ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಎಸ್ಮಾ ಖಂಡಿಸಿ ವಿಧಾನಸೌಧ ಮುಂದೆ ಧರಣಿ

Mainashree
Updated On : 24 Dec 2013, 10:48 am

ಬಳ್ಳಾರಿ: ರಾಜ್ಯ ಸರ್ಕಾರವು ಜಾರಿಗೆ ತರುತ್ತಿರುವ ಕರಾಳ ಎಸ್ಮಾ ಕಾಯ್ದೆ ವಿರೋಧಿಸಿ ಹಾಗೂ ಕಾರ್ಮಿಕರಿಗೆ ಕನಿಷ್ಠ ವೇತನ, ಸಾಮಾಜಿಕ ಭದ್ರತೆ, ಗ್ಯಾರಂಟಿ ಪಿಂಚಣಿ ಯೋಜನೆಯ ಜಾರಿಗೆ ಆಗ್ರಹಿಸಿ, ಮುಂದಿನ ಜ. 23ರಂದು ಬೆಂಗಳೂರಿನ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಪ್ರಸನ್ನಕುಮಾರ್ ತಿಳಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2004ರಲ್ಲಿ ಲ್ಯಾಪ್ಸ್ ಆಗಿದ್ದ ಎಸ್ಮಾ ಕಾಯ್ದೆ ಇದೀಗ 2013ರ ಅಧಿವೇಶನದಲ್ಲಿ ಅಂಗೀಕರಿಸಿದೆ. ಆದರೆ, 9 ವರ್ಷಗಳ ಮಧ್ಯಾವಧಿಯಲ್ಲಿ ಕಾರ್ಮಿಕರಿಂದ ಅಂತಹ ಯಾವುದೇ ಘಟನೆಗಳು ನಡೆದಿಲ್ಲ. ಒಮ್ಮೆ ನಡೆದಿದ್ದರೂ, ಹೈಕೋರ್ಟ್ ನೆರವಿನಿಂದ ಇತ್ಯರ್ಥವಾಗಿದೆ. ಆದರೆ, ಈಗ ಈ ಕಾಯ್ದೆಯ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ ಅವರು, ಕಾರ್ಮಿಕರಿಗೆ ಯಾವುದೇ ಮುನ್ಸೂಚನೆಯಿಲ್ಲದೇ, ಬಂಧಿಸುವ (ಅರೆಸ್ಟ್ ವಿತೌಟ್ ವಾರೆಂಟ್) ಅವಕಾಶ ಕಲ್ಪಿಸಿದ್ದು, ಇದು ಕಾರ್ಮಿಕರು- ಉದ್ಯೋಗಿಗಳ ಪಾಲಿಗೆ ಅತ್ಯಂತ ಕರಾಳ ಮಸೂದೆ. ಇದು ಸರ್ಕಾರದ ಜನವಿರೋಧಿ, ಕಾರ್ಮಿಕ ವಿರೋಧಿಯಾಗಿದೆ ಎಂದರು.
ಪ್ರತಿಭಟನೆಯಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಕಾರ್ಮಿಕರು, ಸಾರ್ವಜನಿಕರು ಭಾಗಿಯಾಗಲಿದ್ದು, ಕರೆತರುವ ನಿಟ್ಟಿನಲ್ಲಿ ಜ.5 ರಿಂದ 20ರ ವರೆಗೆ ರಾಜ್ಯಾದ್ಯಂತ ಪ್ರತಿ ತಾಲೂಕುಗಳ ವಾರ್ಡ್‌ಗಳಲ್ಲಿ ಪ್ರಚಾರಾಂದೋಲನ ನಡೆಸಿ, ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ನಿಜಬಣ್ಣ ಬಯಲು: ಜನಪರ ಯೋಜನೆಗಳನ್ನು ಘೋಷಣೆ ಮಾಡಿ ಅಧಿಕಾರ ಸ್ವೀಕಾರ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತದ ನಿಜಬಣ್ಣ ಈಗೀಗ ಬಹಿರಂಗಗೊಳ್ಳುತ್ತಿದೆ. ಇಡೀ ದೇಶದಲ್ಲಿ ಅಗತ್ಯವಸ್ತುಗಳ ಮೇಲೆ ಅತಿ ಹೆಚ್ಚು ಬೆಲೆ ಏರಿಕೆ ಇರುವುದು ರಾಜ್ಯದಲ್ಲಾಗಿದ್ದು, ಸಿದ್ದರಾಮಯ್ಯನವರ ಬಜೆಟ್‌ನಲ್ಲಿ  ಮಾರಾಟ, ಸೇವಾ ತೆರಿಗೆ, ಎಕ್ಸೈಜ್ ತೆರಿಗೆಗಳ ಏರಿಕೆಯ ಪರಿಣಾಮವೇ ಈ ಬೆಲೆ ಏರಿಕೆಯಾಗಿದೆ. ಇದರಿಂದ ಸೇವಾಧಾರಿತ ಕಾರ್ಮಿಕರು ತೀವ್ರ ಸಂಕಷ್ಟ ಪರಿಸ್ಥಿತಿ ಎದುರಿಸುವಂತಾಗಿದೆ ಎಂದರು.
ಕಬ್ಬಿಗೆ ಬೆಂಬಲ ಬೆಲೆಗಾಗಿ ರೈತರು ಹೋರಾಟಕ್ಕಿಳಿದರೂ, ಟನ್ ಕಬ್ಬಿಗೆ ಕೇವಲ ರು. 100-200 ಗಳನ್ನು ಮಾತ್ರ ಭಿಕ್ಷೆಯಂತೆ ಹೆಚ್ಚಳ ಮಾಡುತ್ತಿರುವ ಸರ್ಕಾರ, ಶೇ.20ರಷ್ಟು ಸಕ್ಕರೆ ಬಳಸುವ ಸಾರ್ವಜನಿಕರಿಗೂ ಮತ್ತು ಶೇ. 80ರಷ್ಟು ಚಾಕೋಲೇಟ್, ಬಿಸ್ಕೆಟ್‌ಗಳನ್ನು ತಯಾರಿಸಲು ಬಳಕೆ ಮಾಡಿಕೊಳ್ಳುವ ಬಹುರಾಷ್ಟ್ರೀಯ ಕಂಪನಿಗಳಿಗೂ ಒಂದೇ ರೀತಿಯ ತೆರಿಗೆ ವಿಧಿಸಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ ಎಂದ ಅವರು, ಸಕ್ಕರೆ ಕಾರ್ಖಾನೆ ಹಾಗೂ ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಮಾತನಾಡಿ ತೆರಿಗೆ ಹೆಚ್ಚಿಸಿ, ಕಬ್ಬು ಬೆಳೆಗಾರರಿಗೆ ಉತ್ತಮ ಬೆಲೆ ನೀಡಬಹುದು ಎಂದು ತಿಳಿಸಿದರು.
ಕಾರ್ಮಿಕರಿಂದ ಸಂಗ್ರಹಗೊಂಡಿದ್ದ ರು. 1200 ಕೋಟಿ ಸೆಸ್ ಹಣವನ್ನು ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ್ ನಾಯ್ಕ್, ಕಾರ್ಮಿಕರಿಗಾಗಿ ಕಲ್ಯಾಣಮಂಟಪ ಕಟ್ಟಲು ಹೋಗಿ ದುರ್ಬಳಕೆ ಮಾಡಲು ಹೊರಟಿದ್ದಾರೆ. ರಾಜ್ಯದಲ್ಲಿ 15 ಲಕ್ಷಕ್ಕೂ ಅಧಿಕ ಕಾರ್ಮಿಕರಿದ್ದರೆ, 2 ಲಕ್ಷ ಜನರು ನೋಂದಣಿ ಮಾಡಿಸಿದ್ದು, ನಿಜವಾದ ಕಾರ್ಮಿಕರನ್ನು ಗುರುತಿಸುವ ನಿಟ್ಟಿನಲ್ಲಿ ಸೆಸ್ ಹಣವನ್ನು ಸಿಬ್ಬಂದಿ ನೇಮಕಕ್ಕೆ ಬಳಕೆಯಾಗಲಿ. ಈ ಎಲ್ಲ ವಿಷಯಗಳ ಕುರಿತು ಜ. 23ರಂದು ಬೆಂಗಳೂರಿನಲ್ಲಿ ಬೃಹತ್ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಸಿಐಟಿಯು ಜಿಲ್ಲಾಧ್ಯಕ್ಷ ಆರ್.ಎಸ್. ಬಸವರಾಜ್, ಕಾರ್ಯದರ್ಶಿ ಸತ್ಯಬಾಬು, ಹೊಸಪೇಟೆ ತಾಲೂಕು ಅಧ್ಯಕ್ಷ ಭಾಸ್ಕರ್‌ರಾವ್, ಹ.ಬೊ.ಹಳ್ಳಿ ತಾಲೂಕು ಅಧ್ಯಕ್ಷರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement