ಎಲ್ಲರ ಹಿತ ಕಾಯುವುದೆ ಧರ್ಮ: ದೇವೇಂದ್ರಕೀರ್ತಿ ಸ್ವಾಮೀಜಿ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಡಿ. 18
ನಾಡಿನ ಶರಣರು, ಸಂತರು, ಮುನಿಗಳು ಸಾರ್ಥಕ ಜೀವನ ನಡೆಸಿ ಸಕಲ ಜೀವಿಗಳಲ್ಲಿ ದಯೆ ತೋರಿ ಧರ್ಮವನ್ನು ರಕ್ಷಿಸಿದ್ದಾರೆ ಎಂದು ಹೊಂಬಾಜಿ ಜೈನಮಠದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಇಲ್ಲಿನ 1008 ಪಾರ್ಶ್ವನಾಥ ದಿಗಂಬರ ಜೈನ ಬಸದಿ ಆವರಣದಲ್ಲಿ ಬುಧವಾರ ಮಾನಸ್ತಂಭ ಹಾಗೂ ಮಹಾವೀರ ಅಲ್ಪಸಂಖ್ಯಾತರ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಮನುಷ್ಯ ವಿವೇಕ ಹೊಂದಿದ್ದರಿಂದಲೆ ಸಕಲ ಜೀವಿಗಳಲ್ಲಿ ಶ್ರೇಷ್ಠನಾಗಿದ್ದಾನೆ. ಆತನ ರಕ್ಷಣೆ ಇರುವ ಧರ್ಮವನ್ನು ಆತ ರಕ್ಷಿಸುವುದರಿಂದ ಎಲ್ಲರಲ್ಲಿಯೂ ಶಾಂತಿ, ನೆಮ್ಮದಿ, ಹಿತ ಕಾಪಾಡಲು ಸಾಧ್ಯ. ಜೀವನದಲ್ಲಿ ವಿವೇಕ ಬೆಳೆಸಿಕೊಂಡು ಧರ್ಮ ನಂಬಿ ಜೀವಿಸಿದರೆ ಸಾರ್ಥಕ ಬದುಕು ಸಾಧಿಸಬಹುದು ಎಂದು ಹೇಳಿದರು.
ವಿದ್ಯೆಯಿಂದ ವಿವೇಕ ಪಡೆದು ದೇವರ ಸ್ಮರಣೆ ಮಾಡುತ್ತ ಸಮಾಜದ ಸತ್ಸಂಗದಲ್ಲಿ ಕೂಡಿ ಗುಣ, ಗಣದಲ್ಲಿ ಉತ್ತಮ ಚರ್ಚೆ ಮಾಡಿದಾಗ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಲು ಸಾಧ್ಯ. ಮುನಿ, ವಿದ್ವಾಂಸರು, ಗುರು ಹಿರಿಯರು, ತಂದೆ ತಾಯಿ ಸ್ಥಾನದಲ್ಲಿರುವವರು ತಿಳಿಯದೆ ಮಾಡಿರುವ ಪ್ರಮಾದವನ್ನು ಯಾರು ದೊಡ್ಡದಾಗಿ ಮಾಡದೆ ಮೌನವಾಗಿದ್ದರೆ ತಪ್ಪು ಮಾಡಿರುವ ವ್ಯಕ್ತಿ ತನ್ನ ತಪ್ಪನ್ನು ತಿದ್ದಿಕೊಂಡು ನಡೆಯುತ್ತಾನೆ. ಇವರ ತಪ್ಪನ್ನು ಸಮಾಜದಲ್ಲಿ ದೊಡ್ಡ ಪ್ರಮಾದವೆಂದು ಎತ್ತಿ ತೋರಿಸಿದರೆ ಆತನಿಂದ ಮತ್ತಷ್ಟು ತಪ್ಪುಗಳಾಗುತ್ತವೆ ಎಂದರು.
ಶ್ರೇಷ್ಠ ವ್ಯಕ್ತಿಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ಬದುಕನ್ನು ಸಾರ್ಥಕ ಮಾಡಿಕೊಳ್ಳಿ, ಜೀವನದಲ್ಲಿ ಬಹಳಷ್ಟು ಮಂದಿ ಶ್ರೀಮಂತರಾಗಿರುತ್ತಾರೆ. ಆದರೆ ದಾನ ಮಾಡುವುದಕ್ಕೆ ಕೈ ಬರುವುದಿಲ್ಲ. ಚಂಚಲ ಗುಣ ಹೊಂದಿರುವ ಲಕ್ಷ್ಮಿ ಯಾವ ಸ್ಥಳದಲ್ಲಿ ನಿಲ್ಲುವುದಿಲ್ಲ. ಹೀಗಾಗಿ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ, ಬಡ ರೋಗಿಗಳಿಗೆ ದಾನ ಮಾಡುವುದರಿಂದ ನಿಮ್ಮ ಸಂಪತ್ತು ಇನ್ನು ಹೆಚ್ಚಾಗುತ್ತದೆ. ಅಂತಹ ಗುಣಗಳನ್ನು ಬೆಳೆಸಿಕೊಂಡಾಗ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಸಾಧ್ಯ ಎಂದು ತಿಳಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶೋಭಾ ನಾಗರಾಜ ಕಾಂತೆಬೆನ್ನೂರು, ನೂತನ ಪುರಸಭೆ ಸದಸ್ಯ ಮಂಜುನಾಥ ಜೈನ್, ಸಂತೋಷ ಜೈನ್, ಪದ್ಮರಾಜ ಗುಂಜಾಳ, ಬಾಹುಬಲಿ ಪಾಟೀಲ್, ಎಚ್.ಡಿ. ಇಂದುಮತಿ, ತಾಲೂಕು ಬೀಚಿ ಬಳಗದ ಅಧ್ಯಕ್ಷ ಎಂ. ತವನಪ್ಪ, ಆಟೋ ಚಾಲಕ, ಮಾಲಕರ ಸಂಘದ ಅಧ್ಯಕ್ಷ ಅಜಿತ್ ಇವರನ್ನು ಸ್ವಾಮೀಜಿ ಸನ್ಮಾನಿಸಿದರು.
ತಾಲೂಕು ಜೈನ ಸಮಾಜದ ಅಧ್ಯಕ್ಷ ರೇವಡಿ ಪಾರ್ಶ್ವನಾಥ, ಗೌರವಾಧ್ಯಕ್ಷ ಡಾ.ಧರ್ಮಣ್ಣ, ತಾಲೂಕಿನ ಎಲ್ಲ ಹಳ್ಳಿಗಳ ಶ್ರಾವಕ, ಶ್ರಾವಕಿಯರು ಉಪಸ್ಥಿತರಿದ್ದರು. ಹೇಮಾ ನಿರೂಪಿಸಿದರು. ಪ್ರೇಮಾ ಸ್ವಾಗತಿಸಿದರು. ಪ್ರಕಾಶ ಜೈನ್ ಪ್ರಾರ್ಥಿಸಿದರು. ಸಹಕಾರ ಸಂಘದ ವ್ಯವಸ್ಥಾಪಕ ಕಿರಣಕುಮಾರ ಪ್ರಾಸ್ತಾವಿಕ ಮಾತನಾಡಿದರು.