ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕಚೇರಿಯಲ್ಲಿ ಕುಳಿತು ಕಾಲಹರಣ ಮಾಡದಿರಿ: ಸೂಚನೆ

Mainashree
Updated On : 20 Dec 2013, 10:46 am

ಹೊಸಪೇಟೆ: ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಕೇವಲ ಕಚೇರಿಯಲ್ಲಿ ಕುಳಿತು ಕಾಲಹರಣ ಮಾಡುವುದು ಸರಿಯಲ್ಲ. ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಮುಂದಾಗಬೇಕು ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೋರಿ ಫಕ್ಕೀರಪ್ಪ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ 14ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ತಾಪಂ ಸಾಮಾನ್ಯ ಸಭೆಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ಸಮರ್ಪಕ ಮಾಹಿತಿಯೊಂದಿಗೆ ಸಭೆಗೆ ಆಗಮಿಸಬೇಕು. ಆದರೆ ಬಹುತೇಕ ಅಧಿಕಾರಿಗಳು ಗೈರು ಹಾಜರಾಗುವ ಮೂಲಕ ತಾಪಂ ಸಾಮಾನ್ಯ ಸಭೆಗೆ ಅಗೌರವ ತೋರಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುತ್ತದೆ. ಹಿಂದಿನ ಸಭೆಯಲ್ಲಿ ಸೂಚಿಸಿದ ವಿಷಯಗಳ ಬಗ್ಗೆ ಕ್ರಮ ತೆಗೆದುಕೊಳ್ಳದೆ ಮತ್ತೆ ಸಭೆಗೆ ಬಂದಾಗಲೆ ಕಳೆದ ಸಭೆಯಲ್ಲಿ ಮಂಡಿಸಿದ ವಿಷಯಗಳ ಬಗ್ಗೆ ಚಿಂತಿಸಲಾಗುತ್ತದೆ. ತಾಪಂ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಅಧಿಕಾರಿಗಳು ಗಾಳಿಗೆ ತೂರುತ್ತಿರುವುದು ಸರಿಯಲ್ಲ. ತಾಪಂ ಸಭೆಯಲ್ಲಿ ಚರ್ಚಿಸಿದ ವಿಷಯಗಳ ಬಗ್ಗೆ ಅಧಿಕಾರಿಗಳು ಸೂಕ್ತಕ್ರಮ ಕೈಗೊಂಡು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ತಾಪಂ ಸದಸ್ಯ ಸಿ.ಡಿ. ಮಹಾದೇವ್ ಮಾತನಾಡಿ, ಅಧಿಕಾರಿಗಳು ಜನಪ್ರತಿನಿಧಿಗಳು ಕೇಳುವ ಮಾಹಿತಿಗೆ ಬೇಜವಾಬ್ದಾರಿಯಿಂದ ಉತ್ತರಿಸುತ್ತಾರೆ. ಮಾಹಿತಿಯನ್ನು ಸಮರ್ಪಕವಾಗಿ ನೀಡದೆ ಜಾರಿಕೊಳ್ಳುತ್ತಿದ್ದಾರೆ. ಸಮರ್ಪಕ ಕೆಲಸ ಮಾಡದಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ತಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ಅಧಿಕಾರಿಗಳಿಂದ ಸರಿಯಾಗಿ ಕೆಲಸ ತೆಗೆದುಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಇಲ್ಲ: ಮತ್ತೋರ್ವ ಸದಸ್ಯ ಯು. ಸೋಮಪ್ಪ ಮಾತನಾಡಿ, ಮರಿಯಮ್ಮನಹಳ್ಳಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ನಿಂತುಕೊಳ್ಳಲು ಆಗುತ್ತಿಲ್ಲ. ಅಷ್ಟೊಂದು ದುರ್ವಾಸನೆ ಬಸ್ ನಿಲ್ದಾಣದ ಶೌಚಾಲಯದಿಂದ ಬೀರುತ್ತಿದೆ. ಶೌಚಾಲಯವನ್ನು ಸ್ವಚ್ಛ ಮಾಡದೆ ಮತ್ತು ಸರಿಯಾದ ನಿವಹಣೆ ಇಲ್ಲದೆ ಶೌಚಾಲಯ ಬೀರುವ ವಾಸನೆ ಹರಡಿಕೊಳ್ಳುತ್ತಿದೆ. ಪ್ರಯಾಣಿಕರು ಮೂಗು ಮುಚ್ಚಿಕೊಂಡೆ ಸಂಚರಿಸಬೇಕಾಗಿದೆ. ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಬೇಕು. ಮರಿಯಮ್ಮನಹಳ್ಳಿ ಬಸ್ ನಿಲ್ದಾಣ ಎನ್ನುವುದಕ್ಕಿಂತ ಅದೊಂದು ದನಗಳ ದೊಡ್ಡಿ ಎಂದರೂ ಆಶ್ಚರ್ಯವಿಲ್ಲ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸದಸ್ಯ ರಹಿಮತ್ ಗೌಡ ಮಾತನಾಡಿ, ಜಿಪಂನವರು ಗ್ರಾಮಗಳಲ್ಲಿ ಹಾಕುವ ಬೋರ್‌ವೆಲ್‌ಗಳನ್ನು ನೆಪಕ್ಕೆ ಮಾತ್ರ ಹಾಕಿ ಬರುತ್ತಾರೆ. ಬೋರ್ ಹಾಕುವಲ್ಲಿ ನೀರು ಇದೆಯೋ ಇಲ್ಲವೋ ಎನ್ನುವುದನ್ನು ಖಾತ್ರಿ ಮಾಡಿಕೊಳ್ಳುವುದಿಲ್ಲ. ಊರಿನಲ್ಲಿ ಒಂದು ಬೋರ್ ಹಾಕಬೇಕು ಎಂದು ಹಾಕಿ ಬರುತ್ತಾರೆ. ಗ್ರಾಮೀಣ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ನೀಡುತ್ತಿಲ್ಲ ಎಂದು ದೂರಿದರು.
ತಾಪಂ ಅಧ್ಯಕ್ಷ ತಾರಿಹಳ್ಳಿ ಹಾಲಮ್ಮ, ಉಪಾಧ್ಯಕ್ಷೆ ದ್ರಾಕ್ಷಾಯಿಣಿ, ಇಒ ರಮೇಶ್ ತಳವಾರ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ಹಾಗೂ ಸದಸ್ಯರು ಸಭೆಯಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement