ನಾಳೆ ಶಕ್ತಿ ಕೇಂದ್ರದ ಪ್ರಮುಖ ಕಾರ್ಯಾಗಾರ: ಬಿಜೆಪಿ ಮುಖಂಡ ರಾಮಲಿಂಗಪ್ಪ
ಬಳ್ಳಾರಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ವತಿಯಿಂದ ಬಿಜೆಪಿ ಲೋಕಸಭಾ ಕ್ಷೇತ್ರ ಶಕ್ತಿ ಕೇಂದ್ರದ ಪ್ರಮುಖ ಕಾರ್ಯಾಗಾರವನ್ನು ಡಿ. 22ರಂದು ಬೆಳಗ್ಗೆ 11ಕ್ಕೆ ಹೊಸಪೇಟೆ ಸಹಕಾರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಕೆ.ಎ. ರಾಮಲಿಂಗಪ್ಪ ತಿಳಿಸಿದ್ದಾರೆ.
ಶುಕ್ರವಾರ ನಗರದ ಗಾಂಧಿನಗರ ಖಾಸಗಿ ಹೋಟೆಲ್‌ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಗ್ರಾಮ, ಮಂಡಲ, ತಾಲೂಕು ಮಟ್ಟದಲ್ಲಿ ಸಭೆ, ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಇದೀಗ ಶಕ್ತಿ ಕೇಂದ್ರ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ವಿವಿಧ ಬಿಜೆಪಿ ಮೋರ್ಚಾಗಳ ಅಧ್ಯಕ್ಷರು, ಕಾಯದರ್ಶಿಗಳು, ಜಿಲ್ಲಾ ಘಟಕದ ಪದಾಧಿಕಾರಿಗಳು ಸೇರಿದಂತೆ ನೂರಾರು ಜನ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ಒಂದು ದಿನ ಈ ಕಾರ್ಯಾಗಾರ ನಡೆಯಲಿದೆ. ಕಾರ್ಯಾಗಾರದಲ್ಲಿ ಬಿಜೆಪಿ ಆಂತರಿಕ ಸಂಘಟನೆ ಸೇರಿದಂತೆ ಇತರ ವಿಷಯಗಳ ಕುರಿತಾಗಿ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಕೆ.ಎಸ್. ಈಶ್ವರಪ್ಪ, ಮುಖ್ಯ ಸಚೇತಕ ಶಿವಯೋಗಿ ಸ್ವಾಮಿ, ವಿಧಾನಪರಿಷತ್ ಸದಸ್ಯ ಅಮರನಾಥ ಪಾಟೀಲ್, ಮುಖಂಡರಾದ ಅಶೋಕ್ ಗಸ್ತಿ, ನಂದೀಶ್ ಭಾಗವಹಿಸಲಿದ್ದಾರೆ. ಈಗಾಗಲೇ ಮಂಡಲ ಮಟ್ಟದಲ್ಲಿ ಸಭೆಗಳನ್ನು ಮಾಡಲಾಗಿದೆ. ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲಾಗುತ್ತದೆ. ಇನ್ನು ಮತದಾರರಲ್ಲಿ ಜಾಗೃತಿ ಮೂಡಿಸಲು ಮಂಡಲ ಹಾಗೂ ಬೂತ್ ಮಟ್ಟದಲ್ಲಿ ಒಬ್ಬರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಶ್ರೀರಾಮುಲು ಬಂದರೆ ಸ್ವಾಗತ: ಪಕ್ಷದ ವತಿಯಿಂದ ಲೋಕಸಭೆಯಲ್ಲಿ ಯಾರಿಗೆ ಟಿಕೆಟ್ ನೀಡುತ್ತದೋ ಅವರಿಗೆ ಬೆಂಬಲ ನೀಡುತ್ತೇವೆ. ಶ್ರೀರಾಮುಲು ಬಿಜೆಪಿಗೆ ಬಂದರೆ ಸ್ವಾಗತಿಸುತ್ತೇವೆ. ಶ್ರೀರಾಮುಲಿಗೆ ಬೆಂಬಲ ನೀಡುತ್ತೇವೆ. ಇನ್ನು ಲೋಕಸಭೆ ಅಭ್ಯರ್ಥಿ ಎಂದು ಬ್ಯಾನರ್‌ಗಳಲ್ಲಿ ಕೆಲವೊಬ್ಬರು ಹಾಕಿಸಿಕೊಂಡಿರುವ ಬಗ್ಗೆ ರಾಜ್ಯ ನಾಯಕರ ಗಮನಕ್ಕೆ ತರಲಾಗಿದೆ. ಈ ಬಗ್ಗೆ ನಾಯಕರೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಮುಖಂಡ ಎಚ್. ಹನುಮಂತಪ್ಪ ಮಾತನಾಡಿ, ಯುವತಿ ಮೇಲೆ ಹಲ್ಲೆ ಮಾಡಿರುವ ಘಟನೆ ತೀವ್ರ ಖಂಡನೀಯವಾಗಿದೆ. ಸಂಸದರ ಪುತ್ರರಾಗಿ ಈ ರೀತಿ ಮಾಡುವುದು ಸರಿಯಲ್ಲ. ಕಾನೂನು ಕೈಗೆ ತೆಗೆದುಕೊಂಡು ಹಲ್ಲೆ ಮಾಡುವುದು ಸರಿಯಲ್ಲ. ಕಾನೂನು ಕೈಗೆತ್ತಿಕೊಂಡಿರುವವರ ಮೇಲೆ ಕ್ರಮ ಕೈಗೊಳ್ಳಬೇಕು. ಯಾರೇ ಈ ರೀತಿ ಮಾಡಿರಲಿ, ಅವರಿಗೆ ಶಿಕ್ಷೆಯಾಗಬೇಕು. ಅವರ ಮೇಲೆ ಕಾನೂನಿನ ಕಠಿಣ ಕ್ರಮ ಕೈಗೊಳ್ಳಬೇಕು. ಅವರಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು. ಬಿಜೆಪಿ ಮುಖಂಡರಾದ ಮುರಾಹರಿಗೌಡ, ರಾಮಚಂದ್ರಪ್ಪ, ಸುರೇಶ್, ವೇಮಣ್ಣ, ಮಂಜುನಾಥ್ ಮಲ್ಲೇಶಿ ಇದ್ದರು.