ರು. 4.80 ಕೋಟಿಯಲ್ಲಿ 24 ಟ್ಯಾಂಕ್ ನಿರ್ಮಾಣ
ಹಗರಿಬೊಮ್ಮನಹಳ್ಳಿ: ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಉದ್ಭವಿಸುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ರು. 4.80 ಕೋಟಿ ವೆಚ್ಚದಲ್ಲಿ 24 ನೀರಿನ ಟ್ಯಾಂಕ್‌ಗಳ ನಿರ್ಮಾಣ ಮಾಡಿ ಜನತೆ ಬಾಯಾರಿಕೆಯನ್ನು ಶಾಶ್ವತವಾಗಿ ನಿವಾರಿಸುವ ಕೆಲಸಕ್ಕೆ ಮೊದಲ ಆದ್ಯತೆ ನೀಡಿರುವೆ ಎಂದು ಶಾಸಕ ಎಸ್. ಭೀಮಾನಾಯ್ಕ ಹೇಳಿದ್ದಾರೆ.
ತಾಲೂಕಿನ ಬ್ಯಾಲಾಳು ಗ್ರಾಮದ ಕೆರೆ ಬಳಿ ಒಂದು ಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ನೂತನ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೇರವೇರಿಸಿ ಮಾತನಾಡಿದ ಅವರು, ತಲಾ ರು. 20 ಲಕ್ಷ ವೆಚ್ಚದಲ್ಲಿ ಒಂದು ಲಕ್ಷ ಲೀಟರ್ ನೀರು ಸಂಗ್ರಹಿಸುವ ಟ್ಯಾಂಕ್‌ಗಳನ್ನು ಮೊದಲ ಹಂತದಲ್ಲಿ ಕ್ಷೇತ್ರದ 24 ಗ್ರಾಮಗಳಲ್ಲಿ ನಿರ್ಮಿಸಲಾಗುವುದು. ಈ ಮೂಲಕ ನೀರಿನ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸುವ ಕ್ರಮಗಳನ್ನು ಕೈಗೊಂಡು ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಉಲ್ಬಣವಾಗದಂತೆ ಈಗಿನಿಂದಲೆ ನಿಗಾವಹಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಕುಡಿಯುವ ನೀರಿನ ವಿಚಾರದಲ್ಲಿ ಗ್ರಾಮ ಪಂಚಾಯಿತಿ ಆಡಳಿತಗಳು ಬೇಜವಾಬ್ದಾರಿತನ ತೋರಿಸಬಾರದು. ಜನರಿಗೆ ನೀರು ಕೊಡುವುದು ಪಂಚಾಯಿತಿಗಳ ಕರ್ತವ್ಯ. ಕುಡಿಯುವ ನೀರು ಪೂರೈಕೆಗೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಈ ಅನುದಾನವನ್ನು ಸರಿಯಾಗಿ ಬಳಸಿಕೊಂಡು ಜನರಿಗೆ ನೀರಿನ ಸೌಲಭ್ಯ ಕಲ್ಪಿಸುವ ಕೆಲಸಕ್ಕೆ ಮುಂದಾಗಬೇಕು. ಅಲ್ಲದೆ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಿ ವೈಯುಕ್ತಿಕ ಹಾಗೂ ಸಾಮೂಹಿಕ ಶೌಚಾಲಯಗಳ ನಿರ್ಮಾಣದತ್ತ ಆಸಕ್ತಿ ವಹಿಸುವ ಮೂಲಕ ಸಂಪೂರ್ಣ ಸ್ವಚ್ಛ ಗ್ರಾಮಗಳ ನಿರ್ಮಾಣಕ್ಕೆ ಪಂಚಾಯಿತಿ ಆಡಳಿತ ಶ್ರಮಿಸಬೇಕು ಎಂದು ತಿಳಿಸಿದರು.
ಕಡ್ಲಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಡಲಡಿಕಿ ಮಂಜುಳಾ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ರೋಗಾಣಿ ಹುಲುಗಪ್ಪ, ತಾಪಂ ಸದಸ್ಯ ಉಪ್ಪಾರ ಬಾಲಪ್ಪ, ಎಪಿಎಂಸಿ ಸದಸ್ಯ ಹೂಗಾರ ಮಲ್ಲಣ್ಣ, ಅಕ್ಕಿ ತೋಟೇಶ್, ಜೆಡಿಎಸ್ ಅಧ್ಯಕ್ಷ ವೈ. ಮಲ್ಲಿಕಾರ್ಜುನ, ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಎಂ. ಚೋಳರಾಜ, ಕೊಟ್ರಗೌಡ, ಸದಸ್ಯರಾದ ಮಂಜುನಾಥ, ಕುರುದಗಡ್ಡಿ ನಾಗಪ್ಪ, ತಾಪಂ ಇಒ ಬಿಎಂಎಸ್ ವೀರಯ್ಯ, ಪಂರಾಇ ಎಇಇ ಆರ್.ಪ್ರಭು, ಎಇ ಕುಬೇಂದ್ರನಾಯ್ಕ ಇದ್ದರು.