ಸುಳ್ಳು ಹೇಳುವಂತೆ ಬೆದರಿಕೆ: ವಿದ್ಯಾರ್ಥಿ ಅತಾಹರ್
ಬಳ್ಳಾರಿ: ಬಲವಂತವಾಗಿ ಶ್ರೀಲಕ್ಷ್ಮೀ ಅವರ ಮನೆಗೆ ಕರೆದೊಯ್ದು ಅಲ್ಲಿಯೇ ಬಿಟ್ಟು, ಇಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಹೇಳಬೇಕೆಂದು ಮುತ್ತು (ಸಂಸದ ಸಣ್ಣ ಫಕ್ಕೀರಪ್ಪ ಪುತ್ರ) ಕಡೆಯವರು ಬೆದರಿಕೆ ಹಾಕಿದ್ದರು ಎಂದು ವಿದ್ಯಾರ್ಥಿ ಅತಾಹರ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಆ ಮೂಲಕ ಪ್ರಕರಣ ಮತ್ತಷ್ಟು ಜಟಿಲತೆಯತ್ತ ಸಾಗಲು ಕಾರಣವಾಗಿದೆ. ಇತ್ತೀಚೆಗೆ ಕೋಟೆ ಪ್ರದೇಶದಲ್ಲಿ ಭಾಗ್ಯಮ್ಮ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಹೇಳಿ ಸಂಸದ ಸಣ್ಣಫಕ್ಕೀರಪ್ಪ ಅವರ ಪುತ್ರ ಸೇರಿದಂತೆ ಇತರರು ಭಾಗ್ಯಮ್ಮಳ ಮಗಳು ಶ್ರೀಲಕ್ಷ್ಮೀ, ಅವರ ಮನೆಗೆ ಬಂದಿದ್ದ ಸ್ನೇಹಿತ ಅತಾಹರ್ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ಅತಾಹರ್ ಭಯಗೊಂಡು, ವೇಶ್ಯಾವಾಟಿಕೆಗಾಗಿ ಬಂದಿರುವುದಾಗಿ ಹೇಳಿಕೆ ನೀಡಿದ್ದ. ಇದೀಗ ಪೊಲೀಸರ ಮುಂದೆ ತನ್ನನ್ನು ಬಲವಂತಾಗಿ ಕರೆದುಕೊಂಡು ಬಂದು, ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಹೇಳುವಂತೆ ಒತ್ತಾಯಿಸಿದ್ದರು ಎಂದು ಅತಾಹರ್ ಹೇಳಿದ್ದಾನೆ. ತನಿಖೆ ಕೈಗೊಂಡಿದ್ದು, ಘಟನೆಗೆ ಕಾರಣ, ವಾಸ್ತವತೆ ತಿಳಿಯಲು ಮುಂದಾಗಿದ್ದಾರೆ. ಅತಾಹರ್ನನ್ನು ಯಾರು ಕರೆದುಕೊಂಡು ಬಂದಿದ್ದರು? ಘಟನೆ ವಾಸ್ತವತೆ ಏನು? ಹಲ್ಲೆಗೆ ಕಾರಣಗಳೇನು ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.