ಕೊಟ್ಟೂರು-ಹರಿಹರ ರೈಲು ಓಡಾಟ ಸನ್ನಿಹಿತ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಡಿ. 20
ಸದಾ ಅನಿಶ್ಚಿತತೆಯ ಭೀತಿ ಎದುರಿಸುತ್ತಿದ್ದ ಕೊಟ್ಟೂರು- ಹರಿಹರ ರೈಲು ಓಡಾಟದ ಆರಂಭಕ್ಕೆ ದಿನಾಂಕ ನಿಗದಿಗೊಳ್ಳುವ ಕಾಲ ಸನ್ನಿಹಿತವಾಗಿದೆ. ಈ ಮುಖೇನ ಮಧ್ಯ ಕರ್ನಾಟಕ ಜನತೆಯ ಹಲವು ದಶಕಗಳ ಕನಸು ಈಡೇರುವತ್ತ ಮುಖ ಮಾಡಿರುವುದು ಆರೋಗ್ಯಕರ ಬೆಳವಣಿಗೆಯೆ ಸರಿ.
ಹರಿಹರ ಮಾರ್ಗದುದ್ದಕ್ಕೂ ರೇಲ್ವೆ ಕಾಮಗಾರಿ ಪೂರ್ಣಗೊಂಡಿದೆ. ಇದಕ್ಕೆ ಅಂತಿಮ ರೂಪ ಕೊಡುವ ಪ್ರಕ್ರಿಯೆಗೆ ಗುರುವಾರ ಇಲ್ಲಿನ ರೇಲ್ವೆ ನಿಲ್ದಾಣದಲ್ಲಿ ನೈರುತ್ಯ ರೇಲ್ವೆ ವಲಯದ ಅಧಿಕಾರಿಗಳು ಚಾಲನೆ ನೀಡಿದ್ದಾರೆ. ಪ್ಯಾಕಿಂಗ್ ಮಷಿನ್ ಮೂಲಕ ಕೊಟ್ಟೂರು- ಹರಿಹರ ರೈಲು ಮಾರ್ಗದುದ್ದಕ್ಕೂ ಈಗಾಗಲೆ ಜೋಡಿಸಿರುವ ಹಳಿಗಳನ್ನು ಸಮತಟ್ಟುಗೊಳಿಸುವುದು, ಹಳಿಗಳ ಅಸಮತೋಲನ ಸರಿಪಡಿಸುವುದು, ಜಲ್ಲಿಯನ್ನು ಹಳಿಗಳ ಕೆಳಗೆ ಗಟ್ಟಿಗೊಳಿಸುವ ಕೆಲಸ ಗುರುವಾರದಿಂದ ಆರಂಭಗೊಂಡಿದೆ. ಈ ಪ್ರಕ್ರಿಯೆ ತಿಂಗಳಿಡೀ ಈ ಮಾರ್ಗದುದ್ದಕ್ಕೂ ನಡೆಯಲಿದೆ ಎಂದು ರೇಲ್ವೆ ಅಧಿಕಾರಿಗಳು ತಿಳಿಸಿದರು.
ನೈರುತ್ಯ ರೇಲ್ವೆ ವಲಯದ ಎಇಇ ಎಚ್. ಶಿವಕುಮಾರ್, ಎಇ ಶಶಿಧರ್ ನೇತೃತ್ವದಲ್ಲಿ ಪ್ಯಾಕಿಂಗ್ ಮಷಿನ್ ಕಾರ್ಯಾಚರಣೆ ಗುರುವಾರ ಸರಳ ಪೂಜೆಯೊಂದಿಗೆ ಆರಂಭಗೊಂಡಿತು. ಪ್ರತಿದಿನ ನಾಲ್ಕು ಕಿ.ಮೀ. ವರೆಗೆ ಕಾರ್ಯಾಚರಣೆ ನಡೆಯಲಿದೆ. ಸುಮಾರು 20ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ತಿಂಗಳಿಡೀ ನಡೆಯಲಿದೆ. ಜನವರಿ 2ನೇ ವಾರದ ವೇಳೆಗೆ ಈ ಕಾರ್ಯಾಚರಣೆ ಮುಕ್ತಾಯಗೊಳ್ಳಲಿದೆ ಎಂದು ಕಾರ್ಯನಿರತ ಸಿಬ್ಬಂದಿ ತಿಳಿಸಿದರು.
ಸ್ವಾಗತ: ಕಾರ್ಯಾಚರಣೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಚಾನುಕೋಟಿ ಮಠಾಧ್ಯಕ್ಷ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಲೇಖಕ ಎನ್.ಎಂ. ಕೊಟ್ರೇಶ್, ಎನ್. ಪ್ರಭಾಕರ್, ಕೊಟ್ರಯ್ಯ, ಪಿ.ಜಿ. ಪಾಟೀಲ್ ಮತ್ತಿತರರು, ರೇಲ್ವೆ ನಿಲ್ದಾಣಕ್ಕೆ ಆಗಮಿಸಿ ಪ್ಯಾಕಿಂಗ್ ಮಷಿನ್‌ನೊಂದಿಗೆ ಆಗಮಿಸಿದ್ದ ಅಧಿಕಾರಿಗಳನ್ನು ಸ್ವಾಗತಿಸಿ ಸಂಭ್ರಮ ವ್ಯಕ್ತಪಡಿಸಿದರು.
ಸಿಆರ್‌ಎಸ್ ಭೇಟಿ: ಕಾರ್ಯಾಚರಣೆ ಪೂರ್ಣಗೊಂಡ ನಂತರ ಜನವರಿ ಕೊನೆ ವಾರದಲ್ಲಿ ರೇಲ್ವೆ ಇಲಾಖೆ ಕಮಿಷನರ್ ನೇತೃತ್ವದ ಸುರಕ್ಷತಾ ತಂಡ (ಸಿಆರ್‌ಎಸ್) ರೇಲ್ವೆ ಮಾರ್ಗದುದ್ದಕ್ಕೂ ಪರೀಕ್ಷಾರ್ಥ ಸಂಚಾರ ಕೈಗೊಳ್ಳಲಿದೆ. ತಂಡ ವರದಿ ರೂಪದಲ್ಲಿ ರೇಲ್ವೆ ಮಂತ್ರಾಲಯಕ್ಕೆ ಪೂರಕ ವರದಿ ನೀಡಿದ ನಂತರ ಕೊಟ್ಟೂರು- ಹರಿಹರ ರೈಲು ಮಾರ್ಗದ ಓಡಾಟದ ದಿನಾಂಕ ನಿಗದಿಗೊಳ್ಳಲಿದೆ. ಈ ಆಧಾರದ ಮೇಲೆಯೆ ಕೊಟ್ಟೂರಿನ ನಾಗರಿಕರು ಅಂತೂ ರೈಲಿನ ಸದ್ದು ಕೇಳುವ ಅವಕಾಶ ದೊರಕಲಿದೆ ಎಂಬ ಆಶಾಭಾವ ಹೊಂದಿದ್ದಾರೆ.
ರೇಲ್ವೆ ಕಾಮಗಾರಿಗೆ ಭೂಮಿ ನೀಡಿದ್ದ ಹರಿಹರ ತಾಲೂಕಿನ ರೈತರು ಹೆಚ್ಚಿನ ಪರಿಹಾರಕ್ಕೆ ತಗಾದೆ ತೆಗೆದು ಮಾರ್ಗದಲ್ಲಿ ಅಳಿದುಳಿದ ಕಾಮಗಾರಿಗೆ ಅಡ್ಡಿಪಡಿಸಿದ್ದರು. ಈ ಬೆಳವಣಿಗೆಯಿಂದ ಕೊಟ್ಟೂರು- ಹರಿಹರ ಮಾರ್ಗದಲ್ಲಿ ರೈಲು ಓಡಾಟದ ದಿನಾಂಕ ನಿಗದಿಗೊಳಿಸಲು ನೈರುತ್ಯ ರೇಲ್ವೆ ಅಧಿಕಾರಿಗಳಿಗೆ ಸಾಧ್ಯವಾಗಿರಲಿಲ್ಲ. ಆದರೆ ಈಗ ಎಲ್ಲ ಅಡ್ಡಿಗಳಿಗೆ ಅಂತ್ಯಹಾಡಿ ಅಂತಿಮ ಕಾರ್ಯಾಚರಣೆ ನಡೆಯುತ್ತಿದೆ.
ಕೊಟ್ಟೂರು- ಹರಿಹರ ರೈಲು ಮಾರ್ಗದ ಓಡಾಟದ ದಿನಾಂಕ ಇಷ್ಟರಲ್ಲೇ ನಿಗದಿಗೊಳ್ಳಲಿದೆ. ಈಗಾಗಲೆ ಈ ಯೋಜನೆಯ ರು. 417 ಕೋಟಿ ಪೈಕಿ ರು. 358 ಕೋಟಿಯನ್ನು ಕಾಮಗಾರಿಗೆ ವ್ಯಯಿಸಲಾಗಿದೆ. ಶೀಘ್ರದಲ್ಲೇ ಮಾರ್ಗದುದ್ದಕ್ಕೂ ಸಿಗ್ನಲ್ ಅಳವಡಿಸುವ ಕಾರ್ಯ ಆರಂಭಗೊಳ್ಳುತ್ತದೆ. ಇದಕ್ಕೆಂದೆ ರೇಲ್ವೆ ಇಲಾಖೆ ಸಿಬ್ಬಂದಿ ಮತ್ತು ತಾಂತ್ರಿಕರು ಕೊಟ್ಟೂರಿನತ್ತ ಧಾವಿಸತೊಡಗಿದ್ದಾರೆ. ಈ ಕಾರ್ಯಾಚರಣೆ ಬೆಳವಣಿಗೆಯಿಂದ ರೈಲು ಓಡಾಟಕ್ಕೆ ಇದೀಗ ನಿಶ್ಚಿತ ರೂಪ ಬಂದೊದಗಿದೆ. ಮುಂದಿನ ದಿನಗಳಲ್ಲಿ ಈ ಭಾಗದ ಜನತೆ ನೂತನ ರೈಲು ಮಾರ್ಗದ ಸೇವೆ ಪಡೆಯುವುದು ನಿಶ್ಚಿತ.
- ಎಚ್. ಶಿವಕುಮಾರ್, ನೈರುತ್ಯ ರೇಲ್ವೆ ವಲಯದ ಎಇಇ
ಜಿ. ಸೋಮಶೇಖರ