ಮೂಢನಂಬಿಕೆ, ಕಂದಾಚಾರ ಅನುಕರಣೆ ಅಸಮಂಜಸ: ಶ್ರೀ
ಹೂವಿನಹಡಗಲಿ: ಮನುಷ್ಯನ ಬದುಕಿನಲ್ಲಿ ಸಂಸ್ಕೃತಿ, ಸತ್ಸಂಗ, ಸಂಪ್ರದಾಯಗಳ ಅಗತ್ಯವಿದೆ. ಆದರೆ, ಪ್ರಸ್ತುತ ವೈಜ್ಞಾನಿಕ ಯುಗದಲ್ಲಿದ್ದರೂ ಹಲವು ಮೂಢನಂಬಿಕೆ, ಕಂದಾಚಾರಗಳನ್ನು ಅನುಸರಿಸುವುದು ಸಮಂಜಸವಲ್ಲ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಹರಿಹರ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಇಟ್ಟಿಗಿ ಶ್ರೀ ಆಂಜನೇಯ ಬಯಲು ಮಂದಿರದಲ್ಲಿ ಅಂಬಳಿಯ ಸ್ವಾಮಿ ವಿವೇಕಾನಂದ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ವಚನ ಸಾಹಿತ್ಯ ಕುರಿತು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕಂದಾಚಾರಗಳನ್ನು ತ್ಯಜಿಸಿ ವೈಜ್ಞಾನಿಕತೆಯನ್ನು ಬೆಳೆಸಿಕೊಳ್ಳಬೇಕು. ದೇಶದ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು ಇಂತಹ ಆಚರಣೆಗಳಿಗೆ ತಿಲಾಂಜಲಿ ಇಟ್ಟು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಉಪನ್ಯಾಸಕ ರಮೇಶ ವಾಲ್ಮೀಕಿ ಮಾತನಾಡಿ, ವಚನ ಸಾಹಿತ್ಯ ಜನ ಸಾಮಾನ್ಯರ ಜೀವನಾಡಿ. ಜನಪದರ ಬದುಕಿನ ಹತ್ತು ಹಲವು ತಲ್ಲಣಗಳನ್ನು ಸಹಜ ಶೈಲಿಯಲ್ಲಿ ಸಮಾಜಕ್ಕೆ ತಲುಪಿಸಿದ ಕೀರ್ತಿ ವಚನ ಚಳವಳಿಕಾರರಿಗೆ ಸಲ್ಲುತ್ತದೆ. ವಿಚಾರಗಳು ಜಗತ್ತನ್ನು ಆಳುತ್ತವೆ ಎನ್ನುವುದಕ್ಕೆ ಅನುಭಾವ ಪ್ರಜ್ಞೆಯ ವಚನಕಾರರು ಸಮಾಜಕ್ಕೆ ನೀಡಿದ ಸಾಮಾಜಿಕ ನ್ಯಾಯ ಎಂದು ಇದೇ ಸಂದರ್ಭದಲ್ಲಿ ಪ್ರತಿಪಾದಿಸಿದರು.
ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಅಕ್ಕಿ ಮಲ್ಲಿಕಾರ್ಜುನ ಮಾತನಾಡಿದರು. ತದನಂತರ ತಾಲೂಕಿನ 12 ಪ್ರೌಢಶಾಲೆಗಳಲ್ಲಿ ನಡೆದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಸ್ವಾಮೀಜಿ ಬಹುಮಾನ ವಿತರಿಸಿದರು. ನಾನಾ ಶಾಲೆಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕಾರ್ಯದರ್ಶಿ ಗಂಗಾಧರ ರೆಡ್ಡಿ, ಅಕ್ಕಿ ಸಂಗಮ್ಮ, ಗೀತಾಂಜಲಿ ಹಾಗೂ ಸಂಗಡಿಗರು ಇದ್ದರು. ಕೊಟ್ರೇಶ ಕಾರ್ಯಕ್ರಮ ನಿರ್ವಹಿಸಿದರು.