನೀರು ಹಾಗೂ ಮಿತ ವೆಚ್ಚದಲ್ಲಿ ಅಧಿಕ ಲಾಭಗಳಿಸುವ ಬತ್ತದ ನೇರ ಬಿತ್ತನೆ ಮಾಡುವ ಮೂಲಕ ಉತ್ತಮ ಇಳುವರಿ ಹಾಗೂ ಹೆಚ್ಚಿನ ಲಾಭ ಗಳಿಕೆ ಸಾಧ್ಯ ಎಂದು ವಿವರಿಸಿದರು. ಮಣ್ಣು ವಿಜ್ಞಾನಿ ವಿಜಯಶೇಖರ್ ಗೌಡ ಮಾತನಾಡಿ, ಪ್ರತಿ ವರ್ಷವೂ ಪ್ರತಿಯೊಬ್ಬ ರೈತರು ಮಣ್ಣು ಪರೀಕ್ಷೆ ಮಾಡಿಸುವ ಮೂಲಕ ಅಗತ್ಯ ಇರುವ ಅಂಶಗಳ ರಸಗೊಬ್ಬರ ಬಳಕೆ ಮಾಡುವುದರಿಂದ ಭೂಮಿಯ ಸವಳು ಬರುವುದು ರಕ್ಷಿಸಲು ಸಾಧ್ಯ ಎಂದು ತಿಳಿಸಿದರು. ಕೇಂದ್ರದ ರೋಗ ತಜ್ಞ ಯಂಜೋರಪ್ಪ, ಹೈನುಗಾರಿಕೆ ತಜ್ಞ ಡಾ. ರಮೇಶ, ಕೃಷಿ ಸಂಶೋಧನ ಕೇಂದ್ರದ ಮುಖ್ಯಸ್ಥ ಎಂ.ಎ. ಬಸವಣ್ಣೆಪ್ಪ, ಸಹಾಯಕ ಅಧಿಕಾರಿ ಮಾರುತಿ ಪ್ರಸಾದ್, ಎಪಿಎಂಸಿ ಮಾಜಿ ಅಧ್ಯಕ್ಷ ಕೆ. ಮಂಜುನಾಥಗೌಡ, ರೈತರು ಇದ್ದರು.