ಸಣ್ಣಫಕ್ಕೀರಪ್ಪ ಪತ್ನಿ, ಪುತ್ರಿಯರಿಗೆ ಜಾಮೀನು
ಬಳ್ಳಾರಿ: ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಯಚೂರು ಸಂಸದ ಸಣ್ಣಫಕ್ಕೀರಪ್ಪ ಅವರ ಪತ್ನಿ, ಮೂವರು ಪುತ್ರಿಯರಿಗೆ ಬಳ್ಳಾರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ತಾತ್ಕಾಲಿಕ ಮಧ್ಯಂತರ ಜಾಮೀನು ನೀಡಿದೆ. ಶ್ರೀಲಕ್ಷ್ಮಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಪೊಲೀಸರು ಸಣ್ಣಫಕ್ಕೀರಪ್ಪ ಅವರ ಪತ್ನಿ ರುದ್ರಮ್ಮ, ಪುತ್ರಿಯರಾದ ಉಮಾ, ದೀಪಾ ಮತ್ತು ಪದ್ಮಾವತಿ ಮೇಲೆ ದೂರು ದಾಖಲಿಸಿಕೊಂಡು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಬಳ್ಳಾರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ,ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದರು. ವಿಚಾರಣೆ ಕೈಗೆತ್ತಿಕೊಂಡಿದ್ದ ಜಿಲ್ಲಾ ಪ್ರಧಾನ ನ್ಯಾಯಾಧೀಶ ವಿಶ್ವೇಶ್ವರ ಭಟ್, 4 ಜನರಿಗೆ ತಾತ್ಕಾಲಿಕ ಮಧ್ಯಂತರ ಜಾಮೀನು ನೀಡಿದ್ದಾರೆ. ಬಂಧಿತ ಸಣ್ಣಫಕ್ಕೀರಪ್ಪ ಪುತ್ರ ಮುತ್ತು, ಇತರ 5 ಜನರ ಜಾಮೀನು ಡಿ.21ಕ್ಕೆ ಅರ್ಜಿ ವಿಚಾರಣೆಗೆ ಬರಲಿದೆ.