ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸಂಕ್ಷಿಪ್ತ ಸುದ್ದಿ

Mainashree
Updated On : 19 Dec 2013, 10:45 am

22, 23ರಂದು ವಿಜಯನಗರ ಪಪೂ ಕಾಲೇಜು ಸುವರ್ಣ ಮಹೋತ್ಸವ
ಕೊಪ್ಪಳ: ಕೊಪ್ಪಳ ತಾಲೂಕಿನ ಮುನಿರಾಬಾದ್‌ನ ವೀರಶೈವ ವಿದ್ಯಾವರ್ಧಕ ಸಂಘದ ವತಿಯಿಂದ ನಡೆಯಲ್ಪಡುವ ವಿಜಯನಗರ ಸಂಯುಕ್ತ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ಡಿ. 22 ಮತ್ತು 23ರಂದು ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಸಹ ಕಾರ್ಯದರ್ಶಿ ಜಿ.ಎಸ್. ನೇಪಾಕ್ಷಪ್ಪ ಹೇಳಿದರು. ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ಪ್ರದೇಶದ ಜಿಲ್ಲೆಗಳಲ್ಲಿ ಸಂಘ 40 ಶಾಖೆಗಳನ್ನು ಒಳಗೊಂಡಿದೆ. ಶಾಖೆಯ ಅಡಿಯಲ್ಲಿ ವಿವಿಧ ಶಾಲೆ, ಕಾಲೇಜು, ಉನ್ನತ ವ್ಯಾಸಂಗದ ಕಾಲೇಜುಗಳು ನಡೆಯುತ್ತಿವೆ. ಸಾವಿರಾರು ವಿದ್ಯಾರ್ಥಿಗಳು ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ತಿಳಿಸಿದರು. ಜಿಲ್ಲೆಯ ಮುನಿರಾಬಾದ್‌ನಲ್ಲಿ 1963ರಲ್ಲಿ ಪ್ರೌಢಶಾಲೆ ಪ್ರಾರಂಭ ಮಾಡಲಾಯಿತು. ಪ್ರಾರಂಭದಲ್ಲಿ ಬರಿ 10 ವಿದ್ಯಾರ್ಥಿಗಳು ಮಾತ್ರ ಶಾಲೆಯಲ್ಲಿ ಶಿಕ್ಷಣ ಪಡೆದರು. ಆದರೆ, ಗುಣಮಟ್ಟದ ಶಿಕ್ಷಣಕ್ಕೆ ಹಾಗೂ ಕಟ್ಟಿ ಬಸವರಾಜ ಶಿಕ್ಷಕರ ಶ್ರಮದಿಂದ ಈಗ 4,500 ವಿದ್ಯಾರ್ಥಿಗಳು ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ ಎಂದರು. ಡಿ. 22 ಮತ್ತು ಡಿ. 23ರಂದು ವಿಜಯನಗರ ಸಂಯುಕ್ತ ಪದವಿಪೂರ್ವ ಕಾಲೇಜು ಸುವರ್ಣ ಮಹೋತ್ಸವವನ್ನು ಸಂಘ ಹಾಗೂ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ನೆರವಿನಿಂದ ಆಚರಣೆ ಮಾಡಲಾಗುತ್ತಿದೆ. ಈ ಮಹೋತ್ಸವದಲ್ಲಿ ಕಾಲೇಜಿನಲ್ಲಿ ಅಭ್ಯಾಸ ಮಾಡಿ ಉನ್ನತ ವ್ಯಾಸಂಗ ಮಾಡಿ ಹುದ್ದೆ ಅಲಂಕರಿಸಿದ ವ್ಯಕ್ತಿಗಳನ್ನು ಗೌರವಿಸಲಾಗುವುದು. ಈ ಕಾಲೇಜಿನಲ್ಲಿ ಕಲಿತ ಶಾಸಕರನ್ನೂ ಸನ್ಮಾನಿಸಲಾಗುವುದು ಎಂದರು. ಅಂದು ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾ ಸ್ವಾಮೀಜಿಗಳು ವಹಿಸುವರು. ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ, ಬೃಹತ್ ನೀರಾವರಿ ಸಚಿವ ಎಂ.ಬಿ. ಪಾಟೀಲ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್, ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ, ಜಿಪಂ ಅಧ್ಯಕ್ಷ ಟಿ. ಜನಾರ್ದನ ಹುಲಗಿ, ಜಿಲ್ಲೆಯ ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಡಿ. 23ರಂದು ವಿಚಾರ ಸಂಕಿರಣ ನಡೆಯಲಿದೆ. ಸುವರ್ಣ ಮಹೋತ್ಸವದಲ್ಲಿ ಹಳೆ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ. ಆನಂದ, ಕಾಲೇಜು ಪ್ರಾಚಾರ್ಯ ಬಸವರಾಜ, ರಾಜೇಂದ್ರ ಹಿರೇಮಠ ಇತರರ ಪಾಲ್ಗೊಂಡಿದ್ದರು.
ಮಟ್ಕಾ: ಓರ್ವನ ಬಂಧನ
ಬಳ್ಳಾರಿ:  ತಾಲೂಕಿನ ಕುಡುತಿನಿಯಲ್ಲಿ ಮಟ್ಕಾ ಜೂಜಾಟದ ಅಡ್ಡೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ, ಓರ್ವ ಆರೋಪಿಯನ್ನು ಬಂಧಿಸಿ, ಆತನಿಂದ ನಗದು ವಶಪಡಿಸಿಕೊಂಡಿದ್ದಾರೆ. ಡಿವೈಎಸ್‌ಪಿ ರುದ್ರಮುನಿ ಮಾರ್ಗದರ್ಶನದಲ್ಲಿ ಠಾಣೆಯ ಪಿಎಸ್‌ಐ ವಾಸುಕುಮಾರ್ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಎರ್ರಿಸ್ವಾಮಿ ಎಂಬವನನ್ನು ಬಂಧಿಸಲಾಗಿದೆ. ಆತನಿಂದ ರು. 8450 ನಗದು, ಒಂದು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಕುಡುತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧಾರ್ಮಿಕ ಕೇಂದ್ರಗಳಿಂದ ಮನುಷ್ಯ ಸಂಸ್ಕಾರವಂತ: ಸಂಗನಬಸವಶ್ರೀ

ಹೊಸಪೇಟೆ: ಮನುಷ್ಯರು ಉತ್ತಮ ರೀತಿ ಜೀವನ ಸಾಗಿಸುವಂತೆ ಮತ್ತು ಉತ್ತಮ ಸಂಸ್ಕಾರವಂತರನ್ನಾಗಿ ರೂಪಿಸುವ ಶಕ್ತಿ ಧಾರ್ಮಿಕ ಕೇಂದ್ರಗಳಿಗಿದೆ ಎಂದು ಕೊಟ್ಟೂರುಸ್ವಾಮಿ ಮಠದ ಸಂಗನಬಸವ ಸ್ವಾಮೀಜಿಗಳು ಹೇಳಿದರು.
ನಗರದ ಕೊಟ್ಟೂರುಸ್ವಾಮಿ ಮಠದಲ್ಲಿ ಆರಂಭವಾದ ಮಹಾ ತಪಸ್ವಿ ಹಾಲಕೆರೆ ಶ್ರೀ ಅನ್ನದಾನೀಶ್ವರ ಮಹಾ ಪುರಾಣ ಪ್ರವಚನದ ಅಂಗವಾಗಿ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ದೇಶದ ಭಕ್ತಿಪಂಥದಲ್ಲಿ ಕಾಣಸಿಗುವ ಮಹಾಯೋಗಿಗಳ, ಸಾಧು-ಸಂತರ ತಪಸ್ಸುಗಳಿಂದ ದೇಶಕ್ಕೆ ತಗಲುವ ಅನೇಕ ವಿಘ್ನಗಳನ್ನು ದೂರ ಮಾಡುವ ಶಕ್ತಿಯಿದೆ. ಮನುಷ್ಯರನ್ನು ಸಂಸ್ಕಾರವಂತರನ್ನಾಗಿಸುವ ಶಕ್ತಿ ಧಾರ್ಮಿಕ ಕೇಂದ್ರಗಳಿಗೆ ಇದೆ. ಇಂತಹ ವಿಚಾರಧಾರೆಗಳನ್ನು ವಿದ್ಯಾರ್ಥಿಗಳು ಜಾಣ್ಮೆಯಿಂದ ತಿಳಿಯುವ ಮೂಲಕ ಓದಿನಲ್ಲಿ ಮುಂದೆ ಬಂದು ಪಾಲಕರು, ಗುರುಗಳಿಗೆ ಮತ್ತು ನಾಡಿಗೆ ಗೌರವ ತರಬೇಕಾಗಿದೆ. ಈ ಹಿನ್ನೆಲೆಯಲ್ಲಿಯೇ ಪುರಾಣ ಪ್ರವಚನ ಹಮ್ಮಿಕೊಳ್ಳಲಾಗಿದೆ ಎಂದರು.
ಗರಗ ನಾಗಲಾಪುರದ ಶ್ರೀಮರಿಮಹಾಂತ ಸ್ವಾಮಿಗಳು, ವಳಬಳ್ಳಾರಿ ಸಿದ್ದಲಿಂಗ ಸ್ವಾಮಿಗಳು, ದರೂರಿನ ಕೊಟ್ಟೂರು ದೇಶಿಕರು, ಪ್ರವಚನಕಾರ ಮಹಾದೇವ ದೇವರು, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಸಾಲಿಸಿದ್ಧಯ್ಯಸ್ವಾಮಿ, ವೀರಶೈವ ಸಮಾಜದ ತಾಲೂಕಾಧ್ಯಕ್ಷ ಕೆ. ಕೊಟ್ರೇಶ್, ಕೆ. ಗಂಗಾಧರಪ್ಪ, ಕಾರ್ಯದರ್ಶಿ ರೇವಣಸಿದ್ದಯ್ಯ, ಶಾಲೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಸಭೆಯಲ್ಲಿ ಭಾಗವಹಿಸಿದ್ದರು. ಡಿ. 30ರ ವರೆಗೆ ಪ್ರತಿದಿನ ಸಂಜೆ ಪುರಾಣ ಪ್ರವಚನ ಕಾರ್ಯಕ್ರಮ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement