ಸುದ್ದಿ ಸಂಕ್ಷೇಪ
ಇಂದು ಚಿಗುರು ಕಾರ್ಯಕ್ರಮ
ಬಳ್ಳಾರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಡಿ. 19ರಂದು ಚಿಗುರು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ್ ತಿಳಿಸಿದ್ದಾರೆ. ಚಿಗುರು ಕಾರ್ಯಕ್ರಮ ಅಂದು ಸಂಜೆ 6-30 ಗಂಟೆಗೆ ಹೊಸಪೇಟೆ ತಾಲೂಕು ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ನಡೆಯಲಿದ್ದು, ಕು. ಎಚ್.ಎಂ. ಚಂದನ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ ಮಾಡಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಾಂಜಾ ದಾಸ್ತಾನು: ಸೆರೆ
ಬಳ್ಳಾರಿ: ಮನೆಯಲ್ಲಿ ದಾಸ್ತಾನು ಮಾಡಿದ್ದ ರು. 1.5 ಲಕ್ಷ ಮೌಲ್ಯದ, 14.1 ಕೆಜಿ ಗಾಂಜಾವನ್ನು ಸಂಡೂರು ಹಾಗೂ ಬಳ್ಳಾರಿಯಲ್ಲಿ ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಬಕಾರಿ ಇಲಾಖೆ ಆಯುಕ್ತ ಅಬೀದ್ ಹುಸೇನ್ ತಿಳಿಸಿದ್ದಾರೆ. ಮಂಗಳವಾರ ಸಂಜೆ ಸಂಡೂರು ತಾಲೂಕಿನ ವೆಂಕಟಗಿರಿ ತಾಂಡಾದ ಸೇವಾಲಾಲ್ ಗುಡಿ ಹತ್ತಿರದ ಸೋಮಲಾನಾಯ್ಕ ಅವರ ಮನೆಯಲ್ಲಿ 9.6 ಕೆಜಿ ಒಣ ಗಾಂಜಾವನ್ನು ಅಬಕಾರಿ ನಿರೀಕ್ಷಕ ಟಿ.ಎಸ್. ನಾಯ್ಕ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಪರಾರಿಯಾಗಿದ್ದಾನೆ. ಇನ್ನು ಬುಧವಾರ ಬಳ್ಳಾರಿ ನಗರದ ರಾಣಿ ತೋಟದ ಮೌಲಾಹುಸೇನ್ ಅವರ ಮನೆಯಲ್ಲಿ 5 ಕೆಜಿ ಒಣ ಗಾಂಜಾವನ್ನು ಅಬಕಾರಿ ನಿರೀಕ್ಷಕ ಆಂಜನೇಯಲು ವಶಪಡಿಸಿಕೊಂಡು ಆರೋಪಿ ಮೌಲಾಹುಸೇನ್ನನ್ನು ಬಂಧಿಸಿದ್ದಾರೆ. ಅಬಕಾರಿ ಉಪ ಅಧೀಕ್ಷಕ ಮೋನಪ್ಪ ನೇತೃತ್ವದಲ್ಲಿ ನಿರೀಕ್ಷಕ ತುಕಾರಾಂ ನಾಯ್ಕ, ಆಂಜನೇಯ, ಆನಂದ, ಚಿಕ್ಕಾರೆಡ್ಡಿ, ಉಪನಿರೀಕ್ಷಕ ಗಿರೀಶ್, ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.
ಬಣಕಾರ ಹಾಲಪ್ಪ ನಿಧನ
ಕೂಡ್ಲಿಗಿ: ತಾಲೂಕಿನ ಕಂದಗಲ್ಲು ಗ್ರಾಮದ ಗ್ರಾಪಂ ಮಾಜಿ ಉಪಾಧ್ಯಕ್ಷ ಬಣಕಾರ ಹಾಲಪ್ಪ (97) ಬುಧವಾರ ಬೆಳಗ್ಗೆ 9.15ಕ್ಕೆ ನಿಧನರಾಗಿದ್ದಾರೆ. ಮೃತರಿಗೆ ಇಬ್ಬರು ಪುತ್ರರು, 7 ಪುತ್ರಿಯರು ಹಾಗೂ ಮೊಮ್ಮಕ್ಕಳು, ಅಪಾರ ಬಂಧುಗಳು ಇದ್ದಾರೆ. 1967ರಲ್ಲಿ ತಾಲೂಕಿನಲ್ಲಿ ರೈತ ಹೋರಾಟಗಾರರಾಗಿ ಗುರುತಿಸಿಕೊಂಡ ಹಾಲಪ್ಪ, ವಿದ್ಯುತ್, ನೀರು ಸರಬರಾಜಿಗಾಗಿ ನಿರಂತರ ಹೋರಾಟ ಮಾಡಿದ್ದರು. ಈ ಹಿಂದೆ ಬರಗಾಲ ಬಂದಿದ್ದಾಗ ನೂರಾರು ಬಡ ಕುಟುಂಬಗಳಿಗೆ ಆಶ್ರಯದಾತರಾಗಿದ್ದರು. ಇವರ ನಿಧನದ ಸುದ್ದಿ ಕೇಳಿ ಬಂಧುಗಳು, ಕಂದಗಲ್ಲು, ಸುತ್ತಲಿನ ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಅಂತ್ಯಕ್ರಿಯೆ ಕಂದಗಲ್ಲು ಗ್ರಾಮದಲ್ಲಿ ಗುರುವಾರ ಬೆಳಗ್ಗೆ 10ಕ್ಕೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಇಂದು ಸಾಂಸ್ಕೃತಿಕ ಕಾರ್ಯಕ್ರಮ
ಹೊಸಪೇಟೆ: ಹಂಪಿ ಫಲಪೂಜಾ ಕಾರ್ಯಕ್ರಮದ ಪ್ರಯುಕ್ತ ಕಡ್ಡಿರಾಂಪುರದ ಮರಿದೇವ ಸಂಗೀತ ಸಾಂಸ್ಕೃತಿಕ ಕಲಾವೃಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಭಕ್ತಿ ಭಾವನಾ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮ ಹಂಪಿ ವಿರೂಪಾಕ್ಷೇಶ್ವರಸ್ವಾಮಿಯ ದೇವಸ್ಥಾನದ ಆವರಣದಲ್ಲಿ ಡಿ. 19ರಂದು ಸಂಜೆ ನಡೆಯಲಿದೆ. ಸಹಾಯಕ ಆಯುಕ್ತ ಪಿ. ಸುನೀಲ್ಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು. ವಿದ್ಯಾರಣ್ಯ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯಸ್ವಾಮಿ, ಡಿವೈಎಸ್ಪಿ ರಶ್ಮಿ ಬಿ. ಪರಡ್ಡಿ, ಜೆಎಸ್ಡಬ್ಲ್ಯೂ ಉಪಾಧ್ಯಕ್ಷ ಅನಿಲ್ಕುಮಾರ್ ಸಿಂಗ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್, ಎಸ್.ಎಚ್. ಶಿವರುದ್ರಪ್ಪ, ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಎಸ್ಪಿಬಿ ಮಹೇಶ್, ಜೆಎಸ್ಡಬ್ಲ್ಯೂ ಎಜಿಎಂ ಶಶಿಕುಮಾರ್, ಪ್ರಸನ್ನ, ಆನಂದ ಬಂಕನಾಳ್, ಜಿಪಂ ಸದಸ್ಯ ಅನಿತಾ ಆನಂದ್, ಜಿಪಂ ಮಾಜಿ ಸದಸ್ಯ ಕೆ.ಎಂ. ಹಾಲಪ್ಪ, ವಿರೂಪಾಕ್ಷೇಶ್ವರಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್. ಪ್ರಕಾಶ್ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಾರ್ಯಕ್ರಮದಲ್ಲಿ ಮೋಹನ್ ಚಿಕ್ಕಭಟ್ ಅವರಿಂದ ಚಿಂತನ ಕಾರ್ಯಕ್ರಮ, ಶರಣಬಸವ ವಠಾರ, ಯಲ್ಲಪ್ಪ ಭಂಡಾರದಾರ್, ಅಕ್ಷತಾ, ಭಾರತಿ ಕುಲಕುರ್ಣಿ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ, ಕೇಶವರಿಂದ ಕೊಳಲು ವಾದನ, ಮೂರ್ತಾಚಾರ್ಯ ಹಾರ್ಮೋನಿಯಂ, ಶ್ರೀಧರ ಮತ್ತು ಯೋಗೀಶರಿಂದ ತಬಲ ವಾದನ, ದಾಸರ ಯಲ್ಲಪ್ಪನಿಂದ ತತ್ವ ಪದಗಳ ಗಾಯನ, ಸ್ವರ್ಣಮುಖಿ ಭರತ್ಯನಾಟ್ಯ ಕಲಾಸಂಸ್ಥೆಯಿಂದ ಭರತ ನಾಟ್ಯ, ಕಡ್ಡಿರಾಂಪುರದ ಮರಿದೇವ ಸಂಗೀತ ಸಾಂಸ್ಕೃತಿಕ ಕಲಾವೃಂದದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಇಂದು ಶ್ರೀ ವಿರೂಪಾಕ್ಷೇಶ್ವರ ಫಲಪೂಜಾ ಮಹೋತ್ಸವ
ಬಳ್ಳಾರಿ: ಹೊಸಪೇಟೆ ತಾಲೂಕು ಹಂಪಿ ಕ್ಷೇತ್ರದ ಶ್ರೀ ಪಂಪ ವಿರೂಪಾಕ್ಷೇಶ್ವರ ಸ್ವಾಮಿಯ ಫಲಪೂಜಾ ಮಹೋತ್ಸವ ಡಿ. 19ರಂದು ರಾತ್ರಿ 10 ಗಂಟೆಗೆ ವಿಜೃಂಭಣೆಯಿಂದ ಜರುಗುವುದು ಎಂದು ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಎಸ್ಪಿಬಿ ಮಹೇಶ ತಿಳಿಸಿದ್ದಾರೆ. ಶ್ರೀ ಸ್ವಾಮಿಯ ಫಲಪೂಜಾ ಮಹೋತ್ಸವದ ಅಂಗವಾಗಿ ಶ್ರೀ ಚಕ್ರತೀರ್ಥ ಕೋದಂಡರಾಮಸ್ವಾಮಿಯ ಸನ್ನಿಧಿಯಲ್ಲಿ ಡಿ. 19ರಂದು ಫಲಪೂಜಾ ನಂತರ ಶ್ರೀ ಜಗದ್ಗುರುಗಳು ಆಶೀರ್ವಚನ ನೀಡಲಿದ್ದಾರೆ. ಡಿ. 30ರಂದು ಸಮಸ್ತ ಭಕ್ತರಿಗೂ ಮಧ್ಯಾಹ್ನ ಅನ್ನ ಸಂತರ್ಪಣೆ ಮಾಡಲಾಗುವುದು. ಪ್ರತಿ ಅಮಾವಾಸ್ಯೆ ದಿನವೂ ಅನ್ನ ಸಂತರ್ಪಣೆ ಮಾಡಲಾಗುತ್ತಿದೆ. ದವಸ-ಧಾನ್ಯ ಕೊಡುವವರು ಶ್ರೀ ವಿದ್ಯಾರಣ್ಯ ಮಠದಲ್ಲಿ ಕೊಡಬಹುದು. ಭಕ್ತರು ಆಗಮಿಸಿ ಸ್ವಾಮಿಯ ಸಂಪೂಣಾನುಗ್ರಹಕ್ಕೆ ಪಾತ್ರರಾಗಬೇಕೆಂದು ಅವರು ಮನವಿ ಮಾಡಿದ್ದಾರೆ.