ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕಮಲದತ್ತ ಸೂರ್ಯನಾರಾಯಣ ರೆಡ್ಡಿ ಮುಖ?

Lingaraj Badiger
Updated On : 18 Dec 2013, 11:39 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 17
ಇತ್ತ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅತ್ತ ಹೈದರಾಬಾದ್ ಕರ್ನಾಟಕ ಭಾಗದ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಹೊಸ ಹೊಸ ಬೆಳವಣಿಗೆಗಳು ಗರಿಗೆದರಿವೆ. ಅದರಲ್ಲೂ ಜೆಡಿಎಸ್ ಪಕ್ಷಕ್ಕೆ ಈ ಭಾಗದಲ್ಲಿ ಧಕ್ಕೆಯಾಗುವ ನಡೆಯೊಂದು ಸದ್ದಿಲ್ಲದೇ ನಡೆಯುತ್ತಿದೆ.
ಹೌದು, ಇತ್ತೀಚೆಗೆ ಬಸವಕಲ್ಯಾಣದ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಬಳ್ಳಾರಿಗೆ ಬಂದು, ಇಲ್ಲಿನ ಜೆಡಿಎಸ್ ಮುಖಂಡ ಎನ್. ಸೂರ್ಯನಾರಾಯಣ ರೆಡ್ಡಿ ಅವರೊಂದಿಗೆ ಗುಪ್ತವಾಗಿ ದಿನಪೂರ್ತಿ ರಾಜಕೀಯದ ಬಗ್ಗೆ ಚರ್ಚೆ ಮಾಡಿದ್ದಾರೆ. ಆ ಚರ್ಚೆ ಈ ಇಬ್ಬರೂ ಪ್ರಮುಖ ನಾಯಕರು ಪಕ್ಷಾಂತರ ಮಾಡಲಿದ್ದಾರೆ ಎಂದೆ ಜೆಡಿಎಸ್ ವಲಯ ಹೇಳುತ್ತಿದೆ. ಆ ಮೂಲಕ ಈ ಭಾಗದ ಜೆಡಿಎಸ್ ಮುಖಂಡರು ತಮ್ಮ ಮುಂದಿನ ರಾಜಕೀಯ ನಡೆಯನ್ನು ಬದಲಾಯಿಸುವ ಲಕ್ಷಣಗಳು ಗೋಚರಿಸುತ್ತಿವೆ.
ಇದಲ್ಲದೇ ಜೂನ್‌ನಲ್ಲಿ ನಡೆದ ಸೂರ್ಯನಾರಾಯಣ ರೆಡ್ಡಿ ಪುತ್ರ ಶರತ್ ರೆಡ್ಡಿ ವಿವಾಹಕ್ಕೆ ರಾಯಚೂರು ಸಂಸದ ಫಕ್ಕೀರಪ್ಪ ಹಾಗೂ ಜಿ. ಸೋಮಶೇಖರ ರೆಡ್ಡಿ ಹೋಗಿದ್ದು ಸಹಜವಾಗಿಯೇ ಅದು ಹೊಸರೂಪ ಪಡೆದುಕೊಂಡಿದೆ. ಈವರೆಗೆ ತಟಸ್ಥರಾಗಿದ್ದ ಸೋಮಶೇಖರ ರೆಡ್ಡಿ, ಬಿಜೆಪಿ ಆಯೋಜಿಸಿದ್ದ ಭಾರತಕ್ಕಾಗಿ ಏಕತಾ ಓಟದಲ್ಲಿ ದಿಢೀರ್ ಕಾಣಿಸಿಕೊಂಡಿದ್ದು, ಮಲ್ಲಿಕಾರ್ಜುನ ಖೂಬಾ ಸೂರ್ಯನಾರಾಯಣ ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಿದ್ದು ಪಕ್ಷಾಂತರ ಪರ್ವಕ್ಕೆ ನಾಂದಿ ಹಾಡಲಿದೆಯೇ ಎಂಬ ಬಿಸಿ ಚರ್ಚೆ ನಡೆಯುತ್ತಿದೆ.
ಸೂರ್ಯನಾರಾಯಣ ರೆಡ್ಡಿ ಬಿಜೆಪಿಗೆ ಹೋಗ್ತಾರಾ?: ಈಗಾಗಲೆ ಶ್ರೀರಾಮುಲು, ಸೋಮಶೇಖರ ರೆಡ್ಡಿ ಬಿಜೆಪಿ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಸೋಮಶೇಖರ ರೆಡ್ಡಿ ಭಾರತಕ್ಕಾಗಿ ಏಕತಾ ಓಟದಲ್ಲಿ ಕಾಣಿಸಿಕೊಂಡಿದ್ದು ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಿದೆ. ಇನ್ನು ಎಷ್ಟೋ ವರ್ಷಗಳ ಕಾಲ ಸೂರ್ಯನಾರಾಯಣ ರೆಡ್ಡಿ ಜೆಡಿಎಸ್‌ನಲ್ಲಿದ್ದರೂ, ಸೂಕ್ತ ಸ್ಥಾನಮಾನ ನೀಡದಿರುವ ಬಗ್ಗೆ ಅವರ ಹಿಂಬಾಲಕರಿಗೆ ಅಸಮಾಧಾನ ಇದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ ಬಳ್ಳಾರಿ ಲೋಕಸಭಾ ಕ್ಷೇತ್ರ ಪ. ಪಂಗಡಕ್ಕೆ ಮೀಸಲಾಗಿರುವುದರಿಂದ, ಸೂರ್ಯನಾರಾಯಣ ರೆಡ್ಡಿ ಕೊಪ್ಪಳ ಕ್ಷೇತ್ರದಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಶ್ರೀರಾಮುಲು, ರೆಡ್ಡಿ ದೋಸ್ತಿ: ಬಿಎಸ್ಸಾರ್ ಪಕ್ಷವನ್ನು ಕಟ್ಟಿಕೊಂಡು ನಿರೀಕ್ಷೆಯಂತೆ ಯಶಸ್ಸನ್ನು ಶ್ರೀರಾಮುಲು ಸಾಧಿಸಿಲ್ಲ. ನಾರಾ ಸೂರ್ಯನಾರಾಯಣ ರೆಡ್ಡಿ (ಎನ್‌ಎಸ್‌ಆರ್) ಬಿಜೆಪಿಗೆ ಸೇರಿದ್ದೆಯಾದರೆ, ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಕಾರಣ ಕೊಪ್ಪಳ ಕ್ಷೇತ್ರದಲ್ಲಿ ಬಿಜೆಪಿಯಿಂದ ಎನ್‌ಎಸ್‌ಆರ್ ಸ್ಪರ್ಧಿಸಿದರೆ, ಶ್ರೀರಾಮುಲು ಬಿಜೆಪಿ ಸೇರಿ ಬಳ್ಳಾರಿ ಕ್ಷೇತ್ರಕ್ಕೆ ನಿಲ್ಲಲಿದ್ದಾರೆ. ಜಿಲ್ಲೆ ಮಟ್ಟಿಗೆ ರಾಜಕೀಯದಲ್ಲಿ ಶತ್ರುಗಳಂತೆ ಕಂಗೊಳಿಸುತ್ತಿದ್ದ ಶ್ರೀರಾಮುಲು ಹಾಗೂ ಸೂರ್ಯನಾರಾಯಣ ರೆಡ್ಡಿ ಈ ಮೂಲಕ ದೋಸ್ತಿಯಾಗಲಿದ್ದಾರೆ. ಅಂದುಕೊಂಡಂತೆ ಎಲ್ಲ ಬೆಳವಣಿಗೆಗಳು ನಡೆದರೆ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕಾಂಗ್ರೆಸ್‌ಗೆ ಸಹಜವಾಗಿ ಭಾರೀ ಪೆಟ್ಟು ಬೀಳಲಿದೆ. ಅಂದು ರಾಜಕೀಯದಲ್ಲಿ ಶತ್ರುಗಳಾಗಿದ್ದವರು, ಇಂದು ದೋಸ್ತಿಯಾದರೆ ಎದುರಾಳಿಗೆ ಆತಂಕ ಕಟ್ಟಿಟ್ಟ ಬುತ್ತಿ.
ಜೆಡಿಎಸ್ ಬಿಡುವ ಚಿಂತನೆಯೇ?: ಹೈಕ ಭಾಗದಲ್ಲಿ ಜೆಡಿಎಸ್‌ನ ಕೆಲ ಮುಖಂಡರು ಪಕ್ಷದಲ್ಲಿ ನಿರಾಸಕ್ತಿ ತೋರಿ, ಹೊರ ಹೋಗುವ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಅದರಲ್ಲಿ ಸೂರ್ಯನಾರಾಯಣ ರೆಡ್ಡಿ ಹಾಗೂ ಮಲ್ಲಿಕಾರ್ಜುನ ಖೂಬಾ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಮಲ್ಲಿಕಾರ್ಜುನ ಖೂಬಾ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಸಕ್ತಿ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಬೆಳವಣಿಗೆಗಳು ಅಂಬೆಗಾಲಿಡುತ್ತಾ, ತೆರೆಮರೆಯ ಚಟುವಟಿಕೆಗಳು ನಡೆಯಲಾರಂಭಿಸಿವೆ.
ಈವರೆಗೆ ರಾಜಕೀಯವಾಗಿ ತಟಸ್ಥವಾಗಿದ್ದ ಸೂರ್ಯನಾರಾಯಣ ರೆಡ್ಡಿ ಅವರು ಇದೀಗ ಯಾತ್ರಾ ಸ್ಥಳಗಳ ಪ್ರವಾಸ ಕೈಗೊಂಡಿದ್ದಾರೆ. ಇಷ್ಟೆಲ್ಲ ತೆರೆಮರೆಯ ಬೆಳವಣಿಗೆಗಳು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಲಿವೆ. ಲೋಕಸಭೆ ಚುನಾವಣೆ ಹೊತ್ತಿಗೆ ಜಿಲ್ಲೆ ಮಟ್ಟಿಗೆ ಯಾವ ಯಾವ ರಾಜಕೀಯ ಬೆಳವಣಿಗೆಗಳು ನಡೆಯುತ್ತವೆ ಎನ್ನುವುದನ್ನು ಕಾದುನೋಡಬೇಕು.
-ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement