ಕಾಲೇಜು ಉನ್ನತ ದರ್ಜೆಗೇರಿಸಿ
ಕೂಡ್ಲಿಗಿ: ಪಟ್ಟಣದಲ್ಲಿರುವ ಸರ್ಕಾರಿ ಐಟಿಐ ಕಾಲೇಜನ್ನು ಉನ್ನತ ದರ್ಜೆಗೇರಿಸುವುದು ಮತ್ತು ಎಪಿಎಂಸಿ ಮಾರುಕಟ್ಟೆ ಪ್ರಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಕಾಂಗ್ರೆಸ್ ಕಾರ್ಯಕರ್ತರು, ಪಟ್ಟಣ ಪಂಚಾಯ್ತಿ ಸದಸ್ಯರು ಮತ್ತು ಸಂಘ-ಸಂಸ್ಥೆಗಳ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರಿಗೆ ಮನವಿ ಸಲ್ಲಿಸಿದರು. ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಇತ್ತೀಚೆಗೆ ಕೂಡ್ಲಿಗಿ ಕೆಡಿಪಿ ಸಭೆಗೆ ಆಗಮಿಸಿದಾಗ ಸಭೆ ಮುಗಿದ ನಂತರ ಮನವಿ ಸಲ್ಲಿಸಲಾಯಿತು. 1997ರಲ್ಲಿ ಪ್ರಾರಂಭಗೊಂಡ ಇಲ್ಲಿನ ಸರ್ಕಾರಿ ಐಟಿಐ ಕಾಲೇಜು ಕೇವಲ ಎರಡೇ ಟ್ರೇಡ್‌ಗಳನ್ನು ಹೊಂದಿವೆ. ಇದರಿಂದ ಈ ಭಾಗದ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣಕ್ಕೆ ಅವಕಾಶ ಇಲ್ಲದಂತಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಸೂಕ್ತ ಕಟ್ಟಡ ಹೊಂದಿದ್ದರೂ ಹೆಚ್ಚಿನ ಟ್ರೇಡ್‌ಗಳು ಇಲ್ಲ. ವೃತ್ತಿಪರ ಕೋರ್ಸ್‌ಗಳ ಅವಶ್ಯಕತೆಯಿದೆ. ಅಲ್ಲದೆ, ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ನುರಿತ ಸಿಬ್ಬಂದಿ ನೇಮಿಸುವಂತೆ ಒತ್ತಾಯಿಸಲಾಯಿತು. ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಮನವಿ ಆಲಿಸಿ ಸ್ಥಳದಲ್ಲಿಯೇ ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ, ಕೂಡ್ಲಿಗಿ ಪಟ್ಟಣದ ಐಟಿಐ ಕಾಲೇಜಿಗೆ ಹೆಚ್ಚಿನ ಟ್ರೇಡ್‌ಗಳನ್ನು ಮುಂಜೂರು ಮಾಡಿ ಕಾರ್ಯನಿರ್ವಹಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು. ಈ ಸಂದರ್ಭ ಪಪಂ ಸದಸ್ಯರಾದ ಎನ್.ಎಂ. ನೂರ್ ಅಹ್ಮದ್, ಟಿ. ವೆಂಕಟೇಶ್, ಎಚ್.ಎಂ.ಡಿ. ಉಸ್ಮಾನ್, ಎಂ. ನಾಗರಾಜ, ಎಚ್. ಕೊತ್ಲಪ್ಪ, ಕೆ. ರವಿಕುಮಾರ್, ರಾಘವೇಂದ್ರ ಮಲ್ಲಾಪುರ ಮುಂತಾದವರು ಉಪಸ್ಥಿತರಿದ್ದರು.