ಸಾರಿಗೆ ನೌಕರರಿಗೆ ಗುಜರಿ ಬಸ್ ಕಿರಿಕಿರಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 20
ಸಾರಿಗೆ ಸಂಸ್ಥೆಯ ಅಧಿಕಾರಿಗಳಿಂದ ಒಂದಲ್ಲ ಒಂದು ರೀತಿ ನೌಕರರಿಗೆ ಕಿರುಕುಳ ನಡೆದೇ ಇದೆ. ಇದರಲ್ಲಿ ಒಂದು ಎಂಬಂತೆ ಗುಜರಿ ಬಸ್ (7.5 ಲಕ್ಷ ಕಿ.ಮೀ. ಓಡಿದ್ದು) ಬಳಕೆ ಮೂಲಕವೂ ಚಾಲಕ, ನಿರ್ವಾಹಕರಿಗೆ ಕಿರುಕುಳ ನೀಡಲಾಗುತ್ತಿದೆ. ಇದಲ್ಲದೆ ಪ್ರಯಾಣಿಕರ ಪ್ರಾಣದೊಂದಿಗೆ ಸಾರಿಗೆ ಸಂಸ್ಥೆ ಚೆಲ್ಲಾಟವಾಡುತ್ತಿದೆ.
ಹೌದು, 7.5 ಲಕ್ಷ ಕಿ.ಮೀ. ಓಡಿಸಿದ ಗುಜರಿಗೆ ಹಾಕುವ ಬಸ್ಗಳನ್ನು ಬಳಕೆ ಮಾಡುವಂತಿಲ್ಲ ಎಂಬ ನಿಯಮವಿದ್ದರೂ ಬಳ್ಳಾರಿ ವಿಭಾಗವೊಂದರಲ್ಲಿ ಬಸ್ಗಳ ಕೊರತೆ ಹಿನ್ನೆಲೆಯಲ್ಲಿ 7 ಲಕ್ಷ ಕಿ.ಮೀ. ಮೇಲ್ಪಟ್ಟು ಓಡಿಸಿದ 97 ಗುಜರಿ ಬಸ್ಗಳನ್ನು ಇದೀಗ ಓಡಿಸಲಾಗುತ್ತಿದೆ. ಅಲ್ಲದೆ 8 ಲಕ್ಷ ಕಿ.ಮೀ. ಓಡಿದ ಎ.ಸಿ. ಕರೋನಾ ಸ್ಲೀಪರ್ ಕ್ಲಾಸ್ನ ಎರಡು ಬಸ್ಗಳನ್ನು ಬೆಂಗಳೂರಿಗೆ ಓಡಿಸುತ್ತಿದ್ದು, ಒಂದು ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡರೂ, ಓಡಿಸುವುದು ಮಾತ್ರ ನಿಂತಿಲ್ಲ.
ಗುಜರಿ ಗಾಡಿಗಳನ್ನು ಕೇವಲ ಗ್ರಾಮೀಣ ಪ್ರದೇಶಗಳಿಗೆ ಓಡಿಸುತ್ತಿಲ್ಲ, ರಾಜಧಾನಿ ಬೆಂಗಳೂರಿಗೆ ಓಡಿಸುವ ಮೂಲಕ ಇಲಾಖೆ ಪ್ರಯಾಣಿಕರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದೆ. ಕೆಎ 38, ಎಫ್ 442 ಮತ್ತು ಎಫ್ 443 ಎಸಿ ಕರೋನಾ ಸ್ಲೀಪರ್ ಎರಡು ವಾಹನಗಳು 8 ಲಕ್ಷ ಕಿ.ಮೀ. ಓಡಿದ್ದರೂ ಈಗಲೂ ಬೆಂಗಳೂರಿಗೆ ಓಡುತ್ತಿವೆ. ಕೆಲ ತಿಂಗಳ ಹಿಂದೆ ಬೆಂಗಳೂರಿನಿಂದ ಬಳ್ಳಾರಿಗೆ ಬರುತ್ತಿದ್ದಾಗ ಗಾಡಿಯ ಸ್ವೀಚ್ ಬೋರ್ಡ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಚಾಲಕನ ಸಮಯ ಪ್ರಜ್ಞೆಯಿಂದ ಬೆಂಕಿ ನಂದಿಸಿದ್ದಾರೆ. ಇಲ್ಲದಿದ್ದರೆ ಇಡೀ ಬಸ್ ಸುಟ್ಟು ಹೋಗುತ್ತಿತ್ತು. ಇಂತಹ ಘಟನೆ ನಡೆದರೂ ಅದೇ ಬಸ್ಗಳನ್ನು ಬೆಂಗಳೂರಿಗೆ ಓಡಿಸುವುದು ಬಿಟ್ಟಿಲ್ಲ. ಇದು ಪ್ರಯಾಣಿಕರ ಪ್ರಾಣದೊಂದಿಗೆ ಚೆಲ್ಲಾಟವಲ್ಲದೆ ಮತ್ತೇನು?
ಬಳ್ಳಾರಿ ವಿಭಾಗದಲ್ಲಿ 97 ಗುಜರಿ ಬಸ್ಗಳು: ಬಳ್ಳಾರಿ ವಿಭಾಗದಲ್ಲಿ ಒಟ್ಟು 3 ಘಟಕಗಳು ಇವೆ. ಇದರಲ್ಲಿ 387 ಬಸ್ಗಳಲ್ಲಿ 97 ಸ್ಕ್ರ್ಯಾಪ್ ಬಸ್ಗಳ ಬಳಕೆ ನಡೆದಿದೆ. ಬಳ್ಳಾರಿ ವಿಭಾಗದಲ್ಲಿ 7ರಿಂದ 7.5 ಲಕ್ಷ ಕಿ.ಮೀ. ಓಡಿದ 55 ಬಸ್ಗಳು, 7.5 ರಿಂದ 8 ಲಕ್ಷ ಕಿ.ಮೀ. ವರೆಗೆ ಓಡಿದ 25 ಬಸ್, 8 ರಿಂದ 8.5 ಲಕ್ಷ ಕಿ.ಮೀ. ಓಡಿದ 11 ಬಸ್, 8.5ರಿಂದ 9 ಲಕ್ಷ ಕಿ.ಮೀ. ಓಡಿದ 9 ಬಸ್ಗಳು, 9 ಕಿ.ಮೀ. ನಿಂದ 9.5 ಲಕ್ಷ ಕಿ.ಮೀ. ಓಡಿದ 2 ಬಸ್ ಈಗಲೂ ಓಡಿಸಲಾಗುತ್ತಿದೆ.
ನೌಕರರ ಶೋಷಣೆ, ಪ್ರಯಾಣಿಕರಿಗೆ ಆತಂಕ: ಬಸ್ಗಳು ಹಳೆಯದಾದಂತೆ ಅವುಗಳ ಡೀಸೆಲ್ ಬಳಕೆಯಲ್ಲಿ ಸಾಕಷ್ಟು ವ್ಯತ್ಯಾಸಗಳಾಗುತ್ತವೆ. ಆಗ ಚಾಲಕರು ಹಾಗೂ ನಿರ್ವಾಹಕರಿಗೆ ಹಳೆ ಬಸ್ಗಳನ್ನು ನೀಡಿ, ನಿರೀಕ್ಷಿತ ಆದಾಯ ತಂದು ಕೊಡಬೇಕು, ಇಲ್ಲದಿದ್ದರೆ ಮೆಮೋ ಕೊಟ್ಟು ದಂಡ ವಿಧಿಸುವ ಮೂಲಕ ಇಲಾಖೆಗೆ ನಷ್ಟ ಉಂಟಾಗಿದೆ ಎಂದು ರಿಕವರಿ ಹೆಸರಿನಲ್ಲಿ ಹಣ ವಸೂಲಿ ಮಾಡಲಾಗುತ್ತದೆ. ನೌಕರರನ್ನು ಕತ್ತಲಲ್ಲಿಟ್ಟು ಇಲಾಖೆಗೆ ಆದಾಯ ಎಂದು ತೋರಿಸುವುದು ಎಷ್ಟು ಸರಿ? ಹೇಳಿ ಕೇಳಿ ಬಹುತೇಕ ಗ್ರಾಮೀಣ ಪ್ರದೇಶದ ರಸ್ತೆಗಳ ಪರಿಸ್ಥಿತಿ ಹೇಳತೀರದು. ಸ್ಕ್ರ್ಯಾಪ್ ಬಸ್ಗಳನ್ನು ಚಾಲಕರು, ನಿರ್ವಾಹಕರು ಕೊಟ್ಟರೆ ಹೇಗೆ ತಾನೆ ನಿಗದಿತ ಡೀಸೆಲ್ನಲ್ಲಿ ಓಡಿಸಲು ಸಾಧ್ಯವಾಗುತ್ತದೆ ಎಂಬ ಕಲ್ಪನೆ ಇಲಾಖೆಗೆ ಇಲ್ಲವೆ? ಇಂತಹ ಬಸ್ಗಳು ಅರ್ಧದಾರಿಯಲ್ಲಿ ಕೈಕೊಡುವುದರಿಂದ ಪ್ರಯಾಣಿಕರ ಬೈಗುಳಕ್ಕೆ ಬಲಿಯಾಗಬೇಕು. ಹಗಲು ರಾತ್ರಿ ಮೈ ಮುರಿದು ದುಡಿದರೂ, ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಸುಖದ ಜೀವನ ದೂರ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಗುಜರಿಗೆ ಹಾಕುವ ಬಸ್ಗಳನ್ನು ಕೊಡುವ ಮೂಲಕ ನಿಗದಿತ ಆದಾಯ ಹಾಗೂ ಡೀಸೆಲ್ ಬಳಕೆ ನಿರೀಕ್ಷಿಸುವ ಸಾರಿಗೆ ಇಲಾಖೆ ಅಧಿಕಾರಿಗಳ ಕ್ರಮ ನೌಕರರ ಶೋಷಣೆ ಅಲ್ಲದೆ ಮತ್ತೇನು?
ಲಾಭ ನಮ್ಮದು, ಫಜೀತಿ ನಿಮ್ಮದು: ಸ್ಕ್ರ್ಯಾಪ್ ಬಸ್ಗಳ ಬಗ್ಗೆ ಸಾರಿಗೆ ಸಂಸ್ಥೆಯ ಅಧಿಕಾರಿಗಳನ್ನು ಕೇಳಿದರೆ, 7.5 ಲಕ್ಷ ಕಿ.ಮೀ. ಓಡಿದರೆ ಅವುಗಳು ಸ್ಕ್ರ್ಯಾಪ್ ಬಸ್ಗಳು. ಆದರೆ ಈ ಬಸ್ಗಳಿಗೆ ಓಡುವ ಸಾಮರ್ಥ್ಯ ಇದ್ದರೆ ಪ್ರಾದೇಶಿಕ ಸಾರಿಗೆ ಸಂಸ್ಥೆ ಅನುಮತಿಯೊಂದಿಗೆ ಓಡಿಸಲಾಗುತ್ತದೆ ಎಂದು ಹೇಳುತ್ತಾರೆ. ಆದರೆ ಇಂತಹ ಬಸ್ಗಳ ನಿಯಂತ್ರಣ ತಪ್ಪಿ ಅನಾಹುತವಾದರೆ ಆಗ ಅಧಿಕಾರಿಗಳು ಹೊಣೆಗಾರರಾಗುವುದಿಲ್ಲ. ಬಸ್ಸಿನ ಚಾಲಕ, ನಿರ್ವಾಹಕರೆ ಹೊಣೆ ಹೊರಬೇಕು. ಲಾಭ ನಮ್ಮದು ಫಜೀತಿ ನಿಮ್ಮದು ಎನ್ನುವ ತತ್ವದಲ್ಲಿ ಸಾರಿಗೆ ಅಧಿಕಾರಿಗಳು ಸಾಗಿದ್ದಾರೆ.
ಶಶಿಧರ ಮೇಟಿ