ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಸ್ತಿಓಣಿ, ಬ್ಯಾಡರಗೇರಿ ಅಭಿವೃದ್ಧಿಪಡಿಸಿ: ಪಿಟಿಪಿ

Mainashree
Updated On : 19 Dec 2013, 10:44 am

ಹೂವಿನಹಡಗಲಿ: ಆಸರೆ ಯೋಜನೆಯಡಿ ಸ್ಥಳಾಂತರವಾಗುವ ಮಾಗಳ ಗ್ರಾಮದ ಬಸ್ತಿಓಣಿ, ಬ್ಯಾಡರಗೇರಿ ಪ್ರದೇಶಗಳಲ್ಲಿ ಮೂಲ ಸೌಲಭ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.
ತಾಲೂಕಿನ ಮಾಗಳ ಗ್ರಾಪಂ ಆವರಣದಲ್ಲಿ ಗ್ರಾಮದ ಸಾರ್ವಜನಿಕರ ಕುಂದು, ಕೊರತೆ ಆಲಿಸಿ ಮಾತನಾಡಿ, ಬಸ್ತಿಓಣಿ, ಬ್ಯಾಡರಗೇರಿಗೆ ಈ ಹಿಂದೆ ಎಸಿ ಭೇಟಿ ವರದಿ ನೀಡಿದ್ದಾರೆ. ಸ್ಥಳಾಂತರವಾಗುತ್ತಿರುವ ಪ್ರದೇಶ ಮುಳುಗಡೆ ವ್ಯಾಪ್ತಿಗೆ ಒಳಪಡುವುದಿಲ್ಲ. ಈ ಭಾಗದಲ್ಲಿ ಶೌಚಾಲಯ, ಮನೆ, ರಸ್ತೆ, ಚರಂಡಿ, ಮೂಲ ಸೌಕರ್ಯಕ್ಕೆ ಹೆಚ್ಚು ಅನುದಾನ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಸುವರ್ಣ ಗ್ರಾಮ ಯೋಜನೆಯಡಿ ಸಮುದಾಯಕ್ಕೆ ಮೀಸಲಿರುವ ಹಣವನ್ನು ಗ್ರಾಮದ ಗೋಣಿ ಬಸವೇಶ್ವರ ದೇವಸ್ಥಾನದ ಪಕ್ಕದಲ್ಲಿರುವುದಕ್ಕೆ ಬಳಸಲಾಗುವುದು, ಅಗತ್ಯ ಬಿದ್ದರೆ ಅನುದಾನ ನೀಡಿ ಪೂರ್ಣಗೊಳಿಸುತ್ತೇವೆ. ಗ್ರಾಮದ ರಂಗ ಮಂದಿರಕ್ಕೆ ರು. 5 ಲಕ್ಷ ನೀಡುವುದಾಗಿ ಭರವಸೆ ನೀಡಿದರು. ಗ್ರಾಮದ ಅಭಿವೃದ್ಧಿ ಹಾಗೂ ಜನಪರ ಯೋಜನೆಗಳನ್ನು ಸಿದ್ಧಪಡಿಸುವ ಕ್ರಿಯಾಯೋಜನೆಗೆ ಅಡ್ಡಿ ಇಲ್ಲದಂತೆ ಮಂಜೂರು ಮಾಡುವಂತೆ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಮಾಗಳ ಬೆಟ್ಟದ ಮಲ್ಲೇಶ್ವರ ರಸ್ತೆಗೆ ರು. 150 ಲಕ್ಷ, ಮಾಗಳ ಶಿವಪುರ ರಸ್ತೆಗೆ ರು. 150 ಲಕ್ಷ ಮಂಜೂರಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು. ಹೂವಿನಹಡಗಲಿ ಮಾಗಳ ಹೊಳಲು ರಸ್ತೆ ಎರಡು ಬದಿ ಬತ್ತದ ಗದ್ದೆಗಳಿವೆ. ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ರು. 12 ಕೋಟಿ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳಿಸಲಾಗಿದೆ ಎಂದರು.
ಗ್ರಾಮದ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಸಿಂಗಟಾಲೂರು ಏತನೀರಾವರಿ ಯೋಜನೆಯಲ್ಲಿ ಹನಿ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು, ಶೀಘ್ರದಲ್ಲೇ ನೀರಾವರಿ ತಜ್ಞ ಯಲ್ಲಾರೆಡ್ಡಿ ಭೇಟಿ ನೀಡಿ ವರದಿ ನೀಡಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಪರಮೇಶ್ವರಪ್ಪ ಮಾತನಾಡಿದರು. ಮುಖಂಡರಾದ ಕೆ. ಸತ್ಯನಾರಾಯಣ ರೆಡ್ಡಿ, ಅರವಳ್ಳಿ ವೀರಣ್ಣ, ಮಾಜಿ ತಾಪಂ ಅಧ್ಯಕ್ಷ ಅಂಬಿಗೇರ ತಿರುಕಪ್ಪ, ಗ್ರಾಪಂ ಅಧ್ಯಕ್ಷ ಎಚ್. ಬಸವರಾಜ, ಹನುಮಂತಗೌಡ, ಗ್ರಾಪಂ ಸದಸ್ಯ ಬಿ. ಚಂದ್ರಪ್ಪ, ಯಳಮಾಲಿ ವೀರೂಪಾಕ್ಷಪ್ಪ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಬಸವನಗೌಡ ಪಾಟೀಲ್, ಎಪಿಎಂಸಿ ಅಧ್ಯಕ್ಷ ವಾರದ ಗೌಸ್ ಮೋಹಿದ್ದೀನ್, ಅಟವಾಳಿಗೆ ಕೊಟ್ರೇಶ, ಜಿಪಂ ಸದಸ್ಯ ವಸಂತ ಇತರರಿದ್ದರು. ಮಂಜುನಾಥ ಸ್ವಾಗತಿಸಿದರು. ಸತೀಶ ನಿರೂಪಿಸಿದರು. ಸುರೇಶ ಭಿನ್ನವತ್ತಳೆ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement