ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಹಂಪಿ ಉತ್ಸವಕ್ಕೆ ರಾಜ್ಯ ಸರ್ಕಾರ ನಿರುತ್ಸಾಹ

Mainashree
Updated On : 19 Dec 2013, 10:54 am

ಬಳ್ಳಾರಿ: ಎರಡು ವರ್ಷದಿಂದ ಸ್ಥಗಿತಗೊಂಡಿದ್ದ ಹಂಪಿ ಉತ್ಸವದ ಬಗ್ಗೆ ಹಲವು ನಿರೀಕ್ಷೆಗಳಿದ್ದರೂ, ಉತ್ಸವದ ಬಗ್ಗೆ ಸರ್ಕಾರದ ನಿರುತ್ಸಾಹ ಎದ್ದು ಕಾಣುತ್ತಿದೆ. ಹಂಪಿ ಉತ್ಸವಕ್ಕೆ ನಿರೀಕ್ಷೆಯಷ್ಟು ಸರ್ಕಾರ ಅನುದಾನ ಬಿಡುಗಡೆ ಮಾಡದಿರುವುದು ಇದಕ್ಕೆ ಕಾರಣ. ಅನುದಾನಕ್ಕಾಗಿ ಇದೀಗ ಜಿಲ್ಲಾಡಳಿತ ಸರ್ಕಸ್ ಮಾಡಬೇಕಾಗಿದೆ.
ಜನವರಿ 10ರಿಂದ ಮೂರು ದಿನಗಳ ಕಾಲ ರು. 6 ಕೋಟಿ ವೆಚ್ಚದಲ್ಲಿ ಉತ್ಸವ ಆಚರಿಸಲು ಯೋಜನೆ ಇದೆ. ಆದರೆ ಸರ್ಕಾರ ಕೇವಲ ರು. 2.75 ಕೋಟಿ ಮಾತ್ರ ನೀಡಿದ್ದು, ಇನ್ನುಳಿದ ಅನುದಾನದ ಸಂಗ್ರಹ ಹೇಗೆ ಎಂಬ ಚಿಂತೆ ಕಾಡುತ್ತಿದೆ. ಎಲ್ಲೊ ಒಂದು ಕಡೆ ಹಂಪಿ ಉತ್ಸವದ ಬಗ್ಗೆ ಸರ್ಕಾರದ ನಿರುತ್ಸಾಹ ಎದ್ದು ಕಾಣುತ್ತಿದೆ.
ಅನುದಾನ ತರುವಲ್ಲಿ ವಿಫಲವೇ?: 2009-10ರಲ್ಲಿ ನಡೆದ ಹಂಪಿ ಉತ್ಸವ ಅರ್ಥಾತ್ ವಿಜಯನಗರ ಶ್ರೀಕೃಷ್ಣದೇವರಾಯರ 500ನೇ ವರ್ಷದ ಪಟ್ಟಾಭಿಷೇಕಕ್ಕೆ ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ 30 ಕೋಟಿ ಬಿಡುಗಡೆ ಮಾಡಿತ್ತು. ಅಂದು ಕೇವಲ ಒಂದು ಮುಖ್ಯ ವೇದಿಕೆ ನಿರ್ಮಾಣ ಮಾಡಲು ರು. 4.75 ಕೋಟಿ ವ್ಯಯಿಸಲಾಗಿತ್ತು. ಒಂದು ವೇದಿಕೆಗೆ ನೀಡಿದ ಅನುದಾನವನ್ನು ಇಂದು ಉತ್ಸವಕ್ಕೆ ನೀಡಲು ಸರ್ಕಾರ ಮುಂದಾಗುತ್ತಿಲ್ಲ ಎಂಬ ಕೊರಗು ಈ ಭಾಗದ ಜನರಿಗಿದೆ. ಅನುದಾನ ತರುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬಳ್ಳಾರಿ ಜಿಲ್ಲೆ ಶಾಸಕರು ವಿಫಲರಾಗಿದ್ದಾರೆಯೇ ಅಥವಾ ನಿರುತ್ಸಾಹ ತೋರಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ.
ಉತ್ಸವದ ಬಗ್ಗೆ ನಿರ್ಲಕ್ಷ್ಯವೇ?: ಅನುದಾನದ ಬಗ್ಗೆ ಕೇಳಿದರೆ ಬರ ಇರುವುದರಿಂದ ಉತ್ಸವವನ್ನು ಸರಳವಾಗಿ ಆಚರಿಸಲಾಗುವುದು ಎನ್ನುವ ಸರ್ಕಾರ ಇತ್ತೀಚೆಗೆ ನಡೆದ ತಲಕಾಡು ಪಂಚಲಿಂಗ ದರ್ಶನಕ್ಕೆ ರು. 13 ಕೋಟಿ ಖರ್ಚು ಮಾಡಿದೆ. ಆದರೆ ಇದೇ ಸರ್ಕಾರಕ್ಕೆ ಇದೀಗ ವಿಶ್ವ ವಿಖ್ಯಾತ ಹಂಪಿ ಉತ್ಸವದ ಅನುದಾನಕ್ಕೆ ಬರ ಎದುರಾಗುತ್ತದೆಯೇ? ಅಲ್ಲದೆ 2008-09ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರು. 3 ಕೋಟಿ ಬಿಡುಗಡೆ ಮಾಡಿತ್ತು, 2010-11ರಲ್ಲಿ ಇದೇ ಇಲಾಖೆ ರು. 8 ಕೋಟಿ, ಪ್ರವಾಸೋದ್ಯಮ ಇಲಾಖೆ ರು. 1 ಕೋಟಿ ಹಾಗೂ ವಾರ್ತಾ ಇಲಾಖೆಯಿಂದ ರು. 1 ಕೋಟಿ ಸೇರಿ ರು. 10 ಕೋಟಿ ಬಿಡುಗಡೆಯಾಗಿತ್ತು. ಆದರೆ ಈ ವರ್ಷ ಕೇವಲ ರು. 2.75 ಕೋಟಿ ನೀಡಿರುವುದು ಎಷ್ಟು ಸರಿ? ಇದು ಹಂಪಿ ಉತ್ಸವದ ಬಗ್ಗೆ ಸರ್ಕಾರದ ನಿರಾಸಕ್ತಿ ಅಲ್ಲದೆ ಮತ್ತೇನು?
ಘೋಷಿಸಿದ ಹಣ ಬಿಡುಗಡೆಯಾಗಿಲ್ಲ: ಬರದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಹಂಪಿ ಉತ್ಸವ ಆಚರಣೆ ಮಾಡಿರಲಿಲ್ಲ. ಆದರೆ ಈ ಬಾರಿ ಉತ್ಸವ ನಡೆಸಲಾಗುತ್ತಿದೆ. ಇಂತಹ ಉತ್ಸವಕ್ಕೆ ಸರ್ಕಾರಕ್ಕೆ ಆಸಕ್ತಿ ತೋರಬೇಕಿತ್ತು. ಆದರೆ ಅದು ಇಂದಿಗೂ ಕಾಣುತ್ತಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರು. 1.75 ಕೋಟಿ ನೀಡಿದೆ. ಪ್ರವಾಸೋದ್ಯಮ ಇಲಾಖೆ ರು. 1 ಕೋಟಿ ಅನುದಾನ ಘೋಷಣೆ ಮಾಡಿದ್ದು, ಇನ್ನು ಬಿಡುಗಡೆ ಮಾಡಿಲ್ಲ. ರು. 6 ಕೋಟಿ ವೆಚ್ಚದಲ್ಲಿ ಉತ್ಸವ ಆಚರಣೆ ಯೋಜನೆ ಇದ್ದು, ಇನ್ನುಳಿದ ರು. 3.25 ಕೋಟಿಗೆ ಜಿಲ್ಲಾಡಳಿತಕ್ಕೆ ಸ್ಥಳೀಯ ಸಂಪನ್ಮೂಲಗಳ ಮೊರೆ ಹೋಗುವ ಅನಿವಾರ್ಯತೆ ಎದುರಾಗಿದೆ. ಅಷ್ಟು ಹಣ ಸಂಗ್ರಹವಾಗುವುದು ಕಷ್ಟದ ಮಾತು.
ಗೋಲ್ಡ್ ಕಾರ್ಡ್: ಈ ಹಿಂದೆ ಗಣಿಗಾರಿಕೆಯಿಂದ ಹಣದ ಲೇವಾದೇವಿ ಹೆಚ್ಚಾಗಿತ್ತು. ಆದರೆ ಇದೀಗ ಹಣದ ವಹಿವಾಟು ಕಡಿಮೆಯಾಗಿದ್ದರಿಂದ ದೇಣಿಗೆ ಸಂಗ್ರಹಿಸುವುದು ಹೇಗೆ ಎಂಬ ಚಿಂತೆ ಜಿಲ್ಲಾಡಳಿತಕ್ಕಿದೆ.  ಹೀಗಾಗಿ ಉತ್ಸವಕ್ಕೆ ಮೈಸೂರು ಮಾದರಿಯಲ್ಲೇ ಗೋಲ್ಡ್, ಪ್ಲಾಟಿನಂ ಕಾರ್ಡ್ ವ್ಯವಸ್ಥೆ ಮಾಡಿ, ಅದರಿಂದ ಹಣ ಸಂಗ್ರಹಿಸುವ ಚಿಂತನೆ ಮಾಡಿದೆ. ಸಾವಿರಕ್ಕೂ ಹೆಚ್ಚು ಕಲಾವಿದರ ಅರ್ಜಿ ಬಂದ ಹಿನ್ನೆಲೆಯಲ್ಲಿ ಯಾರಿಗೆ ಅವಕಾಶ ಕೊಡಬೇಕು, ಅವರಿಗೆ ಸಂಭಾವನೆ ಹೇಗೆಂಬ ಚಿಂತೆ ಅಧಿಕಾರಿಗಳಲ್ಲಿದೆ.
ಹಂಪಿ ಉತ್ಸವದಲ್ಲಿ ಹೊಸ ಪ್ರಯತ್ನ: ಈ ಬಾರಿ ಕೆಲ ಹೊಸ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಈ ಭಾಗದ ಛಾಯಾಗ್ರಾಹಕರನ್ನು ಪ್ರೋತ್ಸಾಹಿಸಲು ಹಂಪಿ ಬೈ ಲೆನ್ಸ್ ಎಂಬ ಸ್ಪರ್ಧೆ ಹಾಗೂ ಪ್ರದರ್ಶನ, ಹಂಪಿ, ಬಳ್ಳಾರಿ ಕೋಟೆ, ತುಂಗಭದ್ರಾ ಜಲಾಶಯ, ಸಂಡೂರಿನ ಗಣಿಗಾರಿಕೆ ಪ್ರದೇಶವನ್ನು ಅರ್ಧ ಗಂಟೆ ಕಾಲ ಹೆಲಿಕಾಪ್ಟರ್‌ನಲ್ಲಿ ವೀಕ್ಷಣೆ  ವ್ಯವಸ್ಥೆ (ಹಂಪಿ ಬೈ ಏರ್) ಮಾಡುವ ಮೂಲಕ ಉತ್ಸವಕ್ಕೆ ಹಣ ಸಂಗ್ರಹಿಸಲು ಮುಂದಾಗಿದೆ. ಹಂಪಿ ಬೈ ಫುಡ್ ಮೂಲಕ ಮಹಿಳೆಯರಿಗೆ ಅಡುಗೆ ಸ್ಪರ್ಧೆಗೆ ವೇದಿಕೆ ಕಲ್ಪಿಸಿಕೊಡಲಾಗಿದೆ. ಕಿಚನ್ ಕ್ವೀನ್ ಎಂಬ ಸ್ಪರ್ಧೆಯೂ ನಡೆಯಲಿದೆ.
ಅಂತಾರಾಷ್ಟ್ರೀಯ ಕಲಾವಿದರ ನಿರೀಕ್ಷೆ: ಡಿ. 20ರಂದು ಪ್ರವಾಸೋದ್ಯಮ ಸಚಿವ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ನೇತೃತ್ವದಲ್ಲಿ ಹಂಪಿ ಉತ್ಸವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಉತ್ಸವದಲ್ಲಿ ಪಾಲ್ಗೊಳ್ಳುವ ಅಂತಾರಾಷ್ಟ್ರೀಯ ಕಲಾವಿದರ ಬಗ್ಗೆ ನಿರ್ಧಾರವಾಗಲಿದೆ. ಈ ಸಭೆಯಲ್ಲಾದರೂ ಹೆಚ್ಚಿನ ಅನುದಾನ ಬಿಡುಗಡೆಗೆ ಮುಂದಾಗುವರೆ ಕಾದು ನೋಡಬೇಕು.
ಕನ್ನಡಪ್ರಭಕ್ಕೆ ಬಂದ ಮಾಹಿತಿ ಪ್ರಕಾರ ಅಂತಾರಾಷ್ಟ್ರೀಯ ಮಟ್ಟದ 22 ವರ್ಷದ ತಬಲಾ ವಾದಕಿ ರಿಂಪಾ ಶಿವ, ಗಾಯಕ ತಲಕ್ ಅಜೀಜ್, ಹಾಡುಗಾರರಾದ ಸುನಿಧಿ ಚೌವ್ಹಾಣ್, ಶಾನ್, ಕುನಾಲ್ ಗಾಂಜಾವಾಲಾ, ರಾಜ್ಯದ ಎಂ.ಡಿ. ಪಲ್ಲವಿ, ಅರ್ಚನಾ ಉಡುಪ, ಪ್ರವೀಣ ಗೋಡ್ಖಿಂಡಿ ಸೇರಿದಂತೆ ಇತರರು ಆಗಮಿಸುವರು ಎಂದು ಹೇಳಲಾಗುತ್ತಿದೆ.

 ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement