ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ನೀರು ನಿರ್ವಹಣೆ ವಿಫಲ, ಜೀವಜಲ ಪೋಲು

Mainashree
Updated On : 23 Dec 2013, 10:50 am

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಡಿ. 22
ಸರ್ಕಾರ ಕುಡಿಯುವ ನೀರಿನ ಯೋಜನೆಗಳಿಗೆ ಕೋಟ್ಯಂತರ ರು.ಗಳ ವೆಚ್ಚ ಮಾಡುತ್ತಿದೆ. ಆದರೆ ಗ್ರಾಮ ಪಂಚಾಯಿತಿ ಆಡಳಿತದ ನಿರ್ವಹಣೆ ವಿಫಲಗೊಂಡು ಶುದ್ಧ ಜೀವಜಲ ನಿತ್ಯ ಪೋಲಾಗುತ್ತಿದೆ.
ಹೌದು, ತುಂಗಭದ್ರಾ ನದಿಯಿಂದ ಹಿರೇಹಡಗಲಿ- ಮಾಗಳ ಕುಡಿಯುವ ನೀರಿನ ಯೋಜನೆ ರಾಜೀವಗಾಂಧಿ ಸಬ್‌ಮಿಷನ್ ಯೋಜನೆಯಡಿ ಅಂದಿನ ಶಾಸಕ ನಂದಿಹಳ್ಳಿ ಹಾಲಪ್ಪ ಅವಧಿಯಲ್ಲಿ ಮಂಜೂರಾಗಿತ್ತು. ತದನಂತರ 2002ರಲ್ಲಿ ಯೋಜನೆ ಉದ್ಘಾಟನೆಯಾಗಿತ್ತು. ಆದರೆ ಅಂದಿನಿಂದ ಇಂದಿನವರೆಗೂ ಸಮರ್ಪಕವಾಗಿ ಎರಡು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ.
ತಾಲೂಕಿನ ಹಿರೇಹಡಗಲಿಯಲ್ಲಿ 16 ಸಾವಿರ, ಮಾಗಳದಲ್ಲಿ 10 ಸಾವಿರ ಸೇರಿದಂತೆ ಒಟ್ಟು 26 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಎರಡು ದೊಡ್ಡ ಗ್ರಾಮಗಳ ಜನತೆಗೆ ಇನ್ನು ಶುದ್ಧ ಕುಡಿಯುವ ನೀರು ಸಿಗುತ್ತದೆ ಎನ್ನುವಷ್ಟರಲ್ಲೆ ಪೈಪ್‌ಲೈನ್ ಕಾಮಗಾರಿ ಕಳಪೆಯಾಗಿದ್ದು, ಇಂದಿಗೂ ಸಾಕಷ್ಟು ಕಡೆಗಳಲ್ಲಿ ಪೈಪ್‌ಲೈನ್ ಸೋರಿಕೆಯಾಗಿ ನೀರು ಪೋಲಾಗುತ್ತಿದೆ. ಈ ಕುರಿತು ಪಂಚಾಯತ್‌ರಾಜ್ ಇಲಾಖೆ ಅನೇಕ ಬಾರಿ ಪೈಪ್‌ಲೈನ್ ಕಾಮಗಾರಿಯನ್ನು ರಿಪೇರಿ ಮಾಡಿದ್ದರೂ ಕಾಮಗಾರಿ ಕಳಪೆಯಾಗಿದೆ ಎಂಬ ದೂರುಗಳಿವೆ.
ಅವೈಜ್ಞಾನಿಕ ಕಾಮಗಾರಿ: ಯೋಜನೆಯ ಪೈಪ್‌ಲೈನ್ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಬತ್ತದ ಗದ್ದೆ ಹಾಗೂ ಚರಂಡಿಗಳಲ್ಲಿ ಪೈಪ್‌ಲೈನ್ ಮಾಡಿದ್ದಾರೆ. ಅನೇಕ ಕಡೆಗಳಲ್ಲಿ ಸೋರಿಕೆಯಾಗುತ್ತಿದ್ದು, ಬತ್ತಕ್ಕೆ ಸಿಂಪರಣೆ ಮಾಡುವ ಔಷಧಿ ನೀರು ಹಾಗೂ ಚರಂಡಿ ನೀರು ಪೈಪ್‌ಲೈನ್‌ನಲ್ಲಿ ಮಿಶ್ರಣಗೊಳ್ಳುತ್ತಿದೆ. ಅಲ್ಲದೆ ರೈತರ ಜಮೀನುಗಳಲ್ಲಿ ನೀರು ಸೋರಿಕೆಯಾಗುವುದರಿಂದ ಬೆಳೆ ನಷ್ಟವಾಗಿದೆ. ರೈತರ ಕಣಗಳಲ್ಲಿ ಜಾನುವಾರುಗಳಿಗೆ ಸಂಗ್ರಹಿಸಿರುವ ಮೇವು ನಷ್ಟವಾಗಿದೆ. ಇಷ್ಟಾದರೂ ಅಧಿಕಾರಿಗಳು ಮಾತ್ರ ಕ್ರಮ ಕೈಗೊಂಡಿಲ್ಲ.
ಪಂಚಾಯತ್‌ರಾಜ್ ಇಲಾಖೆಯು ಯೋಜನೆಯನ್ನು ಈಗಾಗಲೆ ಹಿರೇಹಡಗಲಿ- ಮಾಗಳ ಗ್ರಾಪಂಗಳಿಗೆ ಹಸ್ತಾಂತರ ಮಾಡಿ 4 ವರ್ಷ ಕಳೆದಿವೆ. ಗ್ರಾಪಂ ನೀರಿನ ಯೋಜನೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲವೆಂಬ ದೂರು ಇದೆ. ಈ ಹಿನ್ನೆಲೆಯಲ್ಲಿ ಜನರಿಗೆ ಸಮರ್ಪಕ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಸರ್ಕಾರ ರಾಜ್ಯದ ಎಲ್ಲ ಕುಡಿಯುವ ನೀರಿನ ಯೋಜನೆಗಳನ್ನು ಖಾಸಗಿ ಸಹಭಾಗಿತ್ವಕ್ಕೆ ವಹಿಸಲು ಟೆಂಡರ್ ಕರೆದಿದೆ.
ಹಿರೇಹಡಗಲಿ ಗ್ರಾಮಕ್ಕೆ ಪೈಪ್‌ಲೈನ್ ಮಾಡಲು ಟೆಂಡರ್ ಪಡೆದಿರುವ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿದ್ದಾರಲ್ಲ ಎಂಬ ಪ್ರಶ್ನೆಗೆ, ಪೈಪ್‌ಲೈನ್ ಅಂದ ಮೇಲೆ ಕೆಲ ತೊಂದರೆ ಆಗುತ್ತವೆ, ಈ ಹಿಂದೆ ಆಗಿರುವ ಪುರಾಣ ತಮಗೆ ಗೊತ್ತಿಲ್ಲ. ಸದ್ಯದ ಮಾಹಿತಿ ಮಾತ್ರ ಹೇಳಬಲ್ಲೆ ಎಂಬ ಬೇಜವಾಬ್ದಾರಿ ಉತ್ತರ ನೀಡುತ್ತಾರೆ ಎಇಇ ಮಹೇಶಪ್ಪ.
ದುರ್ನಾತ ಬೀರುವ ನೀರು: ಕುಡಿಯುವ ನೀರಿನ ಯೋಜನೆ ಇದ್ದರೂ ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಮಾಗಳ ಗ್ರಾಮಕ್ಕೂ ಸರಿಯಾಗಿ ಶುದ್ಧ ನೀರು ಪೂರೈಕೆಯಾಗುತ್ತಿಲ್ಲ. ಕೆಲ ವಾರ್ಡ್‌ಗಳಿಗೆ ಮಾತ್ರ ಸೀಮಿತವಾಗಿದೆ. ಇದರ ಜತೆಗೆ ಕೊಳವೆ ಬಾವಿ ಸೇರಿದಂತೆ ಇನ್ನು ಮೂರು ಕುಡಿಯುವ ನೀರಿನ ಯೋಜನೆಗಳಿದ್ದರೂ 3-4 ದಿನಗಳಿಗೊಮ್ಮೆ ನೀರು ಬಿಡುವ ಪರಿಪಾಠ ಗ್ರಾಪಂನಲ್ಲಿದೆ. ಶುದ್ಧ ನೀರು ಬಿಡುಗಡೆ ಮಾಡುವ ದೊಡ್ಡದಾದ ಎರಡು ತೊಟ್ಟಿಗಳಲ್ಲಿ ಸಾಕಷ್ಟು ಪಾಚಿ ಬೆಳೆದು ನೀರು ದುರ್ನಾತಗೊಂಡಿದೆ. ಇದರಲ್ಲಿ ಹುಳುಗಳಾಗಿದ್ದು, ತೊಟ್ಟಿಗಳಿಗೆ ಸರಿಯಾಗಿ ಮರಳು ಹಾಕದೆ ಮಣ್ಣು ಮಿಶ್ರಿತ ಮರಳು ಹಾಕಿದ್ದಾರೆ. ಇದರಿಂದ ಅಶುದ್ಧ ನೀರೆ ಜನರಿಗೆ ದೊರೆಯುತ್ತಿದೆ. ಇಂತಹ ನೀರು ಕುಡಿದ ಜನರಿಗೆ ನೆಗಡಿ, ಕೆಮ್ಮ ಸೇರಿದಂತೆ ಅನೇಕ ಸಾಂಕ್ರಾಮಿಕ ರೋಗಗಳಿಂದ ಬಳಲುವ ಪರಿಸ್ಥಿತಿ ಜನರಿಗೆ ಎದುರಾಗಿದೆ.
ತುಂಗಭದ್ರೆ ತಟದಲ್ಲಿದ್ದರೂ ಸಮರ್ಪಕ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಗ್ರಾಪಂ ನಿರ್ವಹಣೆ ವಿಫಲವಾಗಿದೆ. ಯೋಜನೆ ನೀರು ರಸ್ತೆ ಪಕ್ಕದಲ್ಲಿ ಪೋಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನ ಹರಿಸಿಲ್ಲ. ಜನಪ್ರತಿನಿಧಿಗಳು ಕೇವಲ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಮಾಡಲು ನಾ ಮುಂದೆ, ತಾ ಮುಂದೆ ಎನ್ನುತ್ತಾರೆ.
ಜನರಿಂದ ಆಯ್ಕೆಯಾಗಿರುವ ಗ್ರಾಪಂ ಸದಸ್ಯರ ಜನ ಸೇವೆ ಇದೇನಾ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.

ಚಂದ್ರು ಕೊಂಚಿಗೇರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement