ಏಕೀಕರಣ ಹೋರಾಟಗಾರನಿಗೆ ನಾಡೋಜ ಗೌರವ
ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ 22ನೇ ನುಡಿಹಬ್ಬ (ಘಟಿಕೋತ್ಸವ) ಡಿ. 21 ರಂದು ನಡೆಯುತ್ತಿದ್ದು, ಅಂದು ಕನ್ನಡ ನಾಡು, ನುಡಿಗೆ ಅನುಪಮ ಸೇವೆ ಸಲ್ಲಿಸಿದ ಮೂವರು ಗಣ್ಯರಿಗೆ ನಾಡೋಜ ಪದವಿ ನೀಡುತ್ತಿದ್ದಾರೆ. ಆ ಮೂವರ ಕಿರು ಪರಿಚಯ ಇಲ್ಲಿದೆ.
ಸಾಹಿತಿ ಕೋ. ಚನ್ನಬಸಪ್ಪ: ಅಂದಿನ ಮದ್ರಾಸ್ ಪ್ರಾಂತದ ಬಳ್ಳಾರಿ ವಲಯದ (ಇಂದಿನ ಬಳ್ಳಾರಿ ಜಿಲ್ಲೆ) ಕೂಡ್ಲಿಗಿ ತಾಲೂಕು ನ ಆಲೂರು ಗ್ರಾಮದಲ್ಲಿ 1922ರ ಮಾರ್ಟ್ 1ರಂದು ಕೋ. ಚನ್ನಬಸಪ್ಪ ಜನಿಸಿದರು. 1946ರಲ್ಲಿ ಬಾಂಬೆ ಹೈಕೋರ್ಟ್ನಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿ, 1954ರಲ್ಲಿ ಸುಪ್ರೀಂ ಕೋರ್ಟ್ನಲ್ಲೂ ವಕೀಲಿ ವೃತ್ತಿ ನಡೆಸಿದರು.
1942ರಲ್ಲಿ ಭಾರತ ಬಿಟ್ಟು ತೊಲಗಿ ಆಂದೋಲನದಲ್ಲಿ ಭಾಗಿಯಾಗಿ ಸೆರೆವಾಸ ಅನುಭವಿಸಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಅಲ್ಲದೇ ಕೋ. ಚನ್ನಬಸಪ್ಪ ಅವರು ಸಾಹಿತಿಯಾಗಿ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅದ್ವಿತೀಯ ಕೃಷಿ ಮಾಡಿದ್ದಾರೆ. ಎಪ್ಪತ್ತು ಕೃತಿಗಳನ್ನು ರಚಿಸಿದ್ದಾರೆ. ಕಾದಂಬರಿ, ಸಣ್ಣಕತೆ, ನಾಟಕ, ಆತ್ಮಕಥೆ, ವಿಮರ್ಶೆ, ಅನುವಾದದ ಮೂಲಕ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಪ್ರಮುಖರಲ್ಲಿ ಇವರೂ ಒಬ್ಬರು. ರಾಷ್ಟ್ರಕವಿ ಕುವೆಂಪು ಅವರ ಒಡನಾಡಿಯೂ ಆಗಿದ್ದರು.
ಕರ್ನಾಟಕ ಏಕೀಕರಣದಲ್ಲಿ ಮಹತ್ತರ ಪಾತ್ರ ವಹಿಸಿದ ಚನ್ನಬಸಪ್ಪನವರು, ಇಂದಿಗೂ ನಾಡು, ನುಡಿಯ ರಕ್ಷಣೆಗಾಗಿ ಟೊಂಕ ಕಟ್ಟಿದ್ದಾರೆ. ಕೋರ್ಟ್ನಲ್ಲಿ ಕನ್ನಡ ಬಳಕೆ ಬಗೆಗೆ ವಿಶೇಷ ಆಸಕ್ತಿವಹಿಸಿ, ಕನ್ನಡದಲ್ಲಿ ತೀರ್ಪುಗಳನ್ನು ಬರೆದದ್ದು ಇವರ ಕನ್ನಡಾಭಿಮಾನಕ್ಕೆ ಸಾಕ್ಷಿ. ಹೀಗೆ ಕನ್ನಡ ತೇರು ಎಳೆದ ಚನ್ನಬಸಪ್ಪನವರು 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವಿಸಲ್ಪಟ್ಟರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಅನೇಕ ಗೌರವ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ನಿವೃತ್ತ ನ್ಯಾ. ಎನ್. ಸಂತೋಷ ಹೆಗ್ಡೆ: ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ 1940ರ ಜೂನ್ 6 ರಂದು ಸಂತೋಷ್ ಹೆಗ್ಡೆ ಜನಿಸಿದ್ದಾರೆ. ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದು ಜನವರಿ 1966ರಲ್ಲಿ ವಕೀಲ ವೃತ್ತಿ ಪ್ರಾರಂಭಿಸಿದರು. ನವೆಂಬರ್ 1989ರಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಹುದ್ದೆಗೆ ನೇಮಕಗೊಂಡು 11 ತಿಂಗಳ ಕಾಲ ಕಾರ್ಯ ನಿರ್ವಹಿಸಿದರು. ಕರ್ನಾಟಕದಿಂದ ಈ ಹುದ್ದೆಗೆ ನೇಮಕಗೊಂಡ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಇವರದು.
1999ರಲ್ಲಿ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು. ಸುಪ್ರೀಂ ಕೋರ್ಟ್ ಇತಿಹಾಸದಲ್ಲೇ ಬಾರ್ನಿಂದ ನೇರವಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕವಾದ ನಾಲ್ವರಲ್ಲಿ ಇವರೂ ಒಬ್ಬರು. ಆಗಸ್ಟ್ 3, 2006ರಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿಯಾಗಿ ನೇಮಕವಾದರು. ಗಣಿ ಅಕ್ರಮದ ಕುರಿತು ಸಮಗ್ರ ವರದಿ ನೀಡಿದ್ದು ಇತಿಹಾಸ. ಹೆಗ್ಡೆಯವರಿಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ.
ಪ್ರಖ್ಯಾತ ವಿಜ್ಞಾನಿ ಎಸ್.ಕೆ. ಶಿವಕುಮಾರ್: ಕನ್ನಡಿಗರಾದ ಎಸ್.ಕೆ. ಶಿವಕುಮಾರ್ ಅವರು ಇಂಡಿಯನ್ ಇನ್ಸ್ಟಿಟ್ಯೂಟ್ನ ಪದವೀಧರರಾಗಿ ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಸ್ಥೆಯ(ಇಸ್ರೋ) ವಿಜ್ಞಾನಿಯಾಗಿ, ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಸ್ರೋ ಬಾಹ್ಯಾಕಾಶ ಕೇಂದ್ರದಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿದ ಶಿವಕುಮಾರ್, ಇಸ್ರೋದ ಟೆಲಿಮೆಟ್ರಿ, ಟ್ರಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ನ (ಇಸ್ಟ್ರಾರ್) ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದಾರೆ.
ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಮಿತಿಗಳಲ್ಲಿ ಭಾರತ ಬಾಹ್ಯಾಕಾಶ ಕೇಂದ್ರ ಪ್ರತಿನಿಧಿಸಿದ ಇವರು, ವಿಶ್ವಸಂಸ್ಥೆ, ವಿಶ್ವದ ಇತರೆ ಬಾಹ್ಯಾಕಾಶ ಸಂಸ್ಥೆಗಳಲ್ಲಿ ಭಾರತದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದಾರೆ. ದೇಶ, ವಿದೇಶದ ಪ್ರತಿಷ್ಠಿತ ಸಂಘ ಸಂಸ್ಥೆಗಳ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಇವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ 22ನೇ ನುಡಿ ಹಬ್ಬದಲ್ಲಿ ನಾಡೋಜ ಪದವಿ ನೀಡಿ ಗೌರವಿಸಲಾಗುತ್ತಿದೆ.