ಸುದ್ದಿ ಸಂಕ್ಷೇಪ
ನಾಳೆ ನಾಟಕ ಪ್ರದರ್ಶನ
ಬಳ್ಳಾರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಡಿ, ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಡಿ. 22ರಂದು ಸಂಜೆ 6.30ಕ್ಕೆ ಬಳ್ಳಾರಿಯ ಶರಣರ ಕಲಾಬಳಗದಿಂದ ಹೇಮರಡ್ಡಿ ಮಲ್ಲಮ್ಮ ಪೌರಾಣಿಕ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
23: ಪ್ರತಿಭಾ ಕಾರಂಜಿ
ಬಳ್ಳಾರಿ: ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ, ಶೈಕ್ಷಣಿಕ ಸ್ಪರ್ಧೆಗಳ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಡಿ. 23ರಂದು ಬೆಳಗ್ಗೆ 10ಕ್ಕೆ ನಗರದ ವಾರ್ಡ್ಲಾ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಉಸ್ತುವಾರಿ ಸಚಿವ ಪರಮೇಶ್ವರ ನಾಯ್ಕ ಉದ್ಘಾಟಿಸುವರು. ನಗರ ಶಾಸಕ ಅನಿಲ್ ಲಾಡ್ ಅಧ್ಯಕ್ಷತೆ ವಹಿಸುವರು. ಜಿಪಂ ಅಧ್ಯಕ್ಷೆ ಶೋಭಾ ಬೆಂಡಿಗೇರಿ, ಸಂಸದೆ ಜೆ. ಶಾಂತಾ, ಜಿಪಂ ಉಪಾಧ್ಯಕ್ಷೆ ಮಮತಾ ಸುರೇಶ್, ಡಿಸಿ ಎ.ಎ. ಬಿಸ್ವಾಸ್, ಜಿಪಂ ಸಿಇಒ ಮಂಜುನಾಥ ನಾಯಕ್, ತಾಪಂ ಅಧ್ಯಕ್ಷ ವಿ. ಗಾದಿಲಿಂಗಪ್ಪ ಸೇರಿದಂತೆ ಇತರರು ಭಾಗವಹಿಸುವರು ಎಂದು ಡಿಡಿಪಿಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿಗೆ ನೇಮಕ
ಬಳ್ಳಾರಿ: ಭಾರತೀಯ ಜನತಾ ಪಕ್ಷದ ಜಿಲ್ಲಾ ಎಸ್ಟಿ ಮೋರ್ಚಾಕ್ಕೆ ನೂತನ ಕೋಶಾಧ್ಯಕ್ಷರಾಗಿ ವಿ. ಸೋಮಶೇಖರ ನೇಮಕವಾಗಿದ್ದಾರೆ. ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಅವರ ಆದೇಶದ ಮೇರೆಗೆ ಹಾಗೂ ಜಿಲ್ಲಾಧ್ಯಕ್ಷ ಮೈಲಾರಲಿಂಗ ನಾಯ್ಕ ಸೂಚನೆಯಂತೆ ಪ್ರಧಾನ ಕಾರ್ಯದರ್ಶಿ ಮಲ್ಲೇಶ್ ನಾಯಕ್, ಉಪಾಧ್ಯಕ್ಷ ಕೆ. ಕಾಳಿಂಗರಾಜ ಅವರು ಸೋಮಶೇಖರ ಅವರನ್ನು ನೇಮಿಸಿದ್ದಾರೆ.
ಚಿತ್ರಕಲಾ ಪ್ರಾತ್ಯಕ್ಷಿತೆ
ಬಳ್ಳಾರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರಸಗ್ರಹಣ ಕಾರ್ಯಕ್ರಮದಡಿ ಸಿರುಗುಪ್ಪ ತಾಲೂಕಿನ ಇಬ್ರಾಹಿಂಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಚಿತ್ರಕಲಾ ಪ್ರಾತ್ಯಕ್ಷಿತೆಯಲ್ಲಿ ಚಿತ್ರಕಲೆ ನಿರ್ದೇಶಕ ಮಂಜುನಾಥ ಗೋವಿಂದವಾಡ ಹಲವು ಚಿತ್ರಗಳನ್ನು ಬಿಡಿಸುವ ಮೂಲಕ ಮಕ್ಕಳಿಗೆ ಚಿತ್ರಕಲೆ ಕುರಿತು ತಿಳಿಸಿದರು. ಶಾಲಾ ಮುಖ್ಯೋಪಾಧ್ಯಾಯ ಓಬಳೇಶಪ್ಪ, ಎಸ್ಡಿಎಂಸಿ ಅಧ್ಯಕ್ಷ ಉಮೇಶ್ಗೌಡ, ಸಹ ಶಿಕ್ಷಕ ಕೆ. ರಾಮಪ್ಪ, ರಾಘವೇಂದ್ರರಾವ್, ಶೋಭಾ, ಜಯಶ್ರೀ, ಮಧು ಇದ್ದರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ ತಿಳಿಸಿದ್ದಾರೆ.
ಅಧ್ಯಾಪಕರ ಮುಷ್ಕರ ಹಿಂದಕ್ಕೆ
ಬಳ್ಳಾರಿ: ಹನ್ನೆರಡು ಜನ ಅಧ್ಯಾಪಕರ ವಿರುದ್ಧ ವಿಜಯನಗರದ ಶ್ರೀಕೃಷ್ಣದೇವರಾಯ ವಿವಿ ಕುಲಪತಿಗಳ ಶಿಫಾರಸು ವಿರೋಧಿಸಿ, ವಿವಿ ವ್ಯಾಪ್ತಿಯ ಕಾಲೇಜುಗಳ ಅಧ್ಯಾಪಕರ ಸಂಘದ ನೇತೃತ್ವದಲ್ಲಿ ಡಿ. 9ರಿಂದ ಕಪ್ಪು ಪಟ್ಟಿಧರಿಸಿ ನಡೆಸುತ್ತಿದ್ದ ಮುಷ್ಕರವನ್ನು ಅಧ್ಯಾಪಕರು ಹಿಂಪಡೆದಿದ್ದಾರೆ.
ಇಲ್ಲಿನ ನಾಗೇಶ ಶಾಸ್ತ್ರಿ ನಗರದ ವೀರಶೈವ ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟ್ ಕಾಲೇಜಿನ ಮೌಲ್ಯಮಾಪನ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿದ್ದ ವಿವಿ ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ. ಎಲ್.ಆರ್.ನಾಯ್ಕ್, ಕಪ್ಪುಪಟ್ಟಿ ಧರಿಸಿ ಮೌಲ್ಯಮಾಪನ ಕಾರ್ಯದಲ್ಲಿ ನಿರತರಾಗಿದ್ದ ಅಧ್ಯಾಪಕರನ್ನು ಪ್ರಶ್ನಿಸಿದರು. ಕೂಡಲೇ ಒಕ್ಕೊರಲಿನಿಂದ ಉತ್ತರಿಸಿದ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ. ಬಿ.ಆರ್. ಮಂಜುನಾಥ್, ಪ್ರೊ. ಇಂದಿರಾ, ಟಿ. ಬಸವರಾಜ್, ಸಿ. ದೇವಣ್ಣ, ಡಾ. ಕೆ. ಬಸಪ್ಪ, 12 ಅಧ್ಯಾಪಕರ ವಿರುದ್ಧ ಕೈಗೊಂಡಿರುವ ಶಿಸ್ತಿನ ಕ್ರಮ ಕೈಬಿಡಬೇಕೆಂದು ವಿನಂತಿಸಿ ಬಳಿಕ ಮನವಿ ಸಲ್ಲಿಸಿದರು.
ಈ ಸಂದರ್ಭ ಕುಲಸಚಿವ ಎಲ್.ಆರ್. ನಾಯ್ಕ್ ಪ್ರತಿಕ್ರಿಯಿಸಿ, ಮನವಿ ಪತ್ರವನ್ನು ಉಪ ಕುಲಪತಿಗಳಿಗೆ ಸಲ್ಲಿಸಿ, ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದರಲ್ಲದೆ, ಅಧ್ಯಾಪಕರ ವಿರುದ್ಧ ಇದುವರೆಗೆ ಯಾವುದೇ ಕ್ರಮ ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ಕನ್ನಡ ಮತ್ತು ಇಂಗ್ಲಿಷ್ ಭಾಷಾ ವಿಭಾಗದ ಎಲ್ಲ ಮೌಲ್ಯಮಾಪಕರು ಹಾಜರಿದ್ದರು.