ಹಲ್ಲೆ: ಸಂಸದ ಪುತ್ರ ಸೇರಿ 6 ಜನರ ಸೆರೆ
ಬಳ್ಳಾರಿ: ವಾರ್ಡ್ಲಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶ್ರೀಲಕ್ಷ್ಮೀ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ಸಂಸದ ಸಣ್ಣ ಫಕ್ಕೀರಪ್ಪ ಅವರ ಪುತ್ರ ಮುತ್ತು ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ.
ಸಣ್ಣಫಕ್ಕೀರಪ್ಪ ಕುಟುಂಬದ ಹೆಣ್ಣು ಮಕ್ಕಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಇನ್ನುಳಿದ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಶ್ರೀಲಕ್ಷ್ಮೀ ಮೇಲಿನ ಹಲ್ಲೆ ಖಂಡಿಸಿ ಎಬಿವಿಪಿ ಪ್ರತಿಭಟಿಸಿ, ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲು ಕೌಲ್ಬಜಾರ್ ಠಾಣೆ ಪಿಎಸ್ಐ ಮಹಮದ್ ಗೌಸ್ ಹಾಗೂ ಎಪಿಎಂಸಿ ಪಿಎಸ್ಐ ನಿರಂಜನ್ ನೇತೃತ್ವದಲ್ಲಿ ಎರಡು ತಂಡಗಳನ್ನು ರಚನೆ ಮಾಡಲಾಗಿತ್ತು. ಬುಧವಾರ ರಾತ್ರಿ ರಾಯಚೂರು ಸಂಸದ ಸಣ್ಣಫಕ್ಕೀರಪ್ಪ ಪುತ್ರ ಮುತ್ತು ಹಾಗೂ ಭವಾನಿ, ಕಿರಣ, ಬಿ. ಶೇಖರ್, ಸುಂದರ್, ಮುಕ್ಕಣ್ಣ ಸೇರಿದಂತೆ ಆರು ಜನರನ್ನು ಬಂಧಿಸಿದ ಪೊಲೀಸರು, ಘಟನೆಯಲ್ಲಿ ಆರೋಪಿಯಾಗಿರುವ ಸಣ್ಣಫಕ್ಕೀರಪ್ಪ ಅವರ ಪುತ್ರಿಯರಾದ ಉಮಾ, ಪದ್ಮಾವತಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 13 ಜನರ ವಿರುದ್ಧ ಕೌಲ್ಬಜಾರ್ನಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚೇತನ್ಸಿಂಗ್ ರಾಥೋಡ್ ಅವರು ಮಾತನಾಡಿ, ಈಗಾಗಲೇ 6 ಜನರನ್ನು ಬಂಧಿಸಲಾಗಿದೆ, ಇನ್ನುಳಿದ ಆರೋಪಿಗಳಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಇನ್ನು ಪ್ರಕರಣ ಆರೋಪಿಗಳಾದ ಹೆಣ್ಣು ಮಕ್ಕಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ. ನಿಗದಿತ ದಿನಾಂಕದಂದು ವಿಚಾರಣೆಗೆ ಹಾಜರಾಗದಿದ್ದರೆ, ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದರು.
ಸುದ್ದಿ ವಾಹಿನಿಗಳು ಬಂದ್: ಗುರುವಾರ ಬೆಳಗ್ಗೆಯಿಂದ ಕೆಲ ಸುದ್ದಿ ವಾಹಿನಿಗಳು ಸಿಟಿ ಕೇಬಲ್ನಲ್ಲಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರಿಗೆ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಈ ಕುರಿತು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವಂತೆ ಬಳ್ಳಾರಿ ಉಪ ವಿಭಾಗಾಧಿಕರಿಗೆ ಸೂಚನೆ ನೀಡಿದ್ದರು. ಜಿಲ್ಲಾಧಿಕಾರಿ ಆದೇಶದಂತೆ ಉಪ ವಿಭಾಗಾಧಿಕಾರಿ ಅನಿರುದ್ಧ ಶ್ರವಣ್ ಅವರು ಪರಿಶೀಲನೆ ನಡೆಸಿ, ಕೇಬಲ್ ರೆಗ್ಯುಲೇಷನ್ ಆಕ್ಟ್ ಅಡಿಯಲ್ಲಿ ಸಿಟಿ ಕೇಬಲ್ ಉಪಕರಣಗಳನ್ನು ಸೀಜ್ ಮಾಡಿದ್ದಾರೆ ಎಂದು ಅಧಿಕಾರಿಗಳ ಮೂಲಗಳು ತಿಳಿಸಿವೆ.
ಈ ಕುರಿತು ಬಳ್ಳಾರಿ ಉಪ ವಿಭಾಗಾಧಿಕಾರಿ ಅನಿರುದ್ಧ ಶ್ರವಣ್ ಮಾತನಾಡಿ, ಕೇಬಲ್ ಟಿವಿ ನೆಟ್ವರ್ಕ್ ಆಕ್ಟ್ನಡಿ ಚಾನೆಲ್ಗಳನ್ನು ಪ್ರಸಾರ ಮಾಡುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಹೋಗಿ ಪರಿಶೀಲನೆ ನಡೆಸಿ, ದೂರದರ್ಶನ ಚಾನೆಲ್, ಖಾಸಗಿ ಚಾನೆಲ್ಗಳನ್ನು ಪ್ರಸಾರ ಮಾಡದಿರುವ ಹಿನ್ನೆಲೆಯಲ್ಲಿ ಸಿಟಿ ಕೇಬಲ್ ಟ್ರಾನ್ಸ್ಮೀಟರ್ ಸೀಜ್ ಮಾಡಲಾಗಿದೆ. ಈ ಕುರಿತು ಡೆನ್ ಬಳ್ಳಾರಿ ಸಿಟಿ ಕೇಬಲ್ ಪ್ರೈವೇಟ್ ಅವರಿಗೆ ನೋಟಿಸ್ ನೀಡಿದ್ದು, 10 ದಿನದೊಳಗೆ ಉತ್ತರ ನೀಡಬೇಕಾಗುತ್ತದೆ ಎಂದರು.