ರಾಮಾನುಜಂ ಜನ್ಮದಿನ: ದೇಣಿಗೆ
ಬಳ್ಳಾರಿ: ತಾಲೂಕಿನ ಶ್ರೀಧರಗಡ್ಡೆ ಗ್ರಾಮದ ಶ್ರೀಗುರು ಸಂಗನಬಸವೇಶ್ವರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಧ್ರದ ಸೂಪರ್ ಸ್ಟಾರ್ ಕೃಷ್ಣ-ಮಹೇಶ್ ಬಾಬು ಅಭಿಮಾನಿಗಳ ಸಂಘದ ವತಿಯಿಂದ ಭಾರತದ ಮೇರು ಗಣಿತಜ್ಞ ಶ್ರೀನಿವಾಸ ರಾಮಾನುಜಂ ಅವರ 127ನೇ ಜನ್ಮದಿನೋತ್ಸವ ಆಚರಿಸಲಾಯಿತು.
ಕರ್ನೂಲು ಜಿಲ್ಲೆಯ ಹೊಳಲಗುಂದಿ ಗ್ರಾಮದ ಸೂಪರ್ ಸ್ಟಾರ್ ಕೃಷ್ಣ-ಮಹೇಶ್ ಬಾಬು ಅಭಿಮಾನಿಗಳ ಸಂಘದ ವತಿಯಿಂದ ಜನ್ಮದಿನೋತ್ಸವದ ಅಂಗವಾಗಿ ಶಾಲೆಗೆ ರು. 5,360 ಮೌಲ್ಯದ ಸೂಕ್ಷ್ಮದರ್ಶಕ ಯಂತ್ರ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ವಿವಿಧ ಮಾದರಿಗಳು, ಕುರಾನ್, ಬೈಬಲ್, ಬಸವ ವಚನಾಮೃತ ಹಾಗೂ ವಿವಿಧ ಗಣಿತದ ಪುಸ್ತಕಗಳನ್ನು ಸಂಘದ ಸಿ. ಹೇಮರೆಡ್ಡಿ, ಸಿ. ಚರಣ್, ಶ್ರೀಧರಗಡ್ಡೆ ಸಿದ್ದಬಸಪ್ಪ ಅವರು ದೇಣಿಗೆಯಾಗಿ ನೀಡಿದರು. ದೇಣಿಗೆ ನೀಡಿ ಮಾತನಾಡಿದ ಶ್ರೀಧರಗಡ್ಡೆ ಸಿದ್ದಬಸಪ್ಪ, ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಬೇಕಾದರೆ ವಿಜ್ಞಾನದ ಉಪಕರಣಗಳು, ಪುಸ್ತಕಗಳು ಅವಶ್ಯಕ. ಆದ್ದರಿಂದ ಸಂಘದ ವತಿಯಿಂದ ಪ್ರತಿ ತಿಂಗಳು ಅಂತಹ ವಸ್ತುಗಳನ್ನು ಶಾಲೆಗೆ ದೇಣಿಗೆ ನೀಡುತ್ತಿರುವುದಾಗಿ ತಿಳಿಸಿದರು.
ಶಾಲಾ ಆಡಳಿತ ಮಂಡಳಿ ಮುಖ್ಯಸ್ಥ ಮೇದಾರ ಹನುಮಪ್ಪ ಪ್ರಾಸ್ತಾವಿಕ ಮಾತನಾಡಿದರು. ಶ್ರೀ ಬಸವೇಶ್ವರ ಯುವ ಕಲಾ ಸಂಘದ ಕೊಟ್ರೇಶ್, ಗದುಗಿನ ಶ್ರೀ ಪಂಡಿತ ಪುಟ್ಟರಾಜ ಗವಾಯಿಗಳ ನಾಟ್ಯ ಸಂಘದ ಕಲಾ ಬಳಗದವರು, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ಎ. ಬಸವರಾಜ್ ಕಾರ್ಯಕ್ರಮ ನಿರ್ವಹಿಸಿದರು.