ಪತ್ನಿ ಸಾವಿನ ಸುದ್ದಿ ಕೇಳಿ ಕೆರೆಗೆ ಹಾರಿದ ಪತಿ ಆತ್ಮಹತ್ಯೆ!
ಹೆಬ್ಬಳ್ಳಿ: ಪತ್ನಿಯ ಸಾವಿನ ಸುದ್ದಿ ಕೇಳಿ ಪತಿಯೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ. ಹೆಬ್ಬಳ್ಳಿ ಗ್ರಾಮದ ನೀಲವ್ವ ಬಡಿಗೇರ (67) ಅನಾರೋಗ್ಯದಿಂದ ಮೃತಪಟ್ಟಿದ್ದರು. ಈ ವಿಷಯ ತಿಳಿದ ಇವರ ಪತಿ ಈರಪ್ಪ ಬಡಿಗೇರ (73) ಅವರು ಅದೇ ಗ್ರಾಮದಲ್ಲಿದ್ದ ಹೆಗ್ಗೇರಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ನೌಕರನಾಗಿ ನಿವೃತ್ತರಾಗಿದ್ದ ಈರಪ್ಪ ಮತ್ತು ನೀಲವ್ವ ದಂಪತಿಗೆ ಮೂವರು ಪುತ್ರರು ಮತ್ತು ಓರ್ವ ಪುತ್ರಿ ಇದ್ದಾಳೆ. ಈ ಸಂಬಂಧ ಗ್ರಾಮೀಣ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣವೂ ದಾಖಲಾಗಿದೆ.