ಸಂಕ್ಷಿಪ್ತ ಸುದ್ದಿ
ಪದಾಧಿಕಾರಿಗಳ ಆಯ್ಕೆ
ಬಳ್ಳಾರಿ: ವಿದ್ಯಾನಗರದ ಗಂಗಾಪರಮೇಶ್ವರಿ ದೇವಸ್ಥಾನದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಸಂಘದ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಜರುಗಿತು.
ಸಂಘದ ಪದಾಧಿಕಾರಿಗಳು: ಜಿಲ್ಲಾಧ್ಯಕ್ಷರಾಗಿ ಗೋನಾಳ್ ಪಂಪಾಪತಿ, ಗೌರವಾಧ್ಯಕ್ಷರಾಗಿ ಬಿ.ಎಸ್. ಹನುಮಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ರಂಗಸ್ವಾಮಿ, ಸಹ ಕಾರ್ಯದರ್ಶಿಯಾಗಿ ಗೋನಾಳ್ ಬಿ. ಜುಮರಿ, ಉಪಾಧ್ಯಕ್ಷರುಗಳಾಗಿ ಅಂಬಣ್ಣ, ರಾಮಪ್ಪ, ಹೊನ್ನೂರ ಸ್ವಾಮಿ, ಷಣ್ಮುಖ, ಖಜಾಂಚಿಯಾಗಿ ನಾಗರಾಜ, ಸಂಘಟನಾ ಕಾರ್ಯದರ್ಶಿಗಳಾಗಿ ದೇವೇಂದ್ರಪ್ಪ, ಮಂಜುನಾಥ, ಬಿ. ನಾರಾಯಣ, ಕಾರ್ಯಾಧ್ಯಕ್ಷರಾಗಿ ಸತ್ಯನಾರಾಯಣ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನರೇಂದ್ರ ಅವರು ಆಯ್ಕೆಯಾದರು. ಸಂಘದ ಅಧ್ಯಕ್ಷ ಗೋನಾಳ್ ಪಂಪಾಪತಿ ಮಾತನಾಡಿ, ನಿಜಶರಣ ಅಂಬಿಗರ ಚೌಡಯ್ಯ ಅವರು ಸಮಾಜದ ಏಳ್ಗೆಗೆ ಮತ್ತು ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಪಟ್ಟಂತಹ ವ್ಯಕ್ತಿಯಾಗಿದ್ದು, ಅವರ ಆದರ್ಶ, ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜದ ಬೆಳವಣಿಗೆ ಸಾಧ್ಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
ಅರ್ಜಿ ಆಹ್ವಾನ
ಬಳ್ಳಾರಿ: ವಾರ್ತಾ ಇಲಾಖೆಯು ವಿಶೇಷ ಘಟಕ ಯೋಜನೆಯಡಿ ಆಸಕ್ತ ಪರಿಶಿಷ್ಟ ಜಾತಿಯ 40 ನಿರುದ್ಯೋಗಿ ಪದವೀಧರ ಯುವಕ, ಯುವತಿಯರಿಗೆ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ತಾಂತ್ರಿಕ ವೃತ್ತಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ. ತರಬೇತಿ ಒಂದು ತಿಂಗಳ ಸರ್ಟಿಫಿಕೇಟ್ ಕೋರ್ಸ್ ಆಗಿದ್ದು, ಮೈಸೂರು ವಿವಿಯ ಶೈಕ್ಷಣಿಕ ಬಹು ಮಾಧ್ಯಮ ಸಂಶೋಧನಾ ಕೇಂದ್ರದಲ್ಲಿ 2014ರ ಜನವರಿ, ಫೆಬ್ರವರಿಯಲ್ಲಿ ನಡೆಯಲಿದೆ. ಛಾಯಾಗ್ರಹಣ, ಸಂಕಲನ, ಮಲ್ಟಿ ಮೀಡಿಯಾದಲ್ಲಿ ತರಬೇತಿ ನೀಡಲಾಗುವುದು. ಈ ಅವಧಿಯಲ್ಲಿ ಉಚಿತ ಊಟ, ವಸತಿ ಸೌಕರ್ಯ ಕಲ್ಪಿಸಲಾಗುವುದು. ಅಭ್ಯರ್ಥಿಗಳು ಯಾವುದೇ ಪದವಿ ಹೊಂದಿದ್ದು, ಕಂಪ್ಯೂಟರ್ ಜ್ಞಾನವುಳ್ಳವರಿಗೆ ಆದ್ಯತೆ ನೀಡಲಾಗುವುದು. 21ರಿಂದ 35 ವರ್ಷದೊಳಗಿರಬೇಕು. ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಸಕ್ತರು ತಮ್ಮ ಹೆಸರು, ವಯಸ್ಸು, ವಿಳಾಸ, ವಿದ್ಯಾರ್ಹತೆ, ಜಾತಿ ಮತ್ತಿತರ ಸ್ವ ವಿವರವುಳ್ಳ ಮಾಹಿತಿಯನ್ನು ಬಿಳಿ ಹಾಳೆ ಮೇಲೆ ಬೆರಳಚ್ಚುಗೊಳಿಸಿ ಅಥವಾ ಸ್ಪಷ್ಟವಾಗಿ ಬರೆದ ಅರ್ಜಿಯನ್ನು ದೃಢೀಕೃತ ದಾಖಲೆಗಳೊಂದಿಗೆ ನಿರ್ದೇಶಕರು, ವಾರ್ತಾ ಇಲಾಖೆ, ವಾರ್ತಾ ಸೌಧ, ನಂ. 17, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು-1 ಇವರಿಗೆ ಡಿ. 31ರೊಳಗಾಗಿ ಸಲ್ಲಿಸಬೇಕು. ಲಕೋಟೆ ಮೇಲೆ ತಾಂತ್ರಿಕ ವೃತ್ತಿ ತರಬೇತಿಗಾಗಿ ಅರ್ಜಿ ಎಂದು ನಮೂದಿಸಿರಬೇಕು. ಹೆಚ್ಚಿನ ಮಾಹಿತಿಗೆ ದೂ.ಸಂ-080-22028052,56ನ್ನು ಸಂಪರ್ಕಿಸಬೇಕು ಎಂದು ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಣಿಗಾರಿಕೆ ಪುನರಾರಂಭಕ್ಕೆ ಆಗ್ರಹ
ಹೊಸಪೇಟೆ: ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆ ಪುನಃ ಆರಂಭಿಸುವ ಮೂಲಕ ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿ ಬಳ್ಳಾರಿ ಜಿಲ್ಲಾ ಉದ್ಯೋಗ ಭದ್ರತಾ ವೇದಿಕೆ ಪದಾಧಿಕಾರಿಗಳು ಶುಕ್ರವಾರ ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ್ ರಾಘವೇಂದ್ರರಾವ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ರಾಜ್ಯದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗಣಿ ನಿಷೇಧ ಮಾಡಿರುವುದು ಸ್ವಾಗತಾರ್ಹ. ಆದರೆ, ಸಕ್ರಮ ಗಣಿಗಾರಿಕೆ ಆರಂಭಕ್ಕೆ ಸುಪ್ರೀಂಕೋರ್ಟ್ ಆದೇಶಿಸಿದ್ದರೂ ರಾಜ್ಯ ಸರ್ಕಾರ ಮಾತ್ರ ಈ ಕುರಿತು ಇನ್ನೂ ಮೌನ ವಹಿಸಿದ್ದು, ಗಣಿಗಾರಿಕೆಯನ್ನೆ ನೆಚ್ಚಿಕೊಂಡಿರುವ ಸಾವಿರಾರು ಕಾರ್ಮಿಕ ಕುಟುಂಬದವರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆ ನಿಷೇಧದಿಂದ ನಿರುದ್ಯೋಗ ಸಮಸ್ಯೆ ಅಧಿಕವಾಗಿದೆ. ಗಣಿಗಾರಿಕೆ ಪುನರಾರಂಭಕ್ಕೆ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಗಣಿಗಾರಿಕೆಯಲ್ಲಿ ಉದ್ಯೋಗ ಕಂಡುಕೊಂಡಿದ್ದ ಕುಟುಂಬಗಳು ಮೂರು ವರ್ಷಗಳಿಂದ ಬೀದಿಗೆ ಬಂದಿವೆ. ಜೀವನ ನಿರ್ವಹಣೆಗೆ ಸಾಲ ಮಾಡಲಾಗುತ್ತಿದ್ದು, ಸಾಲ ತೀರಿಸಲಾಗದೆ ಅನೇಕ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರೂ ಈಗ ಬೀದಿಗೆ ಬಂದಿದ್ದಾರೆ. ಜಿಲ್ಲಾ ಉದ್ಯೋಗ ಭದ್ರತಾ ವೇದಿಕೆ ಅಧ್ಯಕ್ಷ ಟಿ. ಭೀಮಪ್ಪ, ಗೌರವಾಧ್ಯಕ್ಷ ಜೆ. ಆಂಜನೇಯ್ಯ, ಉಪಾಧ್ಯಕ್ಷ ಪರಶುರಾಮ, ಪ್ರಧಾನ ಕಾರ್ಯದರ್ಶಿ ಇ. ಪುಷ್ಪಲತಾ, ಕಾರ್ಯದರ್ಶಿ ಎಂ. ಅನೀಸ್, ಸಂಚಾಲಕ ಯು. ಜಾಕೀರ್ ಹುಸೇನ್, ಖಜಾಂಚಿ ಜಿ. ವೆಂಕಟೇಶ್ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.