ಸುದ್ದಿ ಸಂಕ್ಷೇಪ
ಕಾರ್ಯಾಗಾರ: ಅರ್ಜಿ ಆಹ್ವಾನ
ಬಳ್ಳಾರಿ: ವಾರ್ತಾ ಇಲಾಖೆಯು ದೃಶ್ಯ ಮಾಧ್ಯಮದಲ್ಲಿ ಅಧ್ಯಯನ ಮಾಡುವ ಪರಿಶಿಷ್ಟ ಜಾತಿಯ 100 ವಿದ್ಯಾರ್ಥಿಗಳಿಗೆ ಚಿತ್ರಕಲೆ, ಗ್ರಾಫಿಕ್ಸ್ ಕಲೆ, ಶಿಲ್ಪಕಲೆ, ಅನ್ವಯಿಕ ಕಲೆಗಳ ಕುರಿತು 5 ದಿನಗಳ ಕಾರ್ಯಾಗಾರ ನಡೆಸಲು ಉದ್ದೇಶಿಸಿದೆ. ತರಬೇತಿಯು ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ)ನಲ್ಲಿ 2014ರ ಜನವರಿ, ಫೆಬ್ರವರಿಯಲ್ಲಿ ನಡೆಯಲಿದೆ. ಕಾರ್ಯಾಗಾರದ ಅವಧಿಯಲ್ಲಿ ಉಚಿತ ಊಟ, ವಸತಿ ಸೌಕರ್ಯ ಕಲ್ಪಿಸಲಾಗುವುದು. ರಾಜ್ಯದ ಕಲಾ ಕಾಲೇಜಿನಲ್ಲಿ ಅಧ್ಯಯನ ಮಾಡುವವರು ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಆಸಕ್ತರು ತಮ್ಮ ಹೆಸರು, ವಯಸ್ಸು, ವಿಳಾಸ, ವಿದ್ಯಾರ್ಹತೆ, ಜಾತಿ ಮತ್ತಿತರ ಸ್ವ ವಿವರವುಳ್ಳ ಮಾಹಿತಿಯನ್ನು ಬಿಳಿ ಹಾಳೆಯ ಮೇಲೆ ಬೆರಳಚ್ಚುಗೊಳಿಸಿ ಅಥವಾ ಸ್ಪಷ್ಟವಾಗಿ ಬರೆದು ತಾವು ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಮುಖ್ಯಸ್ಥರ ಅನುಮತಿ ಪತ್ರದೊಂದಿಗೆ ನಿರ್ದೇಶಕರು, ವಾರ್ತಾ ಇಲಾಖೆ, ವಾರ್ತಾ ಸೌಧ, ನಂ. 17, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು-1 ಇವರಿಗೆ ಡಿ. 31ರೊಳಗಾಗಿ ಸಲ್ಲಿಸಬೇಕು. ಲಕೋಟೆ ಮೇಲೆ ದೃಶ್ಯ ಮಾಧ್ಯಮ ಕಾರ್ಯಾಗಾರಕ್ಕಾಗಿ ಅರ್ಜಿ ಎಂದು ನಮೂದಿಸಿರಬೇಕು. ಹೆಚ್ಚಿನ ಮಾಹಿತಿಗೆ ದೂ.080-22028052 ಸಂಪರ್ಕಿಸಿ.
ಆಯತಪ್ಪಿ ಬಿದ್ದು ಸಾವು
ಹೊಸಪೇಟೆ: ವಿದ್ಯುತ್ ಕಂಬದ ಮೇಲಿಂದ ಆಕಸ್ಮಿಕವಾಗಿ ವ್ಯಕ್ತಿಯೊಬ್ಬ ಬಿದ್ದು ಮೃತಪಟ್ಟಿರುವ ಘಟನೆ ತಾಲೂಕಿನ ಕಮಲಾಪುರದಲ್ಲಿ ಗುರುವಾರ ಸಂಜೆ ನಡೆದಿದೆ. ಬಳ್ಳಾರಿಯ ಡಿ.ಸಿ. ನಗರದ ನಿವಾಸಿ ಗೋವಿಂದ (30) ಮೃತನಾಗಿರುವ ವ್ಯಕ್ತಿಯಾಗಿದ್ದಾನೆ. ಕಮಲಾಪುರದಲ್ಲಿ ರಸ್ತೆ ಅಭಿವೃದ್ಧಿ ನಿರ್ಮಾಣದ ಸಂದರ್ಭ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವಾಗ ವಿದ್ಯುತ್ ಕಂಬದಿಂದ ಆಕಸ್ಮಿಕವಾಗಿ ಕೆಳೆಗೆ ಬಿದ್ದು ತೀವ್ರ ಗಾಯಗೊಂಡಿದ್ದು, ಹೊಸಪೇಟೆ ನಗರದ ನೂರು ಹಾಸಿಗೆ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿ ಸಾವಿಗೀಡಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜಾಟ: 7 ಜನರ ವಶ
ಹೊಸಪೇಟೆ: ನಗರದ ರಾಣಿಪೇಟೆಯ ರಸ್ತೆ ಪಕ್ಕದಲ್ಲಿ ಕುಳಿತು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ 7 ಜನರನ್ನು ಬಂಧಿಸಿದ ಘಟನೆ ನಗರದಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ. ಸ್ಥಳೀಯ ನಿವಾಸಿಗಳು ಗುಂಪು ಕಟ್ಟಿಕೊಂಡು ರಾಣೀಪೇಟೆಯಲ್ಲಿ ರಸ್ತೆ ಪಕ್ಕದ ವಿದ್ಯುತ್ ಕಂಬದ ಬಳಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿಕೊಂಡಿರುವ ನಿಖರ ಮಾಹಿತಿಯನ್ನು ಪೊಲೀಸರು ಪಡೆದುಕೊಂಡು ಜೂಜಾಟದಲ್ಲಿ ತೊಡಗಿದ್ದ 7 ಜನರನ್ನು ಬಂಧಿಸಿ, ಬಂಧಿತರಿಂದ ರು. 43,190 ನಗದು ಹಾಗೂ ಇಸ್ಪೀಟ್ ಜೂಜಾಟಕ್ಕೆ ಬಳಿಸಿದ ಇಸ್ಪೀಟ್ ಎಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಹೊಸಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.